ಬೆಳಗಾವಿ ನಗರದ ನೆಹರು ನಗರದಲ್ಲಿರುವ ಪಿಜಿಯಲ್ಲಿ ಎಂಬಿಎ ಪದವೀಧರೆಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಐಶ್ವರ್ಯ (24) ಆತ್ಮಹತ್ಯೆ ಮಾಡಿಕೊಂಡ ಯುವತಿ ಎಂದು ಗುರುತಿಸಲಾಗಿದೆ.
ಐಶ್ವರ್ಯ ವಿಜಯಪುರದಲ್ಲಿಯೇ ಎಂಬಿಎ ಪದವಿ ಪೂರೈಸಿ, ಉದ್ಯೋಗಕ್ಕಾಗಿ ಬೆಳಗಾವಿಗೆ ಬಂದಿದ್ದು, ಸ್ಥಳೀಯ ಖಾಸಗಿ ಕಂಪನಿಯೊಂದರಲ್ಲಿ ಕಲಿಕಾ ತರಬೇತಿಯಲ್ಲಿದ್ದಳು. ಕಳೆದ ಮೂರು ತಿಂಗಳಿನಿಂದ ಪಿಜಿಯಲ್ಲಿ ವಾಸಿಸುತ್ತಿದ್ದ ಯುವತಿ, ಮಂಗಳವಾರ ಸಂಜೆ 6:30ರಿಂದ 7:30ರ ನಡುವೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.
CCTV ದೃಶ್ಯಾವಳಿಗಳು
ಐಶ್ವರ್ಯ ಆತ್ಮಹತ್ಯೆಗೆ ಮೊದಲು ತನ್ನ ಗೆಳತಿಯೊಂದಿಗೆ ಮಾತನಾಡಿ ರೂಂಗೆ ತೆರಳಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೇ, ಆಕೆಯ ಸ್ನೇಹಿತನೂ ಪಿಜಿಗೆ ಬಂದು ಹೋಗಿರುವ ದೃಶ್ಯವೂ ದಾಖಲಾಗಿದ್ದು, ಲವ್ ಬ್ರೇಕಪ್ ಕಾರಣವಾಗಿರಬಹುದೆಂಬ ಅನುಮಾನ ಮೂಡಿಸಿದೆ.
ಯುವತಿಯ ಫೋನ್ ರಿಸೀವ್ ಮಾಡದ ಹಿನ್ನೆಲೆ, ಆಕೆಯ ಸ್ನೇಹಿತ ಗಾಬರಿಯಿಂದ ಪಿಜಿಗೆ ಆಗಮಿಸಿದ್ದಾನೆ. ಬಾಗಿಲು ಒಡೆದು ನೋಡಿದಾಗ, ಐಶ್ವರ್ಯ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಎಪಿಎಂಸಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಮೊಬೈಲ್ ಕಾಲ್ ಡೀಟೈಲ್ಸ್ ಪರಿಶೀಲನೆ ಆರಂಭಿಸಿದ್ದಾರೆ.
ಪಿಜಿಗೆ ಬಂದುಹೋದ ಸ್ನೇಹಿತನ ಬಗ್ಗೆ ಪೊಲೀಸರ ಶೋಧ ಮುಂದುವರಿದಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಪತ್ತೆಯಾಗಬೇಕಾಗಿದೆ. ಈ ಪ್ರಕರಣ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.