ಛತ್ತೀಸಗಢದ ಕೇರ್ಲಾಪಾಲ್ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಮಾವೋವಾದಿಗಳ ವಿರುದ್ಧ ಬಿಎಸ್‌ಎಫ್ ಹಾಗೂ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಇಂದು (ಶನಿವಾರ) ಜಂಟಿ ಕಾರ್ಯಾಚರಣೆ ನಡೆಸಿದ್ದು, ಗುಂಡಿನ ಕಾಳಗದಲ್ಲಿ ಒಟ್ಟು 16 ಮಾವೋವಾದಿಗಳು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕೇರ್ಲಾಪಾಲ್ ಪ್ರದೇಶದ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿಯು ಮಾವೋವಾದಿಗಳ ವಿರೋಧಿ ಕಾರ್ಯಾಚರಣೆಯನ್ನು ಆರಂಭಿಸಿದ್ದರು. ಈ ಸಂದರ್ಭದಲ್ಲಿ ಎನ್‌ಕೌಂಟರ್ ನಡೆದಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಖಚಿತ ಮಾಹಿತಿ ಆಧರಿಸಿ, ಬಿಎಸ್‌ಎಫ್ ಹಾಗೂ ಜಿಲ್ಲಾ ಮೀಸಲು ಪಡೆಯ (ಡಿಆರ್‌ಜಿ) ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಸ್ಥಳದಿಂದ 16 ಮಾವೋವಾದಿಗಳ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತಷ್ಟು ಶೋಧ ಮುಂದುವರಿದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಶನಿವಾರ ನಡೆದ ಭೀಕರ್ ಎನ್‌ಕೌಂಟರ್ ಮಾತ್ರವಲ್ಲದೆ, ಮಾರ್ಚ್ 1ರಂದು ಕೂಡ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದವು. ಆ ವಳೆ, ಇಬ್ಬರು ನಕ್ಸಲ್ ಹೋರಾಟಗಾರರನ್ನು ಕೊಲ್ಲಲಾಗಿತ್ತು.
ಕಳೆದ ತಿಂಗಳು (ಫೆಬ್ರವರಿ) ಬಸ್ತಾರ್ ಪ್ರದೇಶದಲ್ಲಿ ನಡೆದ ಕಾರ್ಯಾರಣೆಯಲ್ಲಿ 40 ಮಂದಿ ಮಾವೋವಾದಿ ಹೋರಾಟಗಾರರನ್ನು ಕೊಲ್ಲಲಾಗಿದೆ. ಫೆಬ್ರವರಿಯಿಂದ ಇಂದಿನವರೆಗೆ 58 ಮಂದಿ ನಕ್ಸಲ್ ಹೋರಾಟಗಾರರನ್ನು ಭದ್ರತಾ ಪಡೆಗಳು ಕೊಂದಿವೆ.
2026ರ ಮಾರ್ಚ್ ವೇಳೆಗೆ ದೇಶದಲ್ಲಿ ನಕ್ಸಲ್ ಹೋರಾಟವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಆದರೆ, ಅವರು ನಕ್ಸಲ್ ಹೋರಾಟಗಾರರನ್ನು ಕೊಲ್ಲುವ ಮೂಲಕ ಹೋರಾಟದ ದನಿಯ ಸದ್ದಡಗಿಸುವ ದಾರಿ ಹಿಡಿದ್ದಾರೆ. ಆದರೆ, ದಕ್ಷಿಣದ ರಾಜ್ಯಗಳು ಪ್ರಮುಖವಾಗಿ ಕರ್ನಾಟಕವು ಮಾವೋವಾದಿ ಹೋರಾಟಗಾರರಿಗೆ ಸಶಸ್ತ್ರ ಹೋರಾಟವನ್ನು ಬಿಟ್ಟು, ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಬಂದು ಹೋರಾಟ ಮುಂದುವರೆಸಲು ಅವಕಾಶ ಮಾಡಿಕೊಡುತ್ತಿದೆ.
ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ ನಕ್ಸಲ್ ಹೋರಾಟಗಾರರಿಗೆ ಕರ್ನಾಟಕ ಸರ್ಕಾರ ಕರೆಕೊಟ್ಟಿದೆ. ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಬರುವ ನಕ್ಸಲ್ ಹೋರಾಟಗಾರರಿಗೆ ತಮ್ಮ ವಿರುದ್ಧದ ಪ್ರಕರಣಗಳ ತ್ವರಿತ ವಿಚಾರಣೆ ಮತ್ತು ಶೀಘ್ರ ಜಾಮೀನು ಪಡೆಯಲು ವಿಶೇಷ ನ್ಯಾಯಾಲಯ ಸ್ಥಾಪನೆ, ಶರಣಾಗತಿ ಪ್ಯಾಕೇಜ್‌ಗಳನ್ನು ನೀಡುತ್ತಿದೆ. ಆ ಮೂಲಕ, ನಕ್ಸಲ್ ಹೋರಾಟಗಾರರನ್ನು ಗೌರವಯುತವಾಗಿ ಮುಖ್ಯವಾಹಿನಿಗೆ ಕರೆತಂದು, ಕರ್ನಾಟಕವನ್ನು ನಕ್ಸಲ್ ಹೋರಾಟ ಮುಕ್ತ ರಾಜ್ಯವೆಂದು ಘೋಷಿಸಿದೆ.
ಆದರೆ, ಕೇಂದ್ರ ಮತ್ತು ಉತ್ತರ ಇತರ ರಾಜ್ಯ ಸರ್ಕಾರಗಳು ನಕ್ಸಲ್ ಹೋರಾಟಗಾರರನ್ನು ಕೊಲ್ಲುವುದನ್ನೇ ಆಧ್ಯತೆಯನ್ನಾಗಿ ಮಾಡಿಕೊಂಡಿವೆ. ನಿರಂತರ ಕಾರ್ಯಾಚರಣೆ ನಡೆಸಿ, ಹತ್ಯೆ ಮಾಡುತ್ತಿವೆ.