ಉಳುವವನೇ ಭೂಮಿ ಒಡೆಯ, ಭೂ ಸುಧಾರಣೆ ಕಾಯ್ದೆ ಜಾರಿ ಮಾಡಿದ್ದೇ ಕಾಂಗ್ರೆಸ್ ಎಂದು ಹೇಳುವ ಪಕ್ಷದ ನಾಯಕರುಗಳು ಕಳೆದ 45 ವರ್ಷಗಳಿಂದ ಜವಳಗೇರಾದ ಹೆಚ್ಚುವರಿ ಭೂಮಿಯನ್ನು ಹಂಚಿಕೆ ಮಾಡಲು ಮುಂದಾಗದೇ ಇರುವುದು ಕಳವಳಕಾರಿಯಾಗಿದ್ದು, ಕೂಡಲೇ ಕ್ರಮಕ್ಕೆ ಒತ್ತಾಯಿಸಿ ಮತ್ತೊಮ್ಮೆ ಹೋರಾಟದ ಮೂಲಕ ಮನವಿ ಮಾಡಲಾಗಿದೆ ಎಂದು ಸಿಪಿಐ(ಎಂಎಲ್) ರೆಡ್‌ಸ್ಟಾರ್ ಪಾಲಿಟ್ ಬ್ಯುರೋ ಸದಸ್ಯ ಆರ್. ಮಾನಸಯ್ಯ ಹೇಳಿದರು.
ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಜವಳಗೇರಾದ ಸಿದ್ದಲಿಂಗಮ್ಮ-ವೆಂಕಟರಾವ್‌ಗೆ ಸೇರಿದ 1064 ಎಕರೆ ಹೆಚ್ಚುವರಿ ಭೂಮಿಯನ್ನು ಹಂಚಿಕೆ ಮಾಡುವಂತೆ 1981 ರಲ್ಲಿಯೇ ಘೋಷಿಸಲಾಗಿದೆ. ಸಿದ್ದಲಿಂಗಮ್ಮವರಿಗೆ ಮಕ್ಕಳೇ ಇಲ್ಲ. ವಾರಸುದಾರರು ಅಲ್ಲದೇ ಇದ್ದರೂ ರುದ್ರಭೂಪಾಲ ನಾಡಗೌಡ, ವೆಂಕಟರಾವ್ ನಾಡಗೌಡ ಹಾಗೂ ರಾಜಶೇಖರ ನಾಡಗೌಡ ಇವರ ಹೆಸರಿನಲ್ಲಿ ಅಕ್ರಮವಾಗಿ ಆಸ್ತಿ ವರ್ಗಾವಣೆ ಮಾಡಿಸಲಾಗಿದೆ. ಕೂಡಲೇ ಇದನ್ನು ಪರಿಶೀಲಿಸಿ ಭೂ ಹಂಚಿಕೆಗೆ ಕ್ರಮವಹಿಸಬೇಕು” ಎಂದರು.
“ಹೆಚ್ಚುವರಿ ಭೂಮಿಯನ್ನು ಹಂಚಿಕೆ ಮಾಡಲು ಒತ್ತಾಯಿಸಿ ಅನೇಕ ಹಂತದ ಹೋರಾಟ ನಡೆದರೂ ಕಂದಾಯ ಇಲಾಖೆ ಮಾತ್ರ ಯಾವ ಕ್ರಮಕ್ಕೂ ಮುಂದಾಗಲೇ ಇಲ್ಲ. 1981ರಲ್ಲಿ ಸಿದ್ದಲಿಂಗಮ್ಮನ ವಾರಸುದಾರರೆಂದು ಹೇಳಿಕೊಂಡವರು ಉಚ್ಚ ನ್ಯಾಯಾಲಯ ಮೊರೆ ಹೋಗಿದ್ದರು. ಇಡೀ ಪ್ರಕರಣವನ್ನು ಮರು ವಿಚಾರಣೆ ನಡೆಸುವಂತೆ ಹೈಕೋರ್ಟ್ ಆದೇಶಿಸಿದೆ. ಆದರೆ 1981 ರಿಂದ 2025 ರವರೆಗೆ 44 ವರ್ಷಗಳು ಕಳೆದರೂ ಭೂ ನ್ಯಾಯ ಮಂಡಳಿಯು ಪ್ರಕರಣದ ವಿಚಾರಣೆ ನಡೆಸದೇ ಇರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ” ಎಂದು ಹೇಳಿದರು.
“ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿಯವರಿಗೂ ಪ್ರಕರಣ ಕುರಿತು ಮನವಿ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ಭೂ ಸುಧಾರಣೆ ತಂದಿರುವುದಾಗಿಯೂ, ದೇವರಾಜ ಅರಸು ಅವರ ಉಳುವವನೇ ಭೂ ಒಡೆಯ ಜಾರಿಗೊಳಿಸುವುದಾಗಿ ಹೇಳುತ್ತಿದೆ. ಆದರೆ ಹೆಚ್ಚುವರಿ ಭೂಮಿ ಹಂಚಲು ಮಾತ್ರ ಸಿದ್ಧವಿಲ್ಲ. ಏಪ್ರಿಲ್ ಮೊದಲ ವಾರದಲ್ಲಿ ಸಿಎಂ ಬಳಿಗೆ ನಿಯೋಗ ತೆರಳಿ ಮತ್ತೊಮ್ಮೆ ಮನವಿ ನೀಡಲಾಗುತ್ತದೆ. ಬೇಡಿಕೆ ಈಡೇರುವವರೆಗೂ ಹೋರಾಟದಿಂದ ಹಿಂದುಳಿಯುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಆರು ತಿಂಗಳ ಕಾಲ ಭೂ ಹಂಚಿಕೆ ಆಗ್ರಹಿಸಿ ಹೋರಾಟ ನಡೆಸಲಾಗಿತ್ತು. ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೂ ನ್ಯಾಯ ಮಂಡಳಿ ರಚಿಸಿ ಪ್ರಕರಣ ಇತ್ಯರ್ಥಗೊಳಿಸುವುದಾಗಿ ಭರವಸೆ ನೀಡಿದ್ದರಿಂದ ಅನಿರ್ಧಿಷ್ಟಾವಧಿ ಧರಣಿ ಹಿಂಪಡೆಯಲಾಗಿತ್ತು. ಈಗಲೂ ಅದೇ ಮೌನ ವಹಿಸುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ರಾಯಚೂರು | ರಸ್ತೆ ಕಾಮಗಾರಿಗೆ ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ
ಈ ವೇಳೆ ಜಿ.ಅಮರೇಶ, ಎಂ.ಗಂಗಾಧರ್, ಆದೇಶ ಕುಮಾರ, ಸಂತೋಷ ಹಿರೇದಿನ್ನಿ ಉಪಸ್ಥಿತರಿದ್ದರು.