ಹೋಳಿ ಹಬ್ಬದ ದಿನ ಮದ್ಯಪಾನ ಮಾಡಿ, ಹಬ್ಬ ಆಚರಿಸುತ್ತಿದ್ದ ವಿಕೃತ ದುಷ್ಕರ್ಮಿಗಳ ಗುಂಪೊಂದು ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಬಿಹಾರದ ದರ್ಭಾಂಗಾ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹಳ್ಳಿಯೊಂದರಲ್ಲಿ ಮಾರ್ಚ್ 15ರಂದು ಘಟನೆ ನಡೆದಿದೆ. ಅಂದು ಹೋಳಿ ಹಬ್ಬ ಆಚರಿಸಲಾಗುತ್ತಿತ್ತು. ಅಂದಿನ ರಾತ್ರಿ ಸುಮಾರು 9 ಗಂಟೆಯ ಸಮಯದಲ್ಲಿ ಬಾಲಕಿ ಬಯಲು ಶೌಚಕ್ಕಾಗಿ ಮನೆಯಿಂದ ಹೊರ ಬಂದಿದ್ದಾಳೆ. ಆಗ, ಕಾಮುಕ ದುಷ್ಕರ್ಮಿಗಳ ಗುಂಪು ಆಕೆಯನ್ನು ಬಲವಂತವಾಗಿ ತೋಟಕ್ಕೆ ಎಳೆದೊಯ್ದು, ಸಾಮೂಹಿಕ ಅತ್ಯಾಚಾರ ಎಸಗಿದೆ. ಪ್ರಜ್ಞಾಹೀನಳಾಗಿದ್ದ ಬಾಲಕಿಯನ್ನು ಸ್ಥಳದಲ್ಲೇ ಬಿಟ್ಟು ಕಾಮುಕರು ಪರಾರಿಯಾಗಿದ್ದಾರೆ.
ಮರುದಿನ ಬೆಳಗ್ಗೆ ಆಕೆಯ ಕುಟುಂಬಸ್ಥರು ಆಕೆಯನ್ನು ಹುಡುಕಿದ್ದು, ತೋಟದಲ್ಲಿ ಪ್ರಜ್ಞಾಹೀನಳಾಗಿ ಆಕೆ ಬಿದ್ದಿರುವುದನ್ನು ಗಮನಿಸಿದ್ದಾರೆ. ಮನೆಗೆ ಕೊರೆದೊಯ್ದಿದ್ದಾರೆ. ಅತ್ಯಾಚಾರದ ಕೃತ್ಯವನ್ನು ಕಾಮುಕರು ವಿಡಿಯೋ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಬಾಲಕಿ ಹೇಳಿಕೊಂಡಿದ್ದಾರೆ.
ಕುಟುಂಬಸ್ಥರು ಬಾಲಕಿಯನ್ನು ಸಂತೈಸಿದ್ದು, ಧೈರ್ಯ ತುಂಬಿದ್ದಾರೆ. ಬಳಿಕ, ಪೊಲೀಸ್ ಠಾಣೆಗೆ ಕರೆದೊಯ್ದು ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಆರೋಪಿಗಳ ಹೆಸರನ್ನು ಬಾಲಕಿ ಹೆಸರಿಸಿದ್ದಾರೆ.
“ಅವಮಾನಕ್ಕೆ ಹದರಿ ಘಟನೆ ನಡೆದ ದಿನ ನಾವು ಪೊಲೀಸರಿಗೆ ದೂರು ನೀಡಿರಲಿಲ್ಲ. ಆದರೆ, ಗ್ರಾಮದ ಹಲವರು ವಿಷಯ ತಿಳಿದ ಬಳಿಕ, ದೂರು ನೀಡುವಂತೆ ಸೂಚಿಸಿದರು. ಬಳಿಕ, ಬಹೆರಾ ಪೊಲೀಸ್ ಠಾಣೆಯಲ್ಲಿ 10 ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ” ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ.
ಘಟನೆ ನಡೆದ ಒಂದು ವಾರದ ಬಳಿಕ, ಮಾರ್ಚ್ 25ರಂದು ದೂರು ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಪರಾಧದ ಸ್ಥಳವನ್ನು ಪರಿಶೀಲಿಸಿದ್ದು, ಸ್ಥಳದಲ್ಲಿ ರಕ್ತದ ಕಲೆಗಳು ಕಂಡುಬಂದಿವೆ ಎಂದು ವರದಿಯಾಗಿದೆ. ಇಬ್ಬರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಈ ವರದಿ ಓದಿದ್ದೀರಾ?: ಸಾಮ್ರಾಜ್ಯಶಾಹಿ ಕ್ರೌರ್ಯ ಮತ್ತು ಮಾನಸಿಕ ಯುದ್ಧ ತಂತ್ರಗಳು
ಬಹೆರಾ ಪೊಲೀಸ್ ಠಾಣೆಯ ಅಧಿಕಾರಿ ಚಂದ್ರಕಾಂತ್ ಗೌಡ್ಡಿ, “ಘಟನೆಯ ಬಗ್ಗೆ ನಮಗೆ ಮಾಹಿತಿ ಬಂದ ತಕ್ಷಣ, ಎಫ್‌ಐಆರ್ ದಾಖಲಿಸಿದ್ದೇವೆ. ತನಿಖೆ ನಡೆಯುತ್ತಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಹೇಳಿದ್ದಾರೆ.
ದರ್ಭಾಂಗಾ ಗ್ರಾಮೀಣ ಎಸ್‌ಪಿ ಅಲೋಕ್ ಕುಮಾರ್, “ಪ್ರಕರಣವನ್ನು ಬಹಳ ತಡವಾಗಿ ದಾಖಲಿಸಲಾಗಿದೆ. ಆದ್ದರಿಂದ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ತನಿಖೆ ನಡೆಯುತ್ತಿದೆ. ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಅಪರಾಧಿಗಳನ್ನು ಬಿಡುವುದಿಲ್ಲ” ಎಂದು ಹೇಳಿದ್ದಾರೆ.
ಗಮನಿಸಿ: ಅತ್ಯಾಚಾರವು ಒಂದು ಗಂಭೀರ ಸಾಮಾಜಿಕ ದುಷ್ಕೃತ್ಯ. ಈ ಕ್ರೂರ ಕೃತ್ಯವು ಸಮಾಜದ ನೈತಿಕತೆ ಮತ್ತು ಮಾನವೀಯತೆಯನ್ನು ಕುಂದಿಸುತ್ತದೆ. ಅತ್ಯಾಚಾರವನ್ನು ತಡೆಯುವುದು ಮತ್ತು ಅತ್ಯಾಚಾರ ಮುಕ್ತ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ. ಮಹಿಳೆಯರು ಭಯಮುಕ್ತವಾಗಿ ಬದುಕಲು ಹೆಣ್ಣುಮಕ್ಕಳ ಸುರಕ್ಷತೆ, ಗೌರವ ಮತ್ತು ನ್ಯಾಯವನ್ನು ಕಾಪಾಡಲು ನಾವು ಒಗ್ಗೂಡಿ ಹೋರಾಡಬೇಕು.ಅತ್ಯಾಚಾರದ ವಿರುದ್ಧ ಕಠಿಣ ಕಾನೂನು ಜಾರಿಯಾಗಬೇಕು ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ನಮ್ಮ ಕುಟುಂಬಗಳಲ್ಲಿ, ಶಾಲೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳ ಜೊತೆ ಗೌರವ ಮತ್ತು ಸಂವೇದನೆಯಿಂದ ನಡೆದುಕೊಳ್ಳಬೇಕು. ಮಹಿಳೆಯರ ರಕ್ಷಣೆಯ ಹೊಣೆ ನಮ್ಮೆಲ್ಲರದ್ದಾಗಿದೆ.