ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜೆಡಿಎಸ್ ರಾಜ್ಯ ವಕ್ತಾರ ರಾಜೂಗೌಡ ‘ ಬಂಡೀಪುರ ರಾತ್ರಿ ಸಂಚಾರ ನಿಷೇಧ ತೆರವಿಗೆ ಮುಂದಾದರೆ ಉಗ್ರ ಹೋರಾಟ ‘ ನಡೆಸುವ ಎಚ್ಚರಿಕೆ ನೀಡಿದರು.
” ಕಳೆದ ವರ್ಷ ಕೇರಳದ ವೈನಾಡಿನ ಲೋಕಸಭಾ ಚುನಾವಣೆ ವೇಳೆ ಪ್ರಿಯಾಂಕ ಗಾಂಧಿಯವರು ಬಂಡೀಪುರದ ರಾತ್ರಿ ಸಂಚಾರ ನಿಷೇಧ ತೆರವು ಮಾಡಿಸುವುದೇ ನನ್ನ ಗುರಿ ಎಂದಿದ್ದರು. ಅದರಂತೆ, ಹೈಕಮಾಂಡ್ ನಾಯಕರ ಮಾತಿಗೆ ರಾಜ್ಯ ಸರ್ಕಾರ ತಲೆಯಾಡಿಸಿ ರಾತ್ರಿ ಸಂಚಾರ ತೆರವು ಮಾಡುವ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪರಿಶೀಲನೆ ಮಾಡುವ ಮಾತನಾಡಿದ್ದಾರೆ ” ಎಂದು ಆರೋಪಿಸಿದರು.
” ಹುಲಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಬಂಡೀಪುರದಲ್ಲಿ, ಹುಲಿಗಳ ಸಂರಕ್ಷಣೆ ಸಹ ಅತ್ಯಗತ್ಯವಾಗಿದೆ. ಒಂದು ರಾಜ್ಯ ಅಥವಾ ದೇಶದ ಅಭಿವೃದ್ಧಿಗೆ ಪ್ರವಾಸೋದ್ಯಮ ಕೂಡ ಮುಖ್ಯವಾಗಿದೆ. ಅಂತಹದರಲ್ಲಿ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಾಗೂ ಡಿಕೆಶಿ ರಾತ್ರಿ ಸಂಚಾರ ತೆರವು ಮಾಡುವ ಬಗ್ಗೆ ಹೇಳಿದ್ದು ಖಂಡನೀಯ. ತಾಲ್ಲೂಕಿನ ಜನತೆ ಇಂತಹ ವಿಚಾರಕ್ಕೆ ಸಹಕಾರಿಯಾಗಬಾರದು ವಿರೋಧಿಸಬೇಕು. ಈಗಾಗಲೆ, ಪ್ರತಿನಿತ್ಯ ಮಾನವ ಪ್ರಾಣಿ ಸಂಘರ್ಷ ನಡೆಯುತ್ತಿದೆ, ಇನ್ನು ರಾತ್ರಿ ಸಂಚಾರ ಆರಂಭವಾದರೆ ಸಂಘರ್ಷ ಹೆಚ್ಚಾಗುತ್ತದೆ, ಅಕ್ರಮ ಸಾಗಾಟಕ್ಕೆ ಅವಕಾಶ ನೀಡಿದಂತಾಗುತ್ತದೆ. ಪ್ರಾಣಿ ಭೇಟೆ, ಕಳ್ಳಸಾಗಾಣೆ ಹೆಚ್ಚಳವಾಗುವ ಆತಂಕವಿದೆ ” ಎಂದು ಹೇಳಿದರು.
ಸರ್ಕಾರ ಇಂತಹ ದುಸ್ಸಾಹಸಕ್ಕೆ ಕೈಹಾಕಿದರೆ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗುವುದು, ಉಗ್ರ ಹೋರಾಟ ಮಾಡಲಾಗುವುದು ಎಂದು ಸರ್ಕಾರ ಹಾಗೂ ಅರಣ್ಯ ಸಚಿವರಿಗೆ ಎಚ್ಚರಿಕೆ ನೀಡಿ. ಜನ ಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕು. ಈ ಕ್ಷೇತ್ರದ ಶಾಸಕರು ಪ್ರತಿಕ್ರಿಯೆ ನೀಡಿಲ್ಲ, ಪಕ್ಷಾತೀತವಾಗಿ ಬಂಡೀಪುರ ಉಳಿವಿಗೆ ಕೈಜೋಡಿಸಬೇಕು, ಮುಂದಿನ ದಿನಗಳಲ್ಲಿ ಸರ್ಕಾರ ಇಂತಹ ಕ್ರಮ ಕೈಗೊಂಡರೆ ಶಾಸಕರು ವಿರೋಧಿಸಬೇಕು, ನಮ್ಮ ಜೊತೆ ಹೊರಾಟಕ್ಕೆ ಬರಬೇಕು ಎಂದರು.
ಈಗಾಗಲೇ ಅರಣ್ಯ ಒತ್ತುವರಿ ನಡೆಸುತಿದ್ದು ಅಕ್ರಮ ಹೋಂ ಸ್ಟೇ ಹಾಗೂ ರೆಸಾರ್ಟ್ ಗಳು ತಲೆ ಎತ್ತಿವೆ. ಈ ಹಿಂದೆ ಅನುಮತಿ ಇರದ ರೆಸಾರ್ಟ್ ಹೋಂ ಸ್ಟೇ ತೆರವು ಮಾಡಬೇಕು ಎಂದು ಆಗ್ರಹಿಸಿದರು.
ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಜಾತ್ರೆ ಸಂದರ್ಭದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದ್ದು, ಅರಣ್ಯ ಇಲಾಖೆ ನಿರಿನ ಟ್ಯಾಂಕ್ ನಿರ್ಮಾಣಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಮುಂಗಾರಿನ ಮೊದಲ ಉಳುಮೆ ‘ ಹೊನ್ನಾರು ‘
ಜೆಡಿಎಸ್ ಮುಖಂಡ ಬಸವರಾಜ ಸ್ವಾಮಿ ಪತ್ರಿಕಾಗೋಷ್ಟಿಯಲ್ಲಿ ಇದ್ದರು.