ಕೊಡಗು ಜಿಲ್ಲೆ,ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೇಗೂರು ಗ್ರಾಮ ಬಾಳಂಗಾಡು ಎಂಬಲ್ಲಿ ವಾಸವಿದ್ದ ಒಂದೇ ಕುಟುಂಬದ ನಾಲ್ಕು ಜನರನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಕೇರಳ ಪೊಲೀಸರು ಬಂಧಿಸಿ, ಕರ್ನಾಟಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ದಿನಾಂಕ 28-03-2025 ರಂದು ಮಧ್ಯಾಹ್ನ ಸುಮಾರು 01.30 ಗಂಟೆಗೆ ಬೇಗೂರು ಗ್ರಾಮ ಬಾಳಂಗಾಡು ಪ್ರದೇಶದ ಒಂಟಿ ಮನೆಯಲ್ಲಿ ನಾಲ್ಕು ಜನರ ಕೊಲೆಯಾಗಿರುವ ಕುರಿತು ಮಾಹಿತಿ ಬಂದಿದ್ದು, ಸದರಿ ಘಟನೆ ಸ್ಥಳಕ್ಕೆ ಮೈಸೂರಿನ ದಕ್ಷಿಣ ವಲಯ ಐಜಿಪಿ ಡಾ ಎಂ ಬಿ ಬೋರಲಿಂಗಯ್ಯ, ಪೊಲೀಸ್ ಅಧೀಕ್ಷಕ ಕೆ ರಾಮರಾಜನ್,ಅಪರ ಪೊಲೀಸ್ ಅಧೀಕ್ಷಕ ಸುಂದರ್ ರಾಜ್, ಡಿಎಸ್‌ಪಿ ಮಹೇಶ್ ಕುಮಾರ್ ವಿರಾಜಪೇಟೆ ಉಪವಿಭಾಗ, ಶಿವರಾಜ್ ಮುಧೋಳ್ ಸಿಪಿಐ ಗೋಣಿಕೊಪ್ಪ ವೃತ್ತ, ನವೀನ್ ಪಿಎಸ್‌ಐ ಪೊನ್ನಂಪೇಟೆ ಪೊಲೀಸ್ ಠಾಣೆ ಮತ್ತು ಅಪರಾಧ ಪತ್ತೆ ತಜ್ಞರ ತಂಡ ಭೇಟಿ ನೀಡಿ ಅಪರಾಧ ಕೃತ್ಯದ ಕುರಿತು ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ್ದರು.
ದೂರುದಾರರು ನೀಡಿದ ಮಾಹಿತಿ ಅನ್ವಯ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗಾಗಿ ಡಿಎಸ್‌ಪಿ, ವಿರಾಜಪೇಟೆ ಉಪ ವಿಭಾಗ ರವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಗಿತ್ತು.

ಬೇಗೂರು ಗ್ರಾಮ ಬಾಳಂಗಾಡು ಪ್ರದೇಶದಲ್ಲಿ ಬುಡಕಟ್ಟು ಜನಾಂಗದ ಕರಿಯ (75), ಗೌರಿ (70), ನಾಗಿ (30) , ಮತ್ತು ಕಾವೇರಿ ( 6) ವರ್ಷ ಹಾಗೂ ಗಿರೀಶ್ (38) ಒಂಟಿ ಮನೆಯಲ್ಲಿ ವಾಸವಿದ್ದು, ಆರೋಪಿ ನಾಗಿಯ ಮೂರನೇ ಗಂಡನಾಗಿದ್ದು ಒಂದು ವರ್ಷದಿಂದ ಒಟ್ಟಿಗೆ ವಾಸವಿದ್ದರು.
ನಾಗಿಯ ಎರಡನೇ ಗಂಡನಾದ ಸುಬ್ರಮಣಿಯೊಂದಿಗೆ ಮತ್ತೆ ಸಂಬಂಧವಿರುವ ಬಗ್ಗೆ ಸಂಶಯದಿಂದ ಆರೋಪಿ ಗಿರೀಶ ದಿ 27-03-2025 ರಂದು ರಾತ್ರಿ ಸಮಯದಲ್ಲಿ ನಾಲ್ವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿ ತಲೆ ಮರೆಸಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿರುತ್ತದೆ.
ಆರೋಪಿಯನ್ನು ಕೇರಳ ರಾಜ್ಯದ ವೈನಾಡು ಜಿಲ್ಲೆಯ ತಾಲಪೋಯ ಪೊಲೀಸ್ ಠಾಣೆಯ ಎಎಸ್ಐಟಿ ಅನೀಶ್, ವಿಶೇಷ ಶಾಖೆಯ ಠಾಣಾಧಿಕಾರಿ ಜಿ ಅನಿಲ್, ಸಿಬ್ಬಂದಿ ಶಫೀರ್ ಆರೋಪಿಯನ್ನು ಬಂಧಿಸಿದ್ದರು.
ಈ ಸುದ್ದಿ ಓದಿದ್ದೀರಾ? ಕೊಡಗು | ನಾಲ್ವರ ಬರ್ಬರ ಹತ್ಯೆ; ಆರೋಪಿ ಪರಾರಿ
ಆರೋಪಿ ಮೂಲತಃ ಕೇರಳವಾದವನಾಗಿದ್ದು. ವೈನಾಡು ಜಿಲ್ಲೆಯ ತಿರುನಲ್ಲಿ ಬಳಿಯ ಉಣಿತು ಪರಂಬು ಗ್ರಾಮದವನಾಗಿದ್ದಾನೆ. ಕೂಲಿ ಕೆಲಸಕ್ಕಾಗಿ ಇಡೀ ಕುಟುಂಬ ವಲಸೆ ಬಂದು ಕೊಡಗಿನ ಪೊನ್ನಂಪೇಟೆ ಬಳಿಯ ಬೇಗೂರು ಗ್ರಾಮದಲ್ಲಿ ನೆಲೆಸಿದ್ದರು.