ಬೆಲೆ ಏರಿಕೆಗಳ ಬಿಸಿ ಸರಣಿಗೆ ತುತ್ತಾಗಿರುವ ಜನತೆಗೆ ಈಗ ಮತ್ತೆ ನಂದಿನ ಹಾಲಿನ ಬೆಲೆ ಏರಿಕೆ ಬಿಸಿ ತಟ್ಟಲಿದೆ. ನಂದಿನಿ ಹಾಲಿನ ದರವನ್ನು ಲೀಟರ್‌ಗೆ 4 ರೂಪಾಯಿ ಏರಿಕೆ ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ರಾಜ್ಯದೊಳಗೆ ಸದ್ಯದ ಮಾರುಕಟ್ಟೆಯಲ್ಲಿ ‘ನಂದಿನಿ’ ಹಾಲು ಲೀಟರ್‌ಗೆ 42 ರೂ.ಗೆ ಮಾರಾಟವಾಗುತ್ತಿದ್ದ ಹಾಲು ಇದೀಗ 46 ರೂ.ಗೆ ಮಾರಾಟವಾಗಲಿದೆ. ಉಳಿದಂತೆ ‘ತಿರುಮಲ ಹಾಲು’ 52 ರೂ., ಹೆರಿಟೇಜ್ 50 ರೂ., ದೊಡ್ಲ 50 ರೂ., ಜೆರ್ಸಿ 50 ರೂ., ಅರೋಕ್ಯ 50 ರೂ. ಹಾಗೂ ಅಮುಲ್ 54 ರೂ.ಗೆ ಮಾರಾಟವಾಗುತ್ತಿದೆ.
ಹಾಲಿನ ಬೆಲೆಯನ್ನು ಆಗಸ್ಟ್ 2023 ರಲ್ಲಿ 3 ರೂ. ಹೆಚ್ಚಿಸಿದ್ದರಿಂದ ಲೀಟರ್‌ಗೆ 39 ರೂ.ನಿಂದ 42 ರೂ.ಗೆ ಹೆಚ್ಚಳವಾಯಿತು. ಜೂನ್ 2024 ರಲ್ಲಿ ಮತ್ತೆ 2 ರೂ. ಹೆಚ್ಚಿಸಿ, ಹೆಚ್ಚುವರಿಯಾಗಿ 50 ಎಂ.ಎಲ್. ಹಾಲು ನೀಡಲಾಯಿತು.
ಇತ್ತೀಚೆಗಷ್ಟೇ ರಾಜ್ಯದಲ್ಲಿ ಸರ್ಕಾರದಿಂದ ಬಸ್ ಪ್ರಯಾಣ ದರ ಏರಿದೆ. ಜೊತೆಗೆ ಮೆಟ್ರೋ ಪ್ರಯಾಣ ದರ ಕೂಡ ಏರಿದೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರ ಹಾಲಿನ ಬೆಲೆ ಏರಿಕೆ ಮಾಡಿದ್ದಲ್ಲಿ ಜನತೆಯ ಪ್ರತಿಭಟನೆಗೂ ಇದು ಕಾರಣವಾಗಬಹುದು. ಅಷ್ಟೇ ಅಲ್ಲದೇ ಈಗಾಗಲೇ ಕನ್ನಡಿಗರ ಹೆಮ್ಮೆಯ ಹಾಲಿನ ಬ್ರ್ಯಾಂಡ್ ‘ನಂದಿನಿ‘ ಮೇಲೆ ಗುಜರಾತ್‌ನ ‘ಅಮುಲ್’ ಆಕ್ರಮಣಕಾರಿ ದರ ಸಮರ ಸಾರಿದ್ದು, ರಾಜ್ಯದಲ್ಲಿ ಮೊಸರಿನ ದರಗಳನ್ನು ತಗ್ಗಿಸಿ ‘ನಂದಿನಿ’ಗೆ ನೇರ ಸವಾಲೆಸೆದಿದೆ. ‘ನಂದಿನಿ’ ಹಾಲಿನ ದರ ಏರಿಕೆ ಕೇವಲ ಹಾಲಿಗಷ್ಟೇ ಸಿಮೀತವಾಗುವುದಿಲ್ಲ. ಮುಂದಿನ ದಿನಗಳಲ್ಲಿ ನಂದಿನಿ ಮೊಸರು ಸೇರಿ ಉಳಿದ ಉತ್ಪನ್ನಗಳಲ್ಲೂ ಸಹಜವಾಗಿ ದರ ಏರಿಕೆ ಕಾಣಲಿದೆ.
ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಪ್ರತಿ ಲೀಟರ್ ಹಾಲಿಗೆ 5 ರೂ. ದರ ಏರಿಸಬೇಕು ಎಂಬ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತದ ಅಧ್ಯಕ್ಷರು ಮತ್ತು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರ ಹಾಗೂ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಕಾವೇರಿಯಲ್ಲಿ ಇತ್ತೀಚೆಗೆ ಸಭೆ ನಡೆಸಿ, “ಹಾಲು ಒಕ್ಕೂಟಗಳು ಇರುವುದು ರೈತರಿಗೆ ಅನುಕೂಲ ಮಾಡುವುದಕ್ಕೆ ಮಾತ್ರ, ಲಾಭ ಮಾಡುವುದಕ್ಕಲ್ಲ” ಎಂದಿದ್ದರು.
“ಹಾಲಿನದರ ಹೆಚ್ಚಳ ಮಾಡಿದರೆ ಮೊತ್ತವನ್ನು ಸಂಪೂರ್ಣವಾಗಿ ರೈತರಿಗೆ ವರ್ಗಾವಣೆಯಾಗಬೇಕು ಎಂಬುವುದು ಸರ್ಕಾರದ ದೃಢ ನಿಲುವು. ಹಾಲು ಒಕ್ಕೂಟಗಳು ಖರ್ಚು ವೆಚ್ಚ ಕಡಿಮೆ ಮಾಡಬೇಕು. ಪಾರದರ್ಶಕತೆಯನ್ನು ಪಾಲಿಸಬೇಕು. ಒಕ್ಕೂಟಗಳು ಅಗತ್ಯಕ್ಕಿಂತ ಹೆಚ್ಚು ಜನರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಬಾರದು. ಇದರಿಂದಾಗಿಯೇ ವೆಚ್ಚ ಹೆಚ್ಚಾಗುತ್ತಿದೆ. ಅನಗತ್ಯ ಆಡಳಿತಾತ್ಮಕ ವೆಚ್ಚಗಳಿಂದಾಗಿಯೇ ಕೆಲವು ಒಕ್ಕೂಟಗಳು ನಷ್ಟ ಅನುಭವಿಸುವಂತಾಗಿದೆ” ಎಂದು ಸಿಎಂ ಹೇಳಿದ್ದರು.
“ಹಾಲು ಉತ್ಪಾದನೆ ಮತ್ತು ಸಂಸ್ಕರಣಾ ವೆಚ್ಚಗಳನ್ನು ಪರಿಗಣಿಸಿ ರಾಜ್ಯದಲ್ಲಿ ಹೈನೋದ್ಯಮಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ದರ ಪರಿಷ್ಕರಣೆ ಮಾಡಲಾಗಿದೆ. ದರ ಪರಿಷ್ಕರಣೆಯ ಮೊತ್ತವು ರಾಜ್ಯದ ಹಾಲು ಉತ್ಪಾದಕರಿಗೆ ನೇರವಾಗಿ ತಲುಪುವಂತೆ ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆ 500 ಮಿ.ಲೀಟರ್ ಪೊಟ್ಟಣದಲ್ಲಿ 50 ಮಿ.ಲೀಟರ್ ಹೆಚ್ಚುವರಿ ಹಾಲು ನೀಡಿ ₹2 ಏರಿಕೆ ಮಾಡಲಾಗಿತ್ತು. ಈಗ ಅದನ್ನು ಹಿಂಪಡೆಯಲಾಗಿದೆ. ಬೆಲೆ ಹೆಚ್ಚಾದರೂ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕಡಿಮೆ ಇದೆ” ಎಂದು ಸರ್ಕಾರ ಹೇಳಿದೆ.
“ನಂದಿನಿಯ ಎಲ್ಲಾ ಬ್ರಾಂಡ್ ಹಾಲಿನ ಬೆಲೆಯಲ್ಲೂ ₹4ರಷ್ಟು ಏರಿಕೆಯಾಗಲಿದೆ. ಹೆಚ್ಚುವರಿ ಬೆಲೆಯನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸಲಾಗುತ್ತದೆ” ಎಂದು ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ.
ಈಗ ರೈತರಿಂದ ಪ್ರತಿ ಲೀಟರ್ ಹಾಲನ್ನು ಗುಣಮಟ್ಟದ ಆಧಾರದ ಮೇಲೆ 31 ರೂ.ದಿಂದ 34 ರೂ. ದರಗಳಲ್ಲಿ ಕೆಎಂಎಫ್ ಖರೀದಿ ಮಾಡುತ್ತಿದೆ. ಪ್ರತ್ಯೇಕವಾಗಿ 5 ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಬೇಸಿಗೆ ಕಾರಣದಿಂದ 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದ ಜಾಗದಲ್ಲಿ ಈಗ 80 ಲಕ್ಷ ಲೀಟರ್ ಹಾಲು ನಿತ್ಯ ಉತ್ಪಾದನೆಯಾಗುತ್ತಿದೆ.