ಕ್ರೀಡಾ ಕ್ಷೇತ್ರದಲ್ಲಿ ಸೋಲು ಗೆಲುವು ಸಾಮಾನ್ಯ. ಅದಕ್ಕಿಂತ ಮೈದಾನದಲ್ಲಿಳಿದು ಆಡುವ ಧೈರ್ಯವೂ ಕೂಡ ಒಂದು ಗೆಲುವೇ ಎಂದು ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷರಾದ ಶ್ರೀನಾಥ ಪೂಜಾರಿ ಹೇಳಿದರು.
ವಿಜಯಪುರ ನಗರದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ವಿಜಯಪುರ ಜಿಲ್ಲಾ ಘಟಕದ ವತಿಯಿಂದ ವಿಶೇಷ ನಾಲ್ಕು ದಿನದ ಡಾ. ಬಾಬಾಸಾಹೇಬರ ಅಂಬೇಡ್ಕರ್ ರವರ ಜಯಂತೋತ್ಸವದ ಅಂಗವಾಗಿ ʼಅಂಬೇಡ್ಕರ್ ಕಪ್ʼ ಮಹಾನಾಯಕ ಕ್ರಿಕೆಟ್ ಟೂರ್ನಮೆಂಟ್ ನ್ನು ಹಮ್ಮಿಕೊಂಡಿದ್ದು, ಇಂದು ಅದರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
“ಫೈನಲ್ ವಿಜೇತ ತಂಡಕ್ಕೆ ಪ್ರಥಮ ಬಹುಮಾನ 15,000 ಸಾವಿರ, ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಡುವ ತಂಡಕ್ಕೆ ದ್ವಿತೀಯ ಬಹುಮಾನ 10,000 ಸಾವಿರ ಬಹುಮಾನ ಇರಲಿದೆ. ಜಿಲ್ಲೆಯ ಕಾಲೇಜು ಮತ್ತು ವಸತಿ ನಿಲಯ ಹಾಗೂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಈ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಲು ಮುಕ್ತ ಅವಕಾಶ ಇರಲಿದೆ” ಎಂದರು.
ದವಿಪ ಜಿಲ್ಲಾ ಸಂಚಾಲಕ ಅಕ್ಷಯ್ ಕುಮಾರ್ ಅಜಮನಿ ಮಾತನಾಡಿ, “ಏ.13 ರಂದು ಅಂಬೇಡ್ಕರ್ ಸರ್ಕಲ್ ನಲ್ಲಿ ನಡೆಯುವ ಅಂಬೇಡ್ಕರ್ ಹಬ್ಬ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಯಿಂದ ಆಗಮಿಸಿದ ಗಣ್ಯವ್ಯಕ್ತಿಗಳಿಂದ ಪ್ರಶಸ್ತಿ ಪ್ರದಾನ ಮಾಡಿಸಲಾಗುವುದು. ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ನೀಡಲಾಗುವುದು” ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಜಿ ಇಂಡಿ, “ಆಟದ ಮೈದಾನದಲ್ಲಿ ಚಳಿ ಬಿಸಿಲು ಮಳೆ ಎನ್ನದೆ ಆಡಿದಾಗ ಮಾತ್ರ ವಿದ್ಯಾರ್ಥಿಗಳು ಬಲಶಾಲಿಗಳಾಗುತ್ತಾರೆ. ವಿದ್ಯಾರ್ಥಿಗಳು ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯವಾದುದು” ಎಂದರು.
ಇದನ್ನೂ ಓದಿ: ವಿಜಯಪುರ | ಏ.1ರಿಂದ ₹10,000 ಗೌರವಧನ ನೀಡುವಂತೆ ಆಶಾ ಕಾರ್ಯಕರ್ತೆಯರ ಆಗ್ರಹ
ಕಾರ್ಯಕ್ರಮದಲ್ಲಿ ಇಲಾಖೆಯ ನಿಲಯ ಪಾಲಕ ಆನಂದ ಕಳಸಗೊಂಡ, ಸದಾನಂದ ಬಡಿಗೇರ್, ಕಚೇರಿ ಅಧೀಕ್ಷಕ ಅರವಿಂದ ಲಂಬು, ವಿದ್ಯಾರ್ಥಿ ಪರಿಷತ್ ಮುಖಂಡ ಮಾದೇಶ್ ಚಲವಾದಿ, ಸಂದೇಶ್ ಕುಮುಟಗಿ, ಶೆಂಕರ್ ಬಸರಗಿ, ದಾವೂದ್ ನಾಯ್ಕೊಡಿ, ಅಕ್ಷಯ್, ಆಕಾಶ್ ಮತ್ತು ಕ್ರೀಡಾ ಪಟುಗಳು ಭಾಗಿಯಾಗಿದ್ದರು.