ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಹಿಳಾ ಸುರಕ್ಷತೆಗಾಗಿ ‘ಸುರಕ್ಷಾ ದ್ವೀಪ’ (ಎಸ್ಒಎಸ್) ಬೂತ್‌ಗಳನ್ನು ಪೊಲೀಸರು ತೆರೆದಿದ್ದಾರೆ. ನಗರದ ಪ್ರಮುಖ 30 ಸ್ಥಳಗಳಲ್ಲಿ ಎಸ್ಒಎಸ್ ಬೂತ್‌ಗಳನ್ನು ನಿರ್ಮಾಣ ಮಾಡಿದ್ದಾರೆ.
ಮೊದಲ ಹಂತದಲ್ಲಿ ಬಿಬಿಎಂಪಿ ನೆರವಿನೊಂದಿಗೆ 30 ಬೂತ್ ಗಳನ್ನು ತೆರೆಯಲಾಗಿದೆ. ಇದಕ್ಕಾಗಿ ನಿರ್ಭಯಾ ಫಂಡ್ಅನ್ನು ಬಳಸಲಾಗಿದೆ. ಎರಡನೇ ಹಂತದಲ್ಲಿ ಸ್ಲಂ ಪ್ರದೇಶಗಳು, ಮಾಲ್ ಗಳು ಹಾಗೂ ಐಟಿ ಕಂಪನಿಗಳಿರುವ ಪ್ರದೇಶದಲ್ಲಿ ಎಸ್ಒಎಸ್ ಬೂತ್ ಗಳನ್ನು ತೆರೆಯಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಮಸ್ಯೆ ಸಮಯದಲ್ಲಿ ಎಸ್ಒಎಸ್ ಬೂತ್ ಬಳಿ ಬಂದು ಎಮರ್ಜೆನ್ಸಿ ಬಟನ್ ಒತ್ತಬಹುದು ಅಥವಾ ಕರೆ ಮಾಡಬಹುದು. ಕೂಡಲೇ ಮಹಿಳಾ ಪೊಲೀಸ್ ಕಂಟ್ರೋಲ್ ರೂಮ್ ಕರೆ ಸ್ವೀಕರಿಸುತ್ತದೆ. ಕರೆ ಸ್ವೀಕರಿಸಿದ ಹತ್ತೇ ನಿಮಿಷದಲ್ಲಿ ಪೊಲೀಸರು ಸ್ಥಳಕ್ಕೆ ಹಾಜರಿರುತ್ತಾರೆ.
ಅಲ್ಲದೆ, ಬೂತ್ ಬಳಿ ಸಿಸಿ ಕ್ಯಾಮೆರಾಗಳೂ ಇದ್ದು, ಅವು ಬಟನ್ ಒತ್ತಿದ ಕೂಡ ಬೂತ್ ನ ಸುತ್ತಲ ಪ್ರದೇಶವನ್ನು ಸೆರೆಹಿಡಿಯಲಾರಂಭಿಸುತ್ತವೆ. ಆ ಸಿಸಿ ಕ್ಯಾಮೆರಾಗಳ ಮೂಲಕ ಮೂಲಕ ಕರೆ ಮಾಡಿದವರನ್ನು ಪೊಲೀಸರು ಗಮಿಸುತ್ತಾರೆ ಮತ್ತು ಸ್ಥಳಕ್ಕೆ ಧಾವಿಸಿ ಮಹಿಳೆಯರಿಗೆ ನೆರವು ನೀಡುತ್ತಾರೆ. ಜೊತೆಗೆ, ಕ್ಯಾಮೆರಾವು ರಿಂಗಣಿಸಲು ಪ್ರಾರಂಭಿಸುವ ಸೈರನ್ ಅನ್ನು ಸಹ ಹೊಂದಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿನ ರೆಸಿಡೆನ್ಶಿಯಲ್ ಸೊಸೈಟಿಯಲ್ಲೊಂದು ತಾರತಮ್ಯ, ಅಸ್ಪೃಶ್ಯತೆ ಆಚರಣೆಯ ಪೋಸ್ಟರ್: ಜಾಲತಾಣದಲ್ಲಿ ವೈರಲ್
“ಕರೆ ಬಂದ ತಕ್ಷಣ ಎಷ್ಟು ಸಾಧ್ಯವೋ ಅಷ್ಟು ಬೇಗ ಸ್ಥಳಕ್ಕೆ ಧಾವಿಸುತ್ತೇವೆ. ಕ್ಯಾಮೆರಾ ಮೂಲಕ ಸ್ಥಳದಲ್ಲಿ ಏನಾಗುತ್ತಿದೆ ಎಂಬುದನ್ನು ಕಂಟ್ರೋಲ್ ರೂಮ್ ಗಮನಿಸುತ್ತಿರುತ್ತದೆ. ಮಹಿಳೆಯರಿಗೆ ತುರ್ತು ನೆರವು ನೀಡಲು ಗಸ್ತು ವಾಹನಗಳ ವ್ಯವಸ್ಥೆ ಮಾಡಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತಮ ಯೋಜನೆ. ಯಶಸ್ವಿಯಾಗಲಿ.