ಕಳೆದ ವಾರದಿಂದ, ಟ್ರಂಪ್ ಆಡಳಿತದ ವಿರುದ್ಧ ಒಂದು ಸುದ್ದಿ ವ್ಯಾಪಕವಾಗಿ ಹರಡುತ್ತಿದೆ. ಈ ಸುದ್ದಿಯ ಪ್ರಕಾರ, ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಟ್ಜ್ ಅವರು ‘ದಿ ಅಟ್ಲಾಂಟಿಕ್’ ಪತ್ರಿಕೆಯ ಮುಖ್ಯ ಸಂಪಾದಕ ಜೆಫ್ರಿ ಗೋಲ್ಡ್‌ಬರ್ಗ್ ಅವರನ್ನು ಸಿಗ್ನಲ್ (WhatsApp-like encrypted app) ಎಂಬ ಸಾಮಾಜಿಕ ಜಾಲತಾಣದ ಒಂದು ಗುಂಪಿಗೆ ಸೇರಿಸಿದ್ದರು. ಈ ಗುಂಪಿನಲ್ಲಿ ಅಮೆರಿಕದ ಉಪರಾಷ್ಟ್ರಪತಿ ಜೆಡಿ ವಾನ್ಸ್, CIA ಮುಖ್ಯಸ್ಥೆ ತುಳ್ಸಿ ಗಬಾರ್ಡ್ ಮತ್ತು ಇತರ ರಕ್ಷಣಾ ಅಧಿಕಾರಿಗಳು ಇದ್ದರು. ಇಲ್ಲಿ ಯೆಮೆನ್ ಮೇಲೆ ದಾಳಿ ಹೇಗೆ ನಡೆಸಬೇಕು ಎಂಬ ಚರ್ಚೆ ನಡೆದಾಗ, ಆ ಗುಂಪಿನಿಂದ ಗೋಲ್ಡ್‌ಬರ್ಗ್ ಹೊರಬಂದು, ಈ ಮಾಹಿತಿಯನ್ನು ಬಹಿರಂಗಪಡಿಸಿದರು. ಇದನ್ನೇ ಈಗ “ಲೀಕ್” (ಮಾಹಿತಿ ಸೋರಿಕೆ) ಎಂದು ಪ್ರಚಾರ ಮಾಡಲಾಗುತ್ತಿದೆ.
ಮುಖ್ಯವಾಗಿ, ಇದು ಇರಾನ್-ಬೆಂಬಲಿತ ಹೌತಿ ಪಡೆಗಳ ಮೇಲೆ ವಾಯುದಾಳಿಯ ಸಿದ್ಧತೆಗಳನ್ನು ಬಹಿರಂಗಪಡಿಸಿದೆ. ಆದರೆ, ಇದರ ಹಿಂದೆ ಇರಾನ್ ಮೇಲೆ ನಡೆಸಲು ಉದ್ದೇಶಿಸಿರುವ ದಾಳಿಗೆ ಸಾರ್ವಜನಿಕ ಸಮ್ಮತಿ ಗಳಿಸುವ ಉದ್ದೇಶವಿದೆ. ಯೆಮೆನ್ ಯುದ್ಧದ ನಿಜವಾದ ಕಾರಣಗಳು ಸೋರಿಕೆಯಾಗಿದ್ದರೆ, ಜೂಲಿಯನ್ ಅಸಾಂಜೆ ಅವರಂತೆ ವಿಕಿಲೀಕ್ಸ್ ಸ್ಥಾಪಕರನ್ನು ಜೈಲಿಗೆ ಹಾಕಲಾಗುತ್ತಿತ್ತು. ಬದಲಿಗೆ, ಇದು ‘Manufacturing Consent’ (ಕೃತಕವಾಗಿ ಸಮ್ಮತಿ ನಿರ್ಮಿಸುವಿಕೆ) ತಂತ್ರ, ಯೆಮೆನ್ ಮತ್ತು ಇರಾನ್ ವಿರುದ್ಧ ಸಾಮಾನ್ಯರಲ್ಲಿ ಯುದ್ಧದ ಬೆಂಬಲವನ್ನು ಸೃಷ್ಟಿಸುವ ಪ್ರಯತ್ನವಾಗಿದೆ.
ಅಂದಹಾಗೆ, ಈ ಗೋಲ್ಡ್‌ಬರ್ಗ್ ಅವರು ಐವಿ ಲೀಗ್ ಕಾಲೇಜಿನಲ್ಲಿ ಶಿಕ್ಷಣವನ್ನು ಅರ್ಧಕ್ಕೆ ತೊರೆದವರು. 1987–93ರ ಪ್ಯಾಲೆಸ್ತೀನಿಯನ್ ಇಂತಿಫಾದಾ ಸಮಯದಲ್ಲಿ ಇಸ್ರೇಲಿ ಸೈನ್ಯದ ಜೈಲು ರಕ್ಷಕರಾಗಿ ಸೇವೆ ಸಲ್ಲಿಸಿದರು. ಅವರು ತಮ್ಮ ಆತ್ಮಕಥೆಯಲ್ಲಿ ಕೈದಿಗಳ ಮೇಲಿನ ಹಿಂಸೆಯನ್ನು ಮರೆಮಾಚಿದ್ದರು. ಆ ಬಗ್ಗೆ ಅವರೇ ಒಪ್ಪಿಕೊಂಡಿದ್ದಾರೆ.
ಇರಾಕ್ ಯುದ್ಧದ ಸಮಯದಲ್ಲಿ, ಉಪರಾಷ್ಟ್ರಪತಿ ಡಿಕ್ ಚೆನಿ ಅವರು ಗೋಲ್ಡ್‌ಬರ್ಗ್ ಮೂಲಕ ಒಂದು ಸಂದೇಹಾಸ್ಪದ ವರದಿ ಪ್ರಕಟಿಸಿದ್ದರು. ‘ಸದ್ದಾಮ್ ಹುಸೇನ್ ಮತ್ತು ಅಲ್-ಕಾಯಿದಾ ನಡುವೆ ಆಳವಾದ ಸಂಬಂಧ’ ಇದೆ ಎಂಬ ವರದಿ ಅದಾಗಿತ್ತು. ಆ ವರದಿಯನ್ನು ಉಲ್ಲೇಖಿಸಿ, ಮಾಧ್ಯಮಗಳಲ್ಲಿ ಡಿಕ್ ಚೆನಿ ದಾಳಿಯ ಪ್ರಚಾರ ಮಾಡಿದರು. ಒಬಾಮಾ ಅವರ ಕಾಲದಲ್ಲಿ, ಗೋಲ್ಡ್‌ಬರ್ಗ್ ಇಸ್ರೇಲ್ ಪ್ರಧಾನಿ ನೆತನ್ಯಾಹುವಿನ ‘ಸಂದೇಶವಾಹಕ’ ಆಗಿ ಕೆಲಸ ಮಾಡಿದರು. ಆಗ, ಇರಾನ್‌ನ ಪರಮಾಣು ಸೈಟ್‌ಗಳ ಮೇಲೆ ದಾಳಿ ಮಾಡಲು ‘ತೆಲ್ ಅವಿವ್’ ಯೋಜಿಸುತ್ತಿದೆ ಎಂಬ ಅತಿಶಯೋಕ್ತಿಯ ಕಥೆಗಳನ್ನು ಹರಡಿದರು.
2023ರ ಅಕ್ಟೋಬರ್ 7ರಂದು ಇಸ್ರೇಲ್ ದಾಳಿಯ ನಂತರ, ಆರ್ಥಿಕವಾಗಿ ಕುಗ್ಗಿ ಹೋಗಿದ್ದ ದಿ ಅಟ್ಲಾಂಟಿಕ್ ಪತ್ರಿಕೆ ಹಠಾತ್ ಲಾಭ ಗಳಿಸಲು ಪ್ರಾರಂಭಿಸಿತು. ಗೋಲ್ಡ್‌ಬರ್ಗ್ ಅದರ ಶ್ರೀಮಂತ ಪ್ರಾಯೋಜಕರ (ಶ್ರೀಮಂತ ಚಂದಾದಾರರು) ಶತ್ರುಗಳಾದ ಕೆಫಿಯಾ ಧರಿಸಿದ ಪ್ಯಾಲೆಸ್ತೀನಿಯರ ವಿರುದ್ಧ ಪ್ರಚಾರವನ್ನು ಉಗ್ರಗೊಳಿಸಿದರು. ಈಗ, ಟ್ರಂಪ್ ಆಡಳಿತದಲ್ಲಿ ಇರಾನ್ ದಾಳಿಯ ಚರ್ಚೆ ಬೆಳೆಯುತ್ತಿರುವಾಗ, ಗೋಲ್ಡ್‌ಬರ್ಗ್ ಮತ್ತೆ ಯುದ್ಧಕೋರ ಸಂದೇಶವಾಹಕರಾಗಿ ಕಾಣಿಸಿಕೊಂಡಿದ್ದಾರೆ.
ಈ ವರದಿ ಓದಿದ್ದೀರಾ?: ಅಮೆರಿಕದ ಯೆಮೆನ್ ದಾಳಿ ಯೋಜನೆ ಸೋರಿಕೆ; ಪತ್ರಕರ್ತರಿದ್ದ ಗುಂಪಿಗೆ ಫಾರ್ವರ್ಡ್ ಮಾಡಿದ ಟ್ರಂಪ್ ಅಧಿಕಾರಿಗಳು
ಯೆಮೆನ್ ಎಲ್ಲ ಕಡೆಯಿಂದಲೂ ದಿಗ್ಭಂದನದಲ್ಲಿರುವ ಪ್ರಪಂಚದಲ್ಲಿಯೇ ಅತ್ಯಂತ ಬಡ ರಾಷ್ಟ್ರ. 2015ರಿಂದ ಸೌದಿ ಅರೇಬಿಯಾ, UAE, ಅಮೇರಿಕ, ಬ್ರಿಟನ್ ದಾಳಿಗಳಿಂದ ತತ್ತರಿಸಿಹೋಗಿದೆ. ಆದರೆ, ಪ್ಯಾಲೆಸ್ತೀನಿನ ಗಾಝ ಪಟ್ಟಿಯ ಮೇಲಿನ ನರೆಮೇಧವನ್ನು ಕೆಚ್ಚೆದೆಯ ಧೈರ್ಯದಿಂದ ಎದಿರಿಸುತ್ತಿದೆ. ಅಲ್ಲದೆ, ಇಸ್ರೇಲ್ ಬಂದರುಗಳಿಂದ ನಡೆಯುತ್ತಿರುವ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿದೆ. ಗಾಜಾ ಮೇಲೆ ನಿರಂತರ ದಾಳಿ ನೆಡೆಸಿ ವಿಶ್ವಸಂಸ್ಥೆ ಮತ್ತು ಅಂತರ್ರಾಷ್ಟ್ರೀಯ ಕಾನೂನುಗಳಿಗೆ ವಿರುದ್ಧ ಕೆಲಸ ಮಾಡುತ್ತಿರುವ ಇಸ್ರೇಲ್‌ನ ನಿದ್ದೆಗೆಡಿಸಿದೆ.
ಟ್ರಂಪ್ ಅಧಿಕಾರಕ್ಕೆ ಬಂದ ಎರೆಡು ತಿಂಗಳಲ್ಲೇ ಕದನ ವಿರಾಮವನ್ನು ಇಸ್ರೇಲ್ ಏಕಪಕ್ಷೀಯವಾಗಿ ಮುರಿದಿದೆ. ಮಾರ್ಚ್ 17ರಿಂದ ಸಾವಿರಕ್ಕೂ ಹೆಚ್ಚು ಪ್ಯಾಲೇಸ್ತೀನಿಯರನ್ನು ನಿರಂತರವಾಗಿ ಕೊಲ್ಲುತ್ತಿದೆ. ಯೆಮೆನ್ ಮತ್ತು ಗಾಝ ಮೇಲಿನ ದಾಳಿಗಳು ಅಮೇರಿಕ ಕುಮ್ಮಕ್ಕಿನಿಂದ ಇಸ್ರೇಲ್ ನಡೆಸುತ್ತಿರುವ ಕಾನೂನು ಬಾಹಿರ ಯುದ್ಧಗಳಾಗಿವೆ.
ಯೆಮೆನ್ ಮೇಲಿನ ದಾಳಿಯನ್ನು ಅದೇ ದೃಷ್ಟಿಯಲ್ಲಿ ನೋಡಬೇಕೇ ಹೊರತು, ಈ ರೀತಿಯ ಯೋದ್ಧಕೋರತನವನ್ನು ವಿಸ್ತರಿಸುವ ಪತ್ರಿಕಾ ಧರ್ಮದಿಂದಲ್ಲ. ಯೆಮೆನ್‌ಗೆ ಇರಾನ್ ಶಸ್ತ್ರಾಸ್ತ್ರ ಪೂರೈಸುತ್ತಿದೆ ಎಂಬ ಸುಳ್ಳು ಆಪಾದನೆಯ ವರದಿಯನ್ನು ಸೃಷ್ಟಿಸಿ, ಮುಂದಿನ ಯೋಜನೆಯಲ್ಲಿರುವ ಇರಾನ್ ಮೇಲಿನ ಯುದ್ಧಕ್ಕೆ ಇಸ್ರೇಲ್ ಮತ್ತು ಅಮೇರಿಕ ಮಾನಸಿಕ ಸಿದ್ಧತೆಗಳನ್ನು ಈ ರೀತಿ ಸೃಷ್ಟಿಸುತ್ತಿವೆ. ಪಾಶ್ಚಾತ್ಯ ಮಾಧ್ಯಮಗಳು (ದಿ ಅಟ್ಲಾಂಟಿಕ್ ಸೇರಿದಂತೆ) ಸಾಮ್ರಾಜ್ಯಶಾಹಿ ಆಕ್ರಮಣಕಾರಿ ನೀತಿಗಳನ್ನು ನ್ಯಾಯೀಕರಿಸುವ ಸಾಧನವಾಗಿ ಕಾರ್ಯನಿರ್ವಹಿಸುತ್ತಿವೆ. ಗೋಲ್ಡ್‌ಬರ್ಗ್ ಅವರ ವರದಿಗಳು ಇದಕ್ಕೆ ಉದಾಹರಣೆಯಾಗಿವೆ.
ನಿಜವಾದ ಪತ್ರಿಕೋದ್ಯಮವು ಅಧಿಕಾರವನ್ನು ಪ್ರಶ್ನಿಸಬೇಕು, ಅದರ ಪ್ರಚಾರಕನಾಗಬಾರದು.