ಹನಿಟ್ರ್ಯಾಪ್‌ ಪ್ರಕರಣ | ತಂದೆ ಮಗ ಇಬ್ಬರೂ ವಿಪಕ್ಷಗಳ ಕೈಗೆ ಬಡಿಗೆ ಕೊಟ್ಟರೇ?

Date:

Advertisements

ಏನೇ ಆದರೂ ಕಾಂಗ್ರೆಸ್‌ ಪಕ್ಷದ ನಾಯಕರೇ ಅವರದೇ ಪಕ್ಷದ ನಾಯಕರಿಗೇ ಹನಿಟ್ರ್ಯಾಪ್‌ ಮಾಡಿಸಿದ್ದಾರೆ ಎಂದು ಆರೋಪ ಮಾಡಿರುವುದು, ಅದರಿಂದಾಗಿ ಪಕ್ಷಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಮುಜುಗರವಾಗಿರುವುದಂತು ನಿಜ. ಈ ಕಳಂಕವನ್ನು ಕಳೆಯಬೇಕಿದ್ದರೆ ತನಿಖೆ ನಡೆಯಲೇಬೇಕು. ಒಂದು ವೇಳೆ ಆರೋಪವೇ ಸುಳ್ಳಾಗಿದ್ದರೆ, ಅದಕ್ಕೆ ಕಾರಣರಾದವರ ಮೇಲೂ ಶಿಸ್ತು ಕ್ರಮ ಜರುಗಿಸುವ ಅಗತ್ಯವಿದೆ.

ಕರ್ನಾಟಕ ಸರ್ಕಾರದ ಸಹಕಾರಿ ಸಚಿವ ಕೆ ಎನ್‌ ರಾಜಣ್ಣ ಸದಾ ತಮ್ಮ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವವರು. ಆ ಮೂಲಕ ಹಲವು ಸಲ ಕಾಂಗ್ರೆಸ್‌ ಪಕ್ಷಕ್ಕೆ, ಸರ್ಕಾರಕ್ಕೆ ಮುಜುಗರ ಆಗಿದ್ದೂ ಇದೆ. ಕೆಪಿಸಿಸಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರ ವಿರುದ್ಧ ನೇರವಾಗಿ ಮಾತಿನ ಯುದ್ಧಕ್ಕೆ ಇಳಿದಿದ್ದ ರಾಜಣ್ಣ, ತಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ, ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳಿ ಹೈಕಮಾಂಡ್‌ ಸಿಟ್ಟಿಗೂ ಗುರಿಯಾಗಿದ್ದರು. ಆದರೆ, ಕೆಲ ದಿನಗಳ ಹಿಂದೆ ತಮ್ಮ ಮೇಲೆ ಪಕ್ಷದ ನಾಯಕರಿಂದಲೇ ಹನಿಟ್ರ್ಯಾಪ್‌ ಯತ್ನ ನಡೆದಿದೆ ಎಂದು ಹೇಳಿ ರಾಜ್ಯ ಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದರು. ಬಜೆಟ್‌ ಅಧಿವೇಶನದಲ್ಲಿ ಈ ಆರೋಪವನ್ನು ಎತ್ತಿದ ಬಿಜೆಪಿ ಶಾಸಕ ಯತ್ನಾಳ್‌ ಇಡೀ ಸದನವನ್ನು ಬಜೆಟ್‌ ಚರ್ಚೆಯಾಚೆಗೆ ಎಳೆದು ಹನಿಟ್ರ್ಯಾಪ್‌ ಅಂಗಳಕ್ಕೆ ತಂದು ಬಿಟ್ಟರು. ಮಧ್ಯಪ್ರವೇಶಿಸಿದ ರಾಜಣ್ಣ, ತಮ್ಮ ಮೇಲೆ ಮಾತ್ರವಲ್ಲ ಎಲ್ಲ ಪಕ್ಷಗಳ ಒಟ್ಟು 48 ಶಾಸಕರ ಮೇಲೆ ಹನಿಟ್ರ್ಯಾಪ್‌ ಆಗಿದೆ. ಖಾಸಗಿ ವಿಡಿಯೋಗಳು ಸಿ ಡಿ, ಪೆನ್‌ಡ್ರೈವ್‌ಗಳಲ್ಲಿ ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ ಎಂದು ಹೇಳಿ ವಿಪಕ್ಷಗಳಿಗೆ ಪ್ರತಿಭಟನೆಯ ಅಸ್ತ್ರ ನೀಡಿದ್ದರು. ಮತ್ತೊಂದೆಡೆ ತಮ್ಮ ಪುತ್ರ ವಿಧಾನಪರಿಷತ್‌ ಸದಸ್ಯ ರಾಜೇಂದ್ರ ಮೇಲೂ ಹನಿಟ್ರ್ಯಾಪ್‌ ಯತ್ನ ನಡೆದಿದೆ ಎಂದು ಹೇಳಿದ್ದು ಭಾರೀ ಸುದ್ದಿಯಾಗಿತ್ತು.

ಇದನ್ನೇ ಸರ್ಕಾರದ ವಿರುದ್ಧ ದಾಳ ಮಾಡಿಕೊಂಡ ಬಿಜೆಪಿ ಸಿಬಿಐ ತನಿಖೆ, ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಸದನದಲ್ಲಿ ಗದ್ದಲ ನಡೆಸಿ ಸ್ಪೀಕರ್‌ ಪೀಠದ ಬಳಿ ಹೋಗಿ ಬಜೆಟ್‌ ಪ್ರತಿಯನ್ನು ಹರಿದು ಹಾಕಿ ಪೀಠಕ್ಕೆ ಅವಮಾನ ಮಾಡಿದ ಪ್ರಕರಣದಲ್ಲಿ ಬಿಜೆಪಿಯ ಹದಿನೆಂಟು ಶಾಸಕರನ್ನು ಆರು ತಿಂಗಳ ಕಾಲ ಅಮಾನತು ಮಾಡಿರುವ ಘಟನೆಯೂ ನಡೆದಿದೆ. ಬಜೆಟ್‌ ಕುರಿತು ನಡೆಯುತ್ತಿದ್ದ ವಿಧಾನ ಮಂಡಲ ಅಧಿವೇಶನದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಚರ್ಚೆ ನಡೆಸಬೇಕಿತ್ತು. ಆದರೆ ಹನಿಟ್ರ್ಯಾಪ್‌ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿ, ಪರಸ್ಪರ ಆರೋಪ ಪ್ರತ್ಯಾರೋಪಕ್ಕೆ ಬಳಕೆ ಮಾಡಿಕೊಂಡು ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ತಾವು ಅನೈತಿಕರು ಎಂದು ಸಾರಿ ಹೇಳಿದ್ದರು. ಇಂತಹ ವಿಷಯವನ್ನು ಸದನಲ್ಲಿ ಚರ್ಚೆ ಮಾಡುವ ಮೂಲಕ ಗೆಲ್ಲಿಸಿದ ಮತದಾರರಿಗೆ ಅವಮಾನ ಮಾಡಿದ್ದಾರೆ. ಯಾಕೆಂದರೆ ತಮ್ಮ ಕ್ಷೇತ್ರದ ಅಭಿವೃದ್ಧಿ ಮಾಡಲಿ, ಅನುಕೂಲ ಕಲ್ಪಿಸಲಿ ಎಂದು ಜನ ಕಾಯುತ್ತಿರುವಾಗ ಗೆದ್ದ ನಾಯಕರು ತಾವು ಅನೈತಿಕ ಟ್ರ್ಯಾಪ್‌ಗಳಿಗೆ ಬೀಳುವಷ್ಟು ದುರ್ಬಲರು ಎಂದು ತಾವೇ ಸಾರಿಕೊಂಡಿದ್ದಾರೆ.

Advertisements

ಸದಾ ಕರ್ನಾಟಕ ಸರ್ಕಾರದ ವಿರುದ್ಧ ಏನಾದರೊಂದು ಹುಳುಕು ಸಿಕ್ಕರೆ ಅದನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಕಾಯುತ್ತಿರುವ ಮೋದಿ ಸರ್ಕಾರದ ಸಚಿವರು ಈ ಅವಕಾಶವನ್ನು ತಪ್ಪಿಸಿಕೊಳ್ಳಲಿಲ್ಲ. ಲೋಕಸಭೆಯಲ್ಲಿ ಈ ಪ್ರಕರಣ ಪ್ರಸ್ತಾಪವಾಗಿ ದೇಶದ ಮಟ್ಟದಲ್ಲಿ ಕರ್ನಾಟಕದ ಘನತೆಗೆ ಮಸಿ ಬಳಿಯುವ ಕೆಲಸ ಆಯಿತು. ಈಗ ನೋಡಿದರೆ ಇಡೀ ಆರೋಪ ಯಾವುದೇ ಪುರಾವೆ ಇಲ್ಲದೆ, ಯಾರನ್ನೋ ಗುರಿಯಾಗಿಸಿ ಹೇಳಿಕೆ ಕೊಟ್ಟು ತಾವೇ ಹೆಣೆದ ಬಲೆಯೊಳಗೆ ತಾವೇ ಬಿದ್ದು ಮುಜುಗರ ಎದುರಿಸುವ ಪರಿಸ್ಥಿತಿ ರಾಜಣ್ಣ ಎದುರಿಸುವಂತಾಗಿದೆಯೇ ಎಂಬ ಅನುಮಾನ ಬರುತ್ತಿದೆ.

HONEY TRAP 1 2
ಮುಖ್ಯಮಂತ್ರಿ ಭೇಟಿ ಮಾಡಿದ ರಾಜೇಂದ್ರ ರಾಜಣ್ಣ

ಇಷ್ಟೆಲ್ಲ ನಡೆದ ನಂತರವೂ ಸಚಿವ ರಾಜಣ್ಣ ಪೊಲೀಸರಿಗೆ ದೂರು ಕೊಟ್ಟಿಲ್ಲ. ಅದಕ್ಕೆ ಬದಲಿಗೆ ಗೃಹಸಚಿವ ಡಾ. ಜಿ ಪರಮೇಶ್ವರ್‌ ಅವರಿಗೊಂದು ಪತ್ರ ಬರೆದು ಹನಿಟ್ರ್ಯಾಪ್‌ ಯತ್ನದ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿದ್ದಾರೆ. ಈ ಸಂಬಂಧ ಅವರು ಯಾವುದೇ ಪುರಾವೆ ಇಲ್ಲ, ತಮ್ಮ ಸರ್ಕಾರಿ ಬಂಗಲೆಗೆ ಸಿಸಿಟಿವಿ ಕ್ಯಾಮೆರಾ ಇಲ್ಲ ಎಂದು ಹೇಳಿರುವುದು ಅನುಮಾನ ಮೂಡಿಸುತ್ತಿದೆ. ಎರಡು ಬಾರಿ ಬೇರೆ ಬೇರೆ ಯುವತಿಯರು ಒಬ್ಬ ಯುವಕನ ಜೊತೆಗೆ ಬಂದಿದ್ದರು. ಮೊದಲು ಬಂದ ಯುವತಿ ವಕೀಲೆ ಎಂದು ಹೇಳಿದ್ದಳು, ಎರಡನೇ ಬಾರಿ ಬಂದ ಯುವತಿ ಹೈಕೋರ್ಟ್‌ ವಕೀಲೆ ಎಂದು ಹೇಳಿದ್ದರು. ನೀಲಿ ಟಾಪ್‌, ಜೀನ್ಸ್‌ ಹಾಕಿದ್ದರು. ಎದುರು ತಂದು ನಿಲ್ಲಿಸಿದರೆ ಗುರಿತಿಸಬಲ್ಲೆ ಎಂದು ಹೇಳಿದ್ದಾರೆ. ಯಾರನ್ನೂ ಹೆಸರಿಸದೇ ಗೃಹಸಚಿವರಿಗೆ ಪತ್ರ ಬರೆದು ತನಿಖೆ ನಡೆಸಲು ಕೋರಿದ್ದಾರೆ.

ಆರಂಭದಲ್ಲಿ ಮುಖ್ಯಮಂತ್ರಿ ಆಕಾಂಕ್ಷಿ ಮಾಡಿಸಿರಬೇಕು, ನಮ್ಮ ಪಕ್ಷದ ಮಹಾ ನಾಯಕ ಮಾಡಿಸಿದ್ದಾರೆ ಎಂದು ಹೇಳಿ ಮಾಧ್ಯಮಗಳು, ವಿಪಕ್ಷಗಳು, ಕಾಂಗ್ರೆಸ್‌ನೊಳಗಿನ ಡಿಕೆ ಶಿವಕುಮಾರ್‌ ವಿರೋಧಿಗಳೆಲ್ಲರೂ ಡಿಕೆ ಅವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಡಿ ಕೆ ಕೂಡಾ ಮಾಧ್ಯಮಗಳ ಪ್ರಶ್ನೆಗೆ ಬಲವಾಗಿ ನಿರಾಕರಿಸುವ ಬದಲು ಅನುಮಾನ ಬರುವ ರೀತಿಯಲ್ಲಿ ಹೇಳಿಕೆ ಕೊಟ್ಟು ತಮ್ಮ ಮೇಲಿನ ಅನುಮಾನವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದರು. ಸಚಿವ ಸತೀಶ್‌ ಜಾರಕಿಹೊಳಿ ಕೂಡಾ ಇಂತಹ ಪ್ರಯತ್ನ ನಡೆದಿದೆ ಎಂಬಂತೆ ಹೇಳಿಕೆ ನೀಡಿದ್ದರು. ದೂರು ಕೊಟ್ಟರೆ ತನಿಖೆ ನಡೆಸಲಾಗುವುದು ಎಂದು ಗೃಹಸಚಿವರು, ಮುಖ್ಯಮಂತ್ರಿ ಸದನದಲ್ಲೇ ಹೇಳಿದ್ದರು. ಆದರೆ ರಾಜಣ್ಣ ಪೊಲೀಸರಿಗೆ ದೂರು ನೀಡಿಲ್ಲ. ಗೃಹಸಚಿವರಿಗೆ ಮನವಿ ಪತ್ರ ಬರೆದಿದ್ದಾರೆ. ಆ ಪತ್ರವನ್ನು ಡಿಜಿಪಿ ಅಲೋಕ್‌ ಮೋಹನ್‌ ಅವರಿಗೆ ಪರಮೇಶ್ವರ್‌ ಕಳಿಸಿದ್ದಾರೆ. ಅವರು ಪ್ರಾಥಮಿಕ ತನಿಖೆ ನಡೆಸಿ ವರದಿ ಕೊಡಲಿದ್ದಾರೆ ಎಂದು ಹೇಳಲಾಗಿದೆ. ತನಿಖೆಗೆ ಯೋಗ್ಯ ಅನ್ನಿಸಿದರೆ ಸುವೋ ಮೋಟೋ ದಾಖಲಿಸಿಕೊಂಡು ತನಿಖೆ ನಡೆಸಲು ಪೊಲೀಸರಿಗೆ ಅವಕಾಶ ಇದೆ. ಇಲ್ಲದಿದ್ದರೆ ಇದು ತನಿಖೆಗೆ ಯೋಗ್ಯವಾಗಿಲ್ಲ ಎಂಬ ಕಾರಣ ನೀಡಿ ಸುಮ್ಮನಾಗಬಹುದು.

kannadaprabha 2024 02 6e65e09b 5117 4d6a 9036 87ada5c4383e assembly mew

ಈ ಮಧ್ಯೆ ರಾಜಣ್ಣ ಅವರ ಪುತ್ರ ವಿಧಾನ ಪರಿಷತ್‌ ಸದಸ್ಯ ರಾಜೇಂದ್ರ ಗುರುವಾರ ಡಿ ಜಿ ಪಿ ಅಲೋಕ್‌ ಮೋಹನ್ ಅವರನ್ನು ಭೇಟಿ ಮಾಡಿ “ನ. 16ರಂದು ಮಗಳ ಹುಟ್ಟುಹಬ್ಬದ ಪ್ರಯುಕ್ತ ಶಾಮಿಯಾನ ಹಾಕಲು ಬಂದ ಕೆಲವರು ನನ್ನ ಕೊಲೆಗೆ ಯತ್ನಿಸಿದ್ದರು” ಎಂದು ದೂರು ನೀಡಿದ್ದಾರೆ. ಜನವರಿಯಲ್ಲಿ ಕಳಿಸಿದ್ದ ವಾಯ್ಸ್‌ ಮೆಸೇಜ್‌ನಲ್ಲಿ ತಮ್ಮ ಕೊಲೆಗೆ ಸುಪಾರಿ ನೀಡಲಾಗಿದೆ ಎಂದು ಹೇಳಿ ಐದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಈಗ ದೂರು ನೀಡಿರುವುದಾಗಿ ಅವರು ಮಾಧ್ಯಮಗಳಿಗೆ ಹೇಳಿದ್ದಾರೆ. ಒಟ್ಟಿನಲ್ಲಿ ಸಚಿವ ರಾಜಣ್ಣ ಮತ್ತು ಮಗ ರಾಜೇಂದ್ರ ಇಬ್ಬರ ಹೇಳಿಕೆಗಳಲ್ಲಿ ಸ್ಪಷ್ಟತೆ ಇಲ್ಲ. ತಂದೆ ಮಾಡಿದ ಹನಿಟ್ರ್ಯಾಪ್‌ ಆರೋಪ ಅವರಿಗೇ ಮುಜುಗರ ತರುವ ಲಕ್ಷಣ ಕಂಡು ಬರುತ್ತಿರುವಾಗ ವಿಷಯಾಂತರ ಮಾಡಲು ಮಗ ರಾಜೇಂದ್ರ ನಾಲ್ಕು ತಿಂಗಳ ಹಿಂದೆಯ ಕೊಲೆ ಯತ್ನ ನಡೆದಿತ್ತು ಎಂಬ ಆರೋಪ ಮಾಡುತ್ತಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ರಾಜಣ್ಣ ಅವರ ಪುತ್ರ ರಾಜೇಂದ್ರ ಅವರು ವಿಧಾನ ಪರಿಷತ್‌ ಸದಸ್ಯರಾಗಿದ್ದರೂ ಹೆಚ್ಚು ಕಾಣಿಸಿಕೊಂಡವರಲ್ಲ. ಪಕ್ಷ, ಸರ್ಕಾರದ ಪರ ವಿರುದ್ಧ ಹೇಳಿಕೆ ನೀಡಿದವರೂ ಅಲ್ಲ. ರಾಜಣ್ಣ ಅವರು ಹನಿಟ್ರ್ಯಾಪ್‌ ಯತ್ನ ನಡೆದಿದೆ ಎಂಬ ಆರೋಪ ಬಂದ ನಂತರ ಇವರ ಹೆಸರು ಕೇಳಿ ಬಂತು. ಇದೀಗ ತಮ್ಮ ಕೊಲೆ ಯತ್ನ ನಡೆದಿದೆ ಎಂದು ಹೇಳಿ ಸುದ್ದಿಯಲ್ಲಿದ್ದಾರೆ.

ಡಿಜಿಗೆ ತನಿಖೆ ಮಾಡುವ ಅಧಿಕಾರ ಇಲ್ಲ: ಬಿ ಕೆ ಶಿವರಾಮ್‌

ಈ ಬಗ್ಗೆ ನಿವೃತ್ತ ಪೊಲೀಸ್‌ ಅಧಿಕಾರಿ ಬಿ ಕೆ ಶಿವರಾಮ್‌ ಅವರು ಈ ದಿನಕ್ಕೆ ಪ್ರತಿಕ್ರಿಯೆ ನೀಡಿ, “ಈ ಪ್ರಕರಣದ ತನಿಖೆ ನಡೆಸಲು ಡಿ ಜಿ ಗೆ ಅಧಿಕಾರವೇ ಇಲ್ಲ. ಪೊಲೀಸ್‌ ಠಾಣೆಗಳಿಗೆ ಮಾತ್ರ ಅಧಿಕಾರ. ಡಿ ಜಿ ಈ ಅರ್ಜಿಯನ್ನು ತನಿಖೆಗೆ ಯೋಗ್ಯವೇ, ಅಲ್ಲವೇ ಎಂದಷ್ಟೇ ಪರಿಶೀಲಿಸಬಹುದು. ಏನಾದರೂ ಪುರಾವೆ ಕೊಟ್ಟರೆ ಮಾತ್ರ ಇದು ತನಿಖಾ ಯೋಗ್ಯ ಪ್ರಕರಣ ಎಂದು ಪರಿಗಣಿಸಬಹುದು. ಇಲ್ಲಿ ಯಾವ ಪುರಾವೆಯನ್ನೂ ಕೊಡದೇ, ಸ್ಥಳೀಯ ಠಾಣೆಯಲ್ಲಿ ದೂರನ್ನೂ ದಾಖಲಿಸದೇ ಇರುವುದು ನೋಡಿದರೆ ಕುರುಡ ಗಾಳಿಯಲ್ಲಿ ಗುಂಡು ಹಾರಿಸಿದಂತೆ. ಜಗತ್ತಿನ ಮುಂದೆ ರಾಜಕೀಯ ನಾಯಕರು ಬೆತ್ತಲಾದರು ಅಷ್ಟೇ. ಇದು ಅಧಿಕಾರ ಮತ್ತು ಕಾನೂನಿನ ಸ್ಪಷ್ಟ ದುರುಪಯೋಗ ಬಿಟ್ಟರೆ ಬೇರೆ ಏನೂ ಇಲ್ಲ. ಕರ್ನಾಟಕದ ಹನಿಟ್ರ್ಯಾಪ್‌ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಎಂದು ಝಾರ್ಖಂಡ್‌ ಮೂಲದ ವ್ಯಕ್ತಿ ಸುಪ್ರೀಂ ಕೋರ್ಟಿನಲ್ಲಿ ಹಾಕಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ಸುಪ್ರೀಂ ಕೋರ್ಟ್‌ ವಜಾ ಮಾಡಿದೆ. “ನಿಮಗೂ ಕರ್ನಾಟಕಕ್ಕೂ ಏನು ಸಂಬಂಧ” ಎಂದು ಕೇಳಿದೆ. ಕರ್ನಾಟಕ ಸರ್ಕಾರವೂ ಸುಪ್ರೀಂನ ಹಾದಿಯಲ್ಲಿ ಸಾಗಬೇಕಿದೆ. ಸಚಿವ ರಾಜಣ್ಣ ಏನೋ ಒಂದು ದುರುದ್ದೇಶದಿಂದ ಹೇಳಿಕೆ ನೀಡಿ ಈಗ ಆ ಬಲೆಯೊಳಗೆ ತಾವೇ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಇದನ್ನೆಲ್ಲ ತನಿಖೆ ಮಾಡುವುದು ತನಿಖಾ ಸಂಸ್ಥೆಗಳ ಕಾಲಹರಣ ಅಷ್ಟೇ ಎಂದರು.

ಅಕ್ಕಪಕ್ಕದ ಸಿಸಿಟಿವಿ ಕ್ಯಾಮೆರಾ ಚೆಕ್‌ ಮಾಡಬಹುದು : ನ್ಯಾಯವಾದಿ ಕೆ ಬಾಲನ್‌

ರಾಜಣ್ಣ ಅವರು ಹನಿಟ್ರ್ಯಾಪ್‌ ಯತ್ನದ ಬಗ್ಗೆ ತಮ್ಮಲ್ಲಿ ಯಾವುದಾದರೂ ಪುರಾವೆ ಇದ್ದರೆ ಪೊಲೀಸರಿಗೆ ಕೊಡಬಹುದು. ಅಥವಾ ಬಂದ ವ್ಯಕ್ತಿಗಳ ಮುಖಚರ್ಯೆ, ಉಡುಪಿನ ಬಣ್ಣ, ಆಕಾರ, ಯಾವ ವಿಚಾರಕ್ಕೆ ಬಂದಿದ್ದರು, ಜೊತೆಗಿದ್ದ ಯುವಕನ ವಿವರ ಗೊತ್ತಿದ್ದರೆ ತಿಳಿಸಬೇಕು. ಅದರ ಆಧಾರದಲ್ಲಿ ಪೊಲೀಸರು ರೇಖಾಚಿತ್ರ ಸಿದ್ಧಪಡಿಸುತ್ತಾರೆ. ಸಚಿವರ ಸರ್ಕಾರಿ ವಸತಿಗೃಹದಲ್ಲಿ ಸಿಸಿಟಿವಿ ಕ್ಯಾಮೆರಾ ಇರಲಿಲ್ಲ ಎಂಬುದೇ ಅಚ್ಚರಿಯ ಸಂಗತಿ. ಅದು ನಿಜವೇ ಆಗಿದ್ದರೆ, ಹೊರಗೆ ರಸ್ತೆ, ಅಕ್ಕಪಕ್ಕದ ಕಟ್ಟಡಗಳ ಹೊರಗೆ ಇರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸಚಿವರ ಮನೆಗೆ ಬಂದವರ ಮಾಹಿತಿ ಸಿಗಬಹುದು. ಇದೆಲ್ಲ ಸೀರಿಯಸ್‌ ಆಗಿ ಮಾಡಬಹುದಾದ ಪ್ರಕ್ರಿಯೆ. ಆದರೆ ಇಲ್ಲಿ ಹಾವೂ ಸಾಯಬಾರದು, ಕೋಲೂ ಮುರಿಯಬಾರದು ಎಂಬ ಬಗೆಯ ನಡವಳಿಕೆ ಕಾಣುತ್ತಿದೆ. ಡಿ ಕೆ ಶಿವಕುಮಾರ್‌ ಮೇಲೆ ಆರೋಪ ಮಾಡಲು ರಾಜಣ್ಣ ಭಯಪಡುತ್ತಿರಬಹುದು. ಅಥವಾ ಹೇಳಿಕೆಯೇ ಸುಳ್ಳಾಗಿರಬಹುದು ಎಂದು ಹೈಕೋರ್ಟ್‌ನ ಹಿರಿಯ ನ್ಯಾಯವಾದಿ ಬಾಲನ್‌ ಪ್ರತಿಕ್ರಿಯೆ ನೀಡಿದ್ದಾರೆ.

ಸದ್ಯ ಒಂದು ವೇಳೆ ಹನಿಟ್ರ್ಯಾಪ್‌ ಯತ್ನ ನಡೆದಿಲ್ಲ ಎಂದು ಸ್ವತಃ ರಾಜಣ್ಣನವರೇ ಹೇಳಿದರೂ, ವಿಪಕ್ಷಗಳು ಕೇಳಲು ಸಿದ್ದರಿಲ್ಲ. ವಿಪಕ್ಷ ನಾಯಕ ಆರ್‌ ಅಶೋಕ್‌ ಹನಿಟ್ರ್ಯಾಪ್‌ ಸೂತ್ರದಾರಿ ಸಿ ಎಂ ಸಿದ್ದರಾಮಯ್ಯ ಎಂದು ಹೇಳಲು ಶುರುಮಾಡಿದ್ದಾರೆ. ಆರ್‌ ಅಶೋಕ್‌ ಹೇಳಿಕೆಗೆ ಯಾವುದೇ ಬೇಸ್‌ ಇರಲ್ಲ ಮತ್ತು ಅದು ಅವರ ಪಕ್ಷದ ನಿಲುವು ಆಗಿರಲ್ಲ. ಒಂದು ವೇಳೆ ಡಿ ಕೆ ಶಿವಕುಮಾರ್‌ ಅವರ ಮೇಲೆ ಕಳಂಕ ಅಂಟಿಸಲು ರಾಜಣ್ಣ ಈ ಆರೋಪ ಮಾಡಿದ್ದರೆ, ಅದು ಅವರಿಗೇ ತಿರುಗುಬಾಣವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ರಾಜಣ್ಣ ಹೈಕಮಾಂಡ್‌ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಏನೇ ಆದರೂ ಕಾಂಗ್ರೆಸ್‌ ಪಕ್ಷದ ನಾಯಕರೇ ಅವರದೇ ಪಕ್ಷದ ನಾಯಕರಿಗೇ ಹನಿಟ್ರ್ಯಾಪ್‌ ಮಾಡಿದ್ದಾರೆ ಎಂದು ಆರೋಪ ಮಾಡಿರುವುದು, ಅದರಿಂದಾಗಿ ರಾಷ್ಟ್ರೀಯ ಮಟ್ಟದಲ್ಲಿ ಮುಜುಗರವಾಗಿರುವುದಂತು ದಿಟ. ಸಾರ್ವಜನಿಕ ಜೀವನದಲ್ಲಿ ಇರುವವರು ಅದರಲ್ಲೂ ಜನಪ್ರತಿನಿಧಿಗಳು ಏನೋ ಒಂದು ಹೇಳಿ ಜಾರಿಕೊಳ್ಳುವುದು ಸುಲಭವಲ್ಲ. ಅವರನ್ನು ಹೆಜ್ಜೆ ಹೆಜ್ಜೆಗೂ ಪ್ರಶ್ನೆ ಮಾಡುವ ಮಾಧ್ಯಮ ಮಂದಿ ಇದ್ದಾರೆ. ಪ್ರಸ್ತುತ ಈ ಕಳಂಕವನ್ನು ಕಳೆಯಬೇಕಿದ್ದರೆ ತನಿಖೆ ನಡೆಯಲೇಬೇಕು. ಒಂದು ವೇಳೆ ಆರೋಪವೇ ಸುಳ್ಳಾಗಿದ್ದರೆ ಅದಕ್ಕೆ ಕಾರಣರಾದವರ ಮೇಲೂ ಶಿಸ್ತು ಕ್ರಮ ಜರುಗಿಸುವ ಅಗತ್ಯವಿದೆ.

ಒಟ್ಟಿನಲ್ಲಿ ರಾಜ್ಯ ರಾಜಕಾರಣ ಅಭಿವೃದ್ಧಿ, ರಾಜ್ಯದ ಪ್ರಗತಿಯ ವಿಚಾರಕ್ಕಿಂತ ಹೆಚ್ಚಾಗಿ ಆಡಳಿತ ಪಕ್ಷ ಮತ್ತು ವಿಪಕ್ಷ ಎರಡೂ ಕಡೆ ಬೇಜವಾಬ್ದಾರಿ ಹೇಳಿಕೆಗಳು, ಘನತೆಯಿಲ್ಲದ ನಡವಳಿಕೆ, ಪರಸ್ಪರ ಕಿತ್ತಾಟದಲ್ಲಿಯೇ ಮುಳುಗಿ ಹೋಗಿದೆ. ಇದರ ಮಧ್ಯೆ ಶಾಸಕರ ವೇತನ ಭತ್ಯೆ ಎಲ್ಲವೂ ಏರಿಕೆಯಾಗಿದೆ, ಜೊತೆಗೆ ಹಾಲಿನ ದರವೂ ಲೀಟರಿಗೆ ನಾಲ್ಕು ರೂಪಾಯಿಯಷ್ಟು ಏರಿಕೆಯಾಗಿದೆ. ರೈತರು, ಬಡ ಕೂಲಿ ಕಾರ್ಮಿಕರು ಎಂದಿನ ಸಂಕಷ್ಟದಲ್ಲಿ ದಿನದೂಡುವಂತಾಗಿದೆ.

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ | 20 ವರ್ಷಗಳ ಅಸಹಜ ಸಾವು ಪ್ರಕರಣ; ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಆಗ್ರಹ

ಬೆಂಗಳೂರಿನ ಪ್ರಮುಖ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಸಭೆ ಸೇರಿ ಧರ್ಮಸ್ಥಳ...

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

Download Eedina App Android / iOS

X