ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಪದ್ಮುಂಜ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಿಂದ 2 ಹೆಣ್ಣುಮಕ್ಕಳನ್ನು ಅವಕಾಶ ವಂಚಿತರಾಗಿಸಿರುವ ಘಟನೆ ವರದಿಯಾಗಿದೆ.
ಖಾಸಗಿ ಶಾಲೆಗಳು 100% ಫಲಿತಾಂಶಕ್ಕಾಗಿ ಕಲಿಕೆಯಲ್ಲಿ ಹಿಂದಿರುವ ಮಕ್ಕಳನ್ನು ಒಂಬತ್ತನೇ ತರಗತಿಯಿಂದಲೇ ಬೇರೆ ಶಾಲೆಗೆ ವರ್ಗಾಯಿಸುತ್ತಿರುವ ಬಗ್ಗೆ ದೂರುಗಳು ಸಹಜವಾಗಿ ಬರುತ್ತಿರುವುದು ಹೊಸದೇನಲ್ಲ. ಆದರೆ, ಸರ್ಕಾರಿ ಶಾಲೆಯೊಂದು ಎಲ್ಲಾ ತರಹದ ಮಕ್ಕಳಿಗೂ ಸಮಾನ ಶಿಕ್ಷಣ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಗೆ ಪೂರಕವಾಗಿ ನಡೆದುಬರುವುದರ ಬದಲಾಗಿ ಶೇ.100 ಎನ್ನುವ ಗೀಳಿಗೆ ಬಿದ್ದು ಎರಡು ಹೆಣ್ಣು ಮಕ್ಕಳನ್ನು ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎನ್ನುವ ಕಾರಣಕ್ಕೆ ಪರೀಕ್ಷೆಗೆ ಅವಕಾಶ ಕೊಡದೆ ಇರುವುದು ಅಕ್ಷಮ್ಯ ಅಪರಾಧವಾಗಿದೆ.
ಈ ಬಗ್ಗೆ ಖುದ್ದು ಅವಕಾಶ ವಂಚಿತಳಾಗಿರುವ ಹೆಣ್ಣು ಮಗಳು ಮಕ್ಕಳ ಹಕ್ಕುಗಳ ಆಯೋಗ, ಉಪನಿರ್ದೇಶಕರು, ಶಿಕ್ಷಣಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ಸಂಚಾಲಕರಿಗೆ ಪತ್ರ ಬರೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದೆ.

ಘಟನೆ ಕುರಿತು ಕೂಲಂಕಷವಾಗಿ ತನಿಖೆ ನಡೆಸಿ, ತಪ್ಪಿತಸ್ಥರಾದ ಶಿಕ್ಷಕರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದರೊಂದಿಗೆ ಆ ಮಕ್ಕಳಿಗೆ ಇನ್ನುಳಿದ ಪರೀಕ್ಷೆ ಬರೆಯಲು ಕೂಡಲೇ ವ್ಯವಸ್ಥೆ ಮಾಡಿಕೊಡಲು ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ರಾಜ್ಯ ಸಂಚಾಲಕ ಮೊಯ್ದಿನ್ ಕುಟ್ಟಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬೆಳ್ತಂಗಡಿ | ಹಿರಿಯ ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ
ಕಡಿಮೆ ದಾಖಲಾತಿ ನೆಪ ಹೇಳಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವ ಸರ್ಕಾರ ಒಂದು ಕಡೆಯಾದರೆ.. ಇರುವ ಮಕ್ಕಳಿಗೂ ಸರಿಯಾದ ಶಿಕ್ಷಣ ಕೊಡದೆ ಅವರ ಮೂಲಭೂತ ಹಕ್ಕನ್ನೇ ಕಸಿದುಕೊಳ್ಳಲು ಮುಂದಾಗಿರುವ ಶಿಕ್ಷಕ ವರ್ಗ ಇನ್ನೊಂದೆಡೆ. ಕಲಿಕೆಯಲ್ಲಿ ಹಿಂದುಳಿದಿರುವ ಒಂದೇ ಕಾರಣಕ್ಕೆ ಪರೀಕ್ಷೆಯಿಂದ, ಶಾಲೆಯಿಂದ ಹೊರಗಿಡುವುದು ಎಷ್ಟು ಸರಿ? ಇರುವ ಮಕ್ಕಳೆಲ್ಲ ಶೇ.100ರಷ್ಟು ಫಲಿತಾಂಶ ಕೊಡುವವರಾದರೆ ಅಥವಾ ಕಲಿಕೆಯ ಸಾಮರ್ಥ್ಯ ಇರುವವರಾದರೆ ಶಿಕ್ಷಕರಾಗಿ ಇವರೇಕೆ ಬೇಕು ಎನ್ನುವ ಪ್ರಶ್ನೆಯನ್ನು ಪದ್ಮುಂಜ ಶಾಲೆಯ ಶಿಕ್ಷಕರು ಅವರಿಗವರೇ ಕೇಳಿಕೊಳ್ಳಬೇಕು.
