ಕರ್ನಾಟಕ ಮೂಲದ ಕೆನಡಾ ಸಂಸದರಾದ ಚಂದ್ರ ಆರ್ಯ ಅವರಿಗೆ ಕೆನಡಾದ ಲಿಬರಲ್ ಪಕ್ಷವು, ಲಿಬರಲ್ ಪಕ್ಷದ ಅಧ್ಯಕ್ಷ ಸ್ಥಾನ ಮತ್ತು ಮುಂಬರುವ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಿದೆ.
ಭಾರತದ ಸರ್ಕಾರದ ಜೊತೆಗೆ ಸಂಪರ್ಕ ಹೊಂದಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ನಿಷೇಧ ಹೇರಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇಂತಹದ್ದೊಂದು ನಿಷೇಧಕ್ಕೆ ಲಿಬರಲ್ ಪಕ್ಷ ಬಹಿರಂಗವಾಗಿ ಯಾವುದೇ ಕಾರಣಗಳನ್ನು ನೀಡದೇ ಇದ್ದರೂ, ಭಾರತ ಸರ್ಕಾರದೊಂದಿಗಿನ ಆರ್ಯ ನಂಟಿನ ಕಾರಣಕ್ಕೆ ಅವರಿಗೆ ಈ ಶಿಕ್ಷೆ ನೀಡಲಾಗಿದೆ ಎಂದು ಪಕ್ಷದ ಮೂಲಗಳನ್ನು ಉಲ್ಲೇಖಿಸಿ ‘ಗ್ಲೋಬ್ ಆ್ಯಂಡ್ ಮೇಲ್’ ಪತ್ರಿಕೆ ವರದಿ ಮಾಡಿದೆ.
ಈ ಹಿಂದೆ ನೇಪಿಯನ್ ಕ್ಷೇತ್ರದಿಂದ ಸಂಸತ್‌ಗೆ ಆಯ್ಕೆಯಾಗಿದ್ದ ಕರ್ನಾಟಕದ ತುಮಕೂರು ಮೂಲದ ಚಂದ್ರ ಆರ್ಯ, ಈ ಬಾರಿಯೂ ಅದೇ ಕ್ಷೇತ್ರದಿಂದ ಆಯ್ಕೆ ಬಯಸಿದ್ದರು. ಜೊತೆಗೆ ತಾವು ಕೂಡಾ ಮುಂದಿನ ಪ್ರಧಾನಿ ಹುದ್ದೆ ರೇಸ್‌ನಲ್ಲಿ ಇರುವುದಾಗಿ ಹೇಳಿದ್ದರು. ಆದರೆ ಕಳೆದ ವರ್ಷ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಪೂರ್ಣ ಹದಗೆಟ್ಟ ಹೊತ್ತಿನಲ್ಲೇ ಚಂದ್ರ ಆರ್ಯ ಭಾರತಕ್ಕೆ ಭೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದರು.
ಈ ಕುರಿತ ಮಾಹಿತಿಯನ್ನು ಅವರು ಪಕ್ಷದೊಂದಿಗೆ ಹಂಚಿಕೊಂಡಿಲ್ಲ ಎಂಬ ಕಾರಣ ನೀಡಿ ಇದೀಗ ಅವರಿಗೆ ಮುಂಬರುವ ಸಂಸತ್ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸುವ ಜೊತೆಗೆ, ಪಕ್ಷದ ಅಧ್ಯಕ್ಷೀಯ ಸ್ಥಾನಕ್ಕೂ ಸ್ಪರ್ಧಿಸದಂತೆ ನಿರ್ಬಂಧ ಹೇರಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರೂಪಾಯಿ ಮೌಲ್ಯ ಕುಸಿತವೂ, ವಿಶ್ವಗುರುವಿನತ್ತ ಮೋದಿ ಭಾರತವೂ
ಈ ನಡುವೆ ಭಾರತದ ಅಣತಿಯಂತೆ ತಾವು ನಡೆದುಕೊಳ್ಳುತ್ತಿರುವುದಾಗಿ ಕೇಳಿಬಂದ ಆರೋಪಗಳನ್ನು ಪೂರ್ಣವಾಗಿ ತಿರಸ್ಕರಿಸಿರುವ ಚಂದ್ರ ಆರ್ಯ, ‘ಸಂಸತ್ತಿನ ಸದಸ್ಯನಾಗಿ ನಾನು ಕೆನಡಾ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ರಾಜತಾಂತ್ರಿಕರು ಮತ್ತು ಸರ್ಕಾರದ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದೇನೆ. ಹಾಗೆ ನಡೆಸಲು ನಾನು ಒಮ್ಮೆಯೂ ಸರ್ಕಾರದಿಂದ ಅನುಮತಿ ಪಡೆದಿಲ್ಲ. ಹಾಗೆಯೇ ಮಾಡುವ ಅಗತ್ಯವೂ ಇಲ್ಲ. ಜೊತೆಗೆ ಕೆನಡಾ ಹಿಂದೂಗಳ ಪರ ಹೋರಾಟ ಮತ್ತು ಖಲಿಸ್ತಾನಿಗಳ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಈ ರೀತಿ ಮಾಡಲಾಗಿದೆ’ ಎಂದು ಹೇಳಿದ್ದಾರೆ.
ತುಮಕೂರು ಜಿಲ್ಲೆ ಸಿರಾ ತಾಲೂಕಿನ ದ್ವಾರಾಳು ಗ್ರಾಮದ ಮೂಲದವರಾಗಿರುವ ಚಂದ್ರ ಆರ್ಯ ಅವರು ಈ ಹಿಂದೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ರಾಜೀನಾಮೆ ಹಿನ್ನೆಲೆಯಲ್ಲಿ ಪ್ರಧಾನಿ ಹುದ್ದೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ನಾಮಪತ್ರ ಸಲ್ಲಿಸಿದ ನಂತರ “ಕೆನಡಾದಲ್ಲಿ ಸಂಸತ್ ಸದಸ್ಯನಾಗಿ ಆಯ್ಕೆಯಾಗಿ ಮತ್ತು ಕನ್ನಡದಲ್ಲಿ ಮಾತನಾಡುವುದು, ಸುಮಾರು ಐದು ಕೋಟಿ ಕನ್ನಡಿಗರಿಗೆ ಹಮ್ಮೆಯ ವಿಚಾರ. ಕೆನಡಾ ದೇಶದ ಕನ್ನಡಿಗರು 2018ನೇ ಇಸವಿಯಲ್ಲಿ ಕೆನಡಾದ ಈ ಸಂಸತ್ತಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದರು” ಎಂದು ಹೇಳಿದ್ದರು
ಇದೇ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪು ಬರೆದಿರುವ ಹಾಗೂ ನಟಸಾರ್ವಭೌಮ ಡಾ. ರಾಜ್ಕುಮಾರ್ ಹಾಡಿರುವ ಭಾವಗೀತೆ “ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ, ಕನ್ನಡವೇ ನಿತ್ಯ” ಗೀತೆ ಗುನಿಗಿದ್ದರು.