ದೆಹಲಿ ಮಾರುಕಟ್ಟೆಗೆ ಕಾಲಿಟ್ಟ ನಂತರ ಉತ್ತರ ಭಾರತದಲ್ಲಿ ತನ್ನ ಮಾರುಕಟ್ಟೆಯ ಜಾಲವನ್ನು ವಿಸ್ತರಿಸಿಕೊಳ್ಳುತ್ತಿರುವ ಕನ್ನಡಿಗರ ಹೆಮ್ಮೆಯ ಹಾಲಿನ ಬ್ರ್ಯಾಂಡ್ ‘ನಂದಿನಿ’ ಈಗ ಉತ್ತರ ಪ್ರದೇಶ ಮಾತ್ರವಲ್ಲದೇ ಹರಿಯಾಣಕ್ಕೂ ಲಗ್ಗೆ ಇಟ್ಟಿದೆ.
ಶೀಘ್ರವೇ ಹರಿಯಾಣದಲ್ಲಿ ‘ನಂದಿನಿ’ ಹಾಲು ಮಾರಾಟ ಆರಂಭಿಸಲಾಗುವುದು ಎಂದು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯು (ಕೆಎಂಎಫ್) ಗುರುವಾರ ತಿಳಿಸಿದೆ.
ದೆಹಲಿ ಮಾರುಕಟ್ಟೆ ನಂತರ ‘ನಂದಿನಿ’ ಉತ್ತರ ಭಾರತದ ಆಗ್ರಾ, ಮಥುರಾ, ಮೀರತ್ ಹಾಗೂ ಅಲಿಗರ್ ಪ್ರದೇಶಗಳಲ್ಲೂ ಹಾಲು-ಮೊಸರು ಮಾರಾಟವನ್ನು ಪ್ರಾರಂಭಿಸಿದೆ. ಈ ಸಂಬಂಧ ಉತ್ತರಪ್ರದೇಶದ ‘ಹತ್ರಾಸ್’ ಜಿಲ್ಲೆಯಲ್ಲಿ ನೂತನ ಹಾಲು ಸಂಸ್ಕರಣಾ ಘಟಕವನ್ನು ಸ್ಥಾಪಿಸಿದೆ.
“ಉತ್ತರ ಭಾರತದ ವ್ಯಾಪ್ತಿಯಲ್ಲಿ ನಂದಿನಿ ಹಾಲು ಮಾರಾಟದ ಜಾಲವನ್ನು ಮತ್ತಷ್ಟು ಸದೃಢಗೊಳಿಸಲು ನಿರ್ಧರಿಸಲಾಗಿದೆ. ಇದಕ್ಕೆ ಪೂರಕವಾಗಿ ವಿತರಕರೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಗ್ರಾಹಕರಲ್ಲಿ ಅರಿವು ಮೂಡಿಸಲು ‘ಹರ್ ಘರ್ ನಂದಿನಿ’ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ” ” ಎಂದು ಕೆಎಂಎಫ್‌ನ ಉತ್ತರ ಭಾರತದ ಮುಖ್ಯಸ್ಥ ಅಮಿತ್ ಸಿಂಗ್ ಹೇಳಿದ್ದಾರೆ.
ಹೈನೋದ್ಯಮದಲ್ಲಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಸಂಸ್ಥೆಯು ರಾಷ್ಟ್ರದಲ್ಲಿಯೇ ಎರಡನೇಯ ದೊಡ್ಡ ಹಾಲು ಸಹಕಾರ ಸಂಸ್ಥೆಯಾಗಿದೆ.
ಕೆಎಂಎಫ್ ಸಂಸ್ಥೆಯು ಸದಸ್ಯ ಜಿಲ್ಲಾ ಹಾಲು ಒಕ್ಕೂಟಗಳ ಮೂಲಕ 26 ಲಕ್ಷಕ್ಕೂ ಹೆಚ್ಚಿನ ಹೈನುಗಾರ ರೈತರಿಂದ ಹಾಲನ್ನು ಖರೀದಿಸಿ. ಸಂಸ್ಕರಿಸಿ ‘ಗೋವಿನಿಂದ ಗ್ರಾಹಕರವರೆಗೆ’ ಎಂಬ ಶೀರ್ಷಿಕೆಯನ್ನು ಹೊತ್ತು ‘ನಂದಿನಿ’ ಬ್ರ್ಯಾಂಡ್ ಅಡಿಯಲ್ಲಿ ಉತ್ಕೃಷ್ಟ ಗುಣಮಟ್ಟದ ವಿವಿಧ ಮಾದರಿಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸ್ಪರ್ಧಾತ್ಮಕ ಬೆಲೆಗಳಲ್ಲಿ ಕಳೆದ 05 ದಶಕಗಳಿಂದ ಮಾರಾಟ ಮಾಡಲಾಗುತ್ತಿದೆ.