ದುರುಳ ವ್ಯಕ್ತಿಯೊಬ್ಬ ತನ್ನದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ಬಳಿಕ ಬೇಗೂರು ಗ್ರಾಮದಲ್ಲಿ ನಡೆದಿದೆ. ತ್ವರಿತ ಕಾರ್ಯಾಚರಣೆ ನಡೆಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬೇಗೂರು ಗ್ರಾಮದ ನಿವಾಸಿ ಗಿರೀಶ್ ಬಂಧಿತ ಆರೋಪಿ. ಈತ ತನ್ನ ಪತ್ನಿಯ ತಂದೆ-ತಾಯಿ ಕರಿಯ ಮತ್ತು ಗೌರಿ, ಪತ್ನಿ ನಾಗಿ ಹಾಗೂ ಪುತ್ರಿ ಕಾವೇರಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಗುರುವಾರ ರಾತ್ರಿ ಹತ್ಯೆಗೈದಿದ್ದ ಆರೋಪಿ ಪರಾರಿಯಾಗಿದ್ದ. ಆತನನ್ನು ಒಂದೇ ದಿನದಲ್ಲಿ ಪತ್ತೆ ಮಾಡಿ, ಬಂಧಿಸುವಲ್ಲಿ ಪೊನ್ನಂಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಆತನನ್ನು ಕೇರಳದ ತಲಪುಳ ಎಂಬ ಪ್ರದೇಶದಲ್ಲಿ ಬಂಧಿಸಿದ್ದಾರೆ.
ಆರೋಪಿ ಗಿರೀಶ್ ನಾಗಿ ಅವರ 3ನೇ ಪತಿಯಾಗಿದ್ದು, ಒಂದು ವರ್ಷದಿಂದ ಒಟ್ಟಿಗೆ ವಾಸಿಸುತ್ತಿದ್ದರು. ನಾಗಿ ತನ್ನ 2ನೇ ಗಂಡ ಸುಬ್ರಮಣಿಗೆ ಮತ್ತೆ ಹತ್ತಿರವಾಗುತ್ತಿದ್ದಾರೆ ಎಂಬ ಅನುಮಾನದ ಮೇಲೆ ಕೃತ್ಯ ಎಸಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.