ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧದ ಹಾಸ್ಯ ಮಾಡಿದ್ದಕ್ಕಾಗಿ ಪೊಲೀಸ್ ಪ್ರಕರಣ ಎದುರಿಸುತ್ತಿರುವ ಹಾಸ್ಯ ಕಲಾವಿದ ಮತ್ತೊಂದು ತೊಂದರೆಯಲ್ಲಿ ಸಿಲುಕಿಕೊಂಡಿದ್ದು, ಅವರ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡಲು ರಾಜ್ಯ ವಿಧಾನ ಪರಿಷತ್ ಒಪ್ಪಿಗೆ ನೀಡಿದೆ.
“ವಿಶ್ವಾಸದ್ರೋಹಿ” ಎಂಬ ಪದ ಬಳಕೆಗಾಗಿ ಕುನಾಲ್ ಕಾಮ್ರಾ ವಿರುದ್ಧದ ಹಕ್ಕುಚ್ಯುತಿ ನೋಟಿಸನ್ನು ವಿಧಾನ ಪರಿಷತ್ನ ವಿಶೇಷ ಹಕ್ಕುಗಳ ಸಮಿತಿ ಒಪ್ಪಿಕೊಂಡಿದೆ ಎಂದು ಸಭಾಪತಿ ರಾಮ್ ಶಿಂಧೆ ತಿಳಿಸಿದ್ದಾರೆ.
ಸಂಸತ್ ಸದಸ್ಯರು ಅಥವಾ ಶಾಸಕರು ತಮ್ಮ ಕಾರ್ತವ್ಯಗಳನ್ನು ನಿಭಾಯಿಸಲು ಅಗತ್ಯವಾಗಿ ಹೊಂದಿರುವ ವಿಶೇಷ ಹಕ್ಕುಗಳು ಮತ್ತು ರಕ್ಷಣೆಯನ್ನು ಕಡೆಗಣಿಸುವ ಮತ್ತು ಅಗೌರವಿಸುವ ವ್ಯಕ್ತಿಗಳ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸಬಹುದಾಗಿದೆ.
ಈ ಸುದ್ದಿ ಓದಿದ್ದೀರಾ? ಆಘಾತಕಾರಿ ಘಟನೆ | ಮಹಿಳೆ ಮೇಲೆ 18 ಕಾಮುಕರಿಂದ 18 ತಿಂಗಳು ನಿರಂತರ ಸಾಮೂಹಿಕ ಅತ್ಯಾಚಾರ
ರಾಜ್ಯ ಪ್ರವಾಸೋದ್ಯಮ ಖಾತೆ ಸಚಿವ ಮತ್ತು ಶಿವಸೇನೆ ಮುಖಂಡ ಶಂಭುರಾಜ್ ದೇಸಾಯಿ ಈ ಬಗ್ಗೆ ಸುದ್ದಿಗಾರರಿಗೆ ಮಾತನಾಡಿ, ಕುನಾಲ್ ಕಾಮ್ರಾ ಅವರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದರು. ಜತೆಗೆ ಪಕ್ಷದ ಕಾರ್ಯಕರ್ತರ ತಾಳ್ಮೆ ಪರೀಕ್ಷಿಸಬೇಡಿ ಎಂದು ಎಚ್ಚರಿಕೆ ನೀಡಿದರು.
ಎಲ್ಲರೂ ತಾಳ್ಮೆಯಿಂದ ಇರುವಂತೆ ಶಿಂಧೆ ತಾಕೀತು ಮಾಡಿದ್ದಾರೆ. ಆದ್ದರಿಂದ ನಾವು ಸುಮ್ಮನಿದ್ದೇವೆ. ಆತ ಎಲ್ಲೇ ಅಡಗಿಕೊಂಡಿದ್ದರೂ ಹೇಗೆ ಹೊರಗೆಳೆದು ತರಬೇಕು ಎನ್ನುವುದು ಶಿವಸೇನೆ ಕಾರ್ಯಕರ್ತರಿಗೆ ಗೊತ್ತು. ಆದರೆ ಸಚಿವರಾಗಿ ನಾವು ಕೆಲ ನಿರ್ಬಂಧಗಳನ್ನು ಹೊಂದಿದ್ದೇವೆ ಎಂದು ದೇಸಾಯಿ ತಿಳಿಸಿದ್ದಾರೆ.
“ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ. ಆತ ಎಲ್ಲೇ ಅಡಗಿದ್ದರೂ ಪತ್ತೆ ಮಾಡಿ ಆತನಿಗೆ “ಪ್ರಸಾದ ನೀಡಿ” ಎಂದು ಪೊಲೀಸರನ್ನು ದೇಸಾಯಿ ಆಗ್ರಹಿಸಿದರು.