ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನವಾದ ಏಪ್ರಿಲ್ 14ರಂದು ರಾಷ್ಟ್ರವ್ಯಾಪಿ ಕೇಂದ್ರ ಸರಕಾರಿ ಕಚೇರಿಗಳಿಗೆ ರಜಾದಿನವಾಗಿ ಕೇಂದ್ರ ಸರಕಾರ ಘೋಷಿಸಿ ಆದೇಶ ಹೊರಡಿಸಿದೆ.
ಐತಿಹಾಸಿಕವಾಗಿ ಅನ್ಯಾಯಕ್ಕೆ ತುತ್ತಾಗಿದ್ದ ಮಹಾನ್ ಮಾನವತಾವಾದಿ ಅಂಬೇಡ್ಕರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಅರ್ಹ ಗೌರವ, ಸಮ್ಮಾನ ಸಮರ್ಪಣೆ ಮಾಡಿದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ರಜಾ ದಿನವನ್ನು ಸ್ವಾಗತಿಸಿ ಎಕ್ಸ್ ತಾಣದಲ್ಲಿ ಬರೆದುಕೊಂಡಿದ್ದಾರೆ.
“ಮನುಕುಲಕ್ಕೆ, ಚೈತನ್ಯಶೀಲ ಭಾರತಕ್ಕೆ ಅಂಬೇಡ್ಕರ್ ಅವರು ನೀಡಿರುವ ಕೊಡುಗೆ ಅಜರಾಮರ. ಪ್ರಧಾನಿಗಳ ಈ ನಿರ್ಧಾರವನ್ನು ನಾನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ಬಾಬಾ ಸಾಹೇಬ್ ಅವರ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ದೃಷ್ಟಿಕೋನವು ಭಾರತವನ್ನು ಸದಾ ಗಟ್ಟಿಗೊಳಿಸುತ್ತಲೇ ಇದೆ” ಎಂದಿದ್ದಾರೆ.
“ಸಂವಿಧಾನ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯವನ್ನು ತಮ್ಮ ಆಡಳಿತದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ರಾಷ್ಟ್ರೀಯ ಗೌರವವನ್ನು ಸಮರ್ಪಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ಜಯಂತಿಯಂದು ಭಾರತಾದ್ಯಂತ ಎಲ್ಲಾ ಕೈಗಾರಿಕಾ ಸಂಸ್ಥೆಗಳು ಸೇರಿದಂತೆ, ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುವ ಎಲ್ಲಾ ಕಚೇರಿಗಳಿಗೂ ಸಾರ್ವತ್ರಿಕ ರಜೆ ಘೋಷಿಸಿರುವುದು ಅತ್ಯಂತ ಅರ್ಥಪೂರ್ಣ ನಿರ್ಧಾರ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
“ಡಾ. ಅಂಬೇಡ್ಕರ್ ಅವರ ಜಯಂತಿ ಅವರ ಸ್ಮರಣೆ ಹಾಗೂ ಆಚರಣೆಗಾಗಿ ಮಾತ್ರ ಸೀಮಿತಗೊಳ್ಳದೆ ಆ ದಿನದಂದು ಅವರ ಮಹಾನ್ ಪರಿಶ್ರಮದಿಂದ ರೂಪುಗೊಂಡ ಸಂವಿಧಾನದ ಆಶಯಗಳನ್ನು ಅರ್ಥ ಮಾಡಿಕೊಂಡು ಪ್ರತಿಯೊಬ್ಬ ಪ್ರಜೆಯೂ ಅಂಬೇಡ್ಕರ್ ಅವರನ್ನು ಭಕ್ತಿ ಹಾಗೂ ಅಭಿಮಾನದಿಂದ ಗೌರವಿಸುವ ದಿನವಾಗಲಿ, ಭಾರತದ ಚರಿತ್ರೆಯ ಸುವರ್ಣಾಕ್ಷರಗಳಲ್ಲಿ ಏಪ್ರಿಲ್ 14 ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಶ್ರೇಷ್ಠತೆಯನ್ನು ವಿಶ್ವ ಮೆಚ್ಚುವ ಹೆಮ್ಮೆಯ ದಿನವಾಗಲಿ” ಎಂದಿದ್ದಾರೆ.

