ಸೈಬರ್ ವಂಚಕರ ಮೋಸಕ್ಕೆ ವೃದ್ಧ ದಂಪತಿ ಬಲಿಯಾದ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆದಿದೆ. ವಂಚಕರ ತಂತ್ರಕ್ಕೆ ಮನನೊಂದು ದಂಪತಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತರನ್ನು ಡಿಯಾಂಗೋ ನಜರತ್ (83) ಮತ್ತು ಪ್ಲೇವಿಯಾನಾ ನಜರತ್ (79) ಎಂದು ಗುರುತಿಸಲಾಗಿದೆ. ವಂಚಕರು ದೆಹಲಿ ಕ್ರೈಂ ಬ್ರಾಂಚ್ ಅಧಿಕಾರಿಗಳಂತೆ ಮಾತನಾಡಿ, “ನೀವು ಅಪರಾಧ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದೀರಿ” ಎಂದು ಬೆದರಿಕೆ ಹಾಕಿದ್ದರು. ಬಳಿಕ ₹5 ಲಕ್ಷ ಮೊತ್ತಕ್ಕೆ ಬೇಡಿಕೆ ಇಟ್ಟು, ಹಣ ಪಾವತಿಸಿದ ಬಳಿಕವೂ ಪಿಡಿಬಿಸಿಯಾಗಿ ಮತ್ತೆ ಬೆದರಿಕೆ ಹಾಕಿದರೆಂದು ವರದಿಯಾಗಿದೆ.
ಅನಿವಾರ್ಯತೆಗೆ ಸಿಲುಕಿದ ದಂಪತಿಗಳು ಡೆತ್ ನೋಟ್ ಬರೆದಿಟ್ಟು, ಡಿಯಾಂಗೋ ನಜರತ್ ಕತ್ತು ಕೊಯ್ದುಕೊಂಡು, ಪ್ಲೇವಿಯಾನಾ ನಜರತ್ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.