ಪಂಜಾಬ್ ರಾಜ್ಯದಲ್ಲಿ ರೈತರ ಮೇಲೆ ನಡೆಸಿದ ದಾಳಿಯು ಅಮಾನುಷವಾಗಿದ್ದು ಹಲ್ಲೆಯನ್ನು ಖಂಡಿಸಿ ದಾವಣಗೆರೆ ನಗರದ ಜಯದೇವ ಸರ್ಕಲ್ ನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಅಡಿಯಲ್ಲಿ ವಿವಿಧ ಸಂಘಟನೆಗಳ ರೈತ ಹೋರಾಟಗಾರರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿ ಹಲ್ಲೆ ನಡೆಸಿದವರ ಮೇಲೆ ಕ್ರಮಕ್ಕೆ ಒತ್ತಾಯಿಸಿ ದಾವಣಗೆರೆ ಜಿಲ್ಲಾಧಿಕಾರಿಗಳ ಮೂಲಕ ಪಂಜಾಬ್ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಇತ್ತೀಚಿಗೆ ಪಂಜಾಬ್ ರಾಜ್ಯದಲ್ಲಿ ರೈತರ ಮೇಲೆ ನಡೆದ ದಾಳಿಯು ಅಮಾನುಷವಾಗಿದೆ. ಈ ನಿಟ್ಟಿನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ದೇಶಾದ್ಯಂತ ಮಾರ್ಚ್ 28 ರಂದು ಪ್ರತಿಭಟನಾ ಕರೆಯ ಮೇರೆಗೆ ದಾವಣಗೆರೆ ಜಿಲ್ಲಾ ಸಂಯುಕ್ತ ಕಿಸಾನ್ ಮೋರ್ಚಾ ಪ್ರತಿಭಟನೆ ನಡೆಸುತ್ತಿದೆ. ಅಂತಹ ದಾಳಿಯನ್ನು ಸಂಯುಕ್ತ ಕಿಸಾನ್ ಮೋರ್ಚಾ ಖಂಡಿಸುತ್ತದೆ. ರೈತರು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಿದರೆ ಸರ್ಕಾರಗಳು ಅದನ್ನು ಗಮನಿಸುತ್ತಿಲ್ಲ. ರೈತ ಚಳುವಳಿ ಮತ್ತೊಮ್ಮೆ ಪುಟ್ಟಿದೇಳುವ ನಿಟ್ಟಿನಲ್ಲಿ ಹೊರಟಿದೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಡಾ. ಸುನಿತ್ ಕುಮಾರ್ “ಪಂಜಾಬ್ ನಲ್ಲಿ, ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತಿರುವ ರೈತರ ಮೇಲೆ ಪಂಜಾಬ್ ಸರ್ಕಾರವು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಪೊಲೀಸರ ಮೂಲಕ ದಬ್ಬಾಳಿಕೆಯನ್ನು ನಡೆಸುತ್ತಿದೆ. ದೇಶದ ಸಂವಿಧಾನದ ಪ್ರಕಾರ, ದೇಶದ ನಾಗರಿಕರು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಪ್ರತಿಭಟಿಸುವ ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕನ್ನು ಹೊಂದಿದ್ದಾರೆ. ರೈತರಿಗೆ ಮಾರಕವಾದ ವಿದ್ಯುತ್ ಬಿಲ್ ತಂದಿದ್ದಾರೆ. ಈಗಿರುವ ವಿದ್ಯುತ್ ಬಿಲ್ ಕಟ್ಟುವುದಕ್ಕೆಯೇ ರೈತರಿಗೆ ಸಾದ್ಯವಿಲ್ಲ. ರೈತರಿಗೆ ವಿದ್ಯುತ್ ಬಿಲ್ ಅಗತ್ಯವಿಲ್ಲ. ರೈತರನ್ನು ಶೋಷಿಸುವ ಗುತ್ತಿಗೆ ಆಧಾರಿತ ಕೃಷಿ ಬೇಡ. ಎಪಿಎಂಸಿ ಗಳಲ್ಲಿ ದಲ್ಲಾಳಿಗಳು, ಮಧ್ಯವರ್ತಿಗಳು ರೈತರನ್ನು ದೋಚುತ್ತಿದ್ದಾರೆ. ಅದನ್ನು ಸರಿಪಡಿಸಿ ಎಂದರೆ ಮತ್ತೆ ರೈತರ ಶೋಷಣೆಯ ಕೃಷಿ ಕಾಯ್ದೆ ತರುತ್ತಿದ್ದಾರೆ. ಇಂತಹ ಸರ್ಕಾರಗಳಿಂದ ರೈತರಿಗೆ ನ್ಯಾಯ ಸಿಗುವುದಿಲ್ಲ. ಹೀಗಾಗಿ ರೈತ ಸಮುದಾಯ ಒಟ್ಟಾಗಿ ಬೀದಿಗಿಳಿಯುವುದು ಅನಿವಾರ್ಯವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಅರುಣ್ ಕುಮಾರ್ ಕುರುಡಿ ಮಾತನಾಡಿ, “ಮಾರ್ಚ್ 19 ರಂದು, ಕೇಂದ್ರ ಸರ್ಕಾರದ ಮಂತ್ರಿಗಳೊಂದಿಗೆ ಮಾತನಾಡಿ ಹಿಂತಿರುಗುತ್ತಿದ್ದ ರೈತ ನಾಯಕರನ್ನು ಬಂಧಿಸಲಾಗಿದೆ. ಶಂಭು ಮತ್ತು ಖಾನೌರಿಯಲ್ಲಿ ಡೇರೆಗಳು ಮತ್ತು ವಸ್ತುಗಳನ್ನು ಬುಲ್ಡೋಜರ್ ಮೂಲಕ ಧ್ವಂಸಗೊಳಿಸಿ ರೈತರ ಧರಣಿಯನ್ನು ಬಲವಂತವಾಗಿ ಹತ್ತಿಕ್ಕಲಾಯಿತು. ಟ್ರ್ಯಾಕ್ಟರ್ ಟ್ರಾಲಿಗಳು ಸೇರಿದಂತೆ ರೈತರ ಉಪಕರಣಗಳನ್ನು ಧ್ವಂಸಗೊಳಿಸಲಾಗಿದೆ. ಮತ್ತು ರೈತರ ವಸ್ತುಗಳನ್ನು ಕಳವು ಮಾಡಿದ್ದಾರೆ. ಈ ಮೂಲಕ ಪಂಜಾಬ್ ಸರ್ಕಾರ ರೈತರ ಮೇಲೆ ದೌರ್ಜನ್ಯವೆಸಗಿದೆ” ಎಂದು ಆಪಾದಿಸಿದರು.

ಕಾರ್ಮಿಕ ಮುಖಂಡ ಮಂಜುನಾಥ ಕೈದಾಳ ಮಾತನಾಡಿ, “ಪಂಜಾಬ್‌ನಲ್ಲಿ ಪೊಲೀಸ್ ರಾಜ್ಯವನ್ನು ಸ್ಥಾಪಿಸುವ ಮೂಲಕ ಜನರ ಪ್ರಜಾಪ್ರಭುತ್ವ ಹಕ್ಕುಗಳನ್ನು ತುಳಿದು ಹಾಕಲಾಗುತ್ತಿದೆ. ಕರ್ನಲ್ ಪುಷ್ಪಿಂದರ್ ಸಿಂಗ್ ಬಾತ್ ವಿರುದ್ಧದ ಪೊಲೀಸ್ ದೌರ್ಜನ್ಯ ಮತ್ತು ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ಸ್ಪಷ್ಟ ಸೂಚನೆಗಳ ಹೊರತಾಗಿಯೂ ಬುಲ್ಡೋಜರ್‌ಗಳಿಂದ ಜನರ ಮನೆಗಳನ್ನು ಕೆಡವಿದ್ದಾರೆ. ಗೂಂಡಾಗಳ ರೀತಿ ರೈತರ ಮೇಲೆ ವರ್ತಿಸುತ್ತಿದ್ದಾರೆ. ಈ ಕೂಡಲೇ ರೈತರನ್ನು ಬಿಡುಗಡೆಗೊಳಿಸಿ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ವಿವಿಧ ಸಂಘಟನೆಗಳು, ಹಕ್ಕೊತ್ತಾಯಗಳ ಈಡೇರಿಕೆಗೆ ಕೇಂದ್ರ ಮತ್ತು ಪಂಜಾಬ್ ರಾಜ್ಯಪಾಲರನ್ನು ಒತ್ತಾಯಿಸಿದರು.
ಹಕ್ಕೊತ್ತಾಯಗಳು;
ರೈತರ ಮೇಲೆ ಪೊಲೀಸರು ಬಳಸುತ್ತಿರುವ ಕುರುಡು ಬಲವನ್ನು ನಿಲ್ಲಿಸಬೇಕು ಮತ್ತು ಪ್ರತಿಭಟಿಸುವ ಜನರ ಪ್ರಜಾಸತ್ತಾತ್ಮಕ ಹಕ್ಕನ್ನು ಪುನಃಸ್ಥಾಪಿಸಬೇಕು. ಬಂಧಿಸಲ್ಪಟ್ಟ ಅಥವಾ ಜೈಲಿನಲ್ಲಿರುವ ಎಲ್ಲಾ ರೈತರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು.ರೈತರ ಟ್ರ್ಯಾಕ್ಟರ್-ಟ್ರಾಲಿಗಳು ಸೇರಿದಂತೆ ಎಲ್ಲಾ ಉಪಕರಣಗಳನ್ನು ಹಿಂತಿರುಗಿಸಬೇಕು. ಹಾನಿಗೊಳಗಾದ ಅಥವಾ ಕದ್ದ ಸರಕುಗಳಿಗೆ ಪರಿಹಾರ ನೀಡಬೇಕು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮಲ್ಪೆಯಲ್ಲಿ ಮಹಿಳೆಯನ್ನು ಕಟ್ಟಿ ಹಲ್ಲೆ, ಕ್ರಮಕ್ಕೆ ಮಹಿಳಾ ಒಕ್ಕೂಟ ಆಗ್ರಹ.
- ಪ್ರತಿಭಟನೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ಜಿಲ್ಲಾ ಮುಖಂಡರಾದ ಹೊನ್ನೂರು ಮುನಿಯಪ್ಪ, ಮಧು ತೊಗಲೇರಿ, ಐರಣಿ ಚಂದ್ರು, ಸತೀಶ್ ಅರವಿಂದ್, ಆವರಗೆರೆ ಚಂದ್ರು , ಶ್ರೀನಿವಾಸ್ ಇ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.