ರಂಜಾನ್ ಉಪವಾಸ ಅಂತ್ಯಗೊಳ್ಳುವ ಈದ್ ದಿನ ರಸ್ತೆಗಳಲ್ಲಿ ಸಾಮೂಹಿಕ ನಮಾಝ್ ಮಾಡುವಂತಿಲ್ಲ. ಒಂದು ವೇಳೆ, ರಸ್ತೆಗಳಲ್ಲಿ ನಮಾಝ್ ಮಡಿದರೆ, ಅವರ ಪಾಸ್ಪೋರ್ಟ್ ಮತ್ತು ಪರವಾನಗಿಗಳನ್ನು ರದ್ದು ಮಾಡಲಾಗುತ್ತದೆ. ಮಾತ್ರವಲ್ಲದೆ, ಕ್ರಿಮಿನಲ್ ಪ್ರಕರಣವನ್ನೂ ದಾಖಲಿಸಲಾಗುತ್ತದೆ ಎಂದು ಉತ್ತರ ಪ್ರದೇಶದ ಮೀರತ್ ಪೊಲೀಸರು ಹೇಳಿದ್ದಾರೆ.
ಕಳೆದ ವರ್ಷವೂ, ರಂಜಾನ್ ಸಂದರ್ಭದಲ್ಲಿ ರಸ್ತೆಗಳಲ್ಲಿ ನಮಾಝ್ ಮಾಡಬಾರದೆಂದು ಪೊಲೀಸರು ಆದೇಶ ಹೊರಡಿಸಿದ್ದರು. ಆದರೆ, ಪಾಸ್ಪೋರ್ಟ್, ಪರವಾನಗಿ ರದ್ದತಿಯಂತಹ ಬೆದರಿಕೆಗಳನ್ನು ಹಾಕಿರಲಿಲ್ಲ. ಆದರೆ, ಈ ಬಾರಿ, ಪಾಸ್ಪೋರ್ಟ್, ಪರವಾನಗಿಗಳನ್ನು ರದ್ದು ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಪೊಲೀಸರ ಈ ಸೂಚನೆಯನ್ನು ಆಡಳಿತಾರೂಢ ಬಿಜೆಪಿಯ ಮಿತ್ರ ಪಕ್ಷ ‘ರಾಷ್ಟ್ರೀಯ ಲೋಕದಳ’ (ಆರ್ಎಲ್ಡಿ) ಖಂಡಿಸಿದೆ. ಆರ್ಎಲ್ಡಿ ಮುಖ್ಯಸ್ಥ ಜಯಂತ್ ಸಿಂಗ್ ಚೌಧರಿ, “ರಾಜ್ಯವು 1984ರ ಆರ್ವೆಲ್ ಯುಗದ ಪೊಲೀಸ್ ಗಿರಿಯೆಡೆಗೆ ಹೊರಳುತ್ತಿದೆ! ಲೇಖಕ ಜಾರ್ಜ್ ಆರ್ವೆಲ್ ಅವರು ತಮ್ಮ ‘ನೈಂಟೀನ್ ಎಯ್ಟಿ ಫೋರ್’ ಕೃತಿಯಲ್ಲಿನ ಪೊಲೀಸರಿಗೆ ನಿರಂಕುಶಾಧಿಕಾರ ನೀಡುವ ಚಿಂತನೆಗಳ ಬಗ್ಗೆ ವಿವರಿಸಿದ್ದರು. ಅದು ಈಗ ಜಾರಿಯಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖ್ಯಾ ಕುರಿತು ಅವರು ಉಲ್ಲೇಖಿಸಿದ್ದಾರೆ.
ಪೊಲೀಸರ ಸೂಚನೆಯ ಬಗ್ಗೆ ಪ್ರತಿಕ್ರಿಯಿಸಿರುವ ಮೀರತ್ ನಗರ ಎಸ್ಪಿ ಆಯುಷ್ ವಿಕ್ರಮ್ ಸಿಂಗ್, “ನಾವು ಜನರಿಗೆ ಮಸೀದಿಯಲ್ಲಿ ಪ್ರಾರ್ಥನೆ ಮಾಡಬೇಕು ಅಥವಾ ಸೂಕ್ತ ಸಮಯಕ್ಕೆ ಈದ್ಗಾ ಮೈದಾನಗಳನ್ನು ತಲುಪಬೇಕೆಂದು ಮನವಿ ಮಾಡಿದ್ದೇವೆ. ಎಂಥದೇ ಪರಿಸ್ಥಿತಿಯಲ್ಲೂ ರಸ್ತೆಗಳ ಮೇಲೆ ನಮಾಝ್ ಮಾಡಲು ಅವಕಾಶ ನೀಡಬಾರದು ಎಂಬುದಾಗಿ ಸೂಚನೆ ನೀಡಿದ್ದೇವೆ” ಎಂದು ಹೇಳಿದ್ದಾರೆ.