ಬೀದಿ ನಾಯಿಗಳ ಗುಂಪೊಂದು ದಾಳಿ ಮಾಡಿ ಬಾಲಕಿಯನ್ನು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ರಾಯಚೂರು ತಾಲೂಕಿನ ಮರ್ಚೆಟಹಾಳ ಗ್ರಾಮದಲ್ಲಿ ನಡೆದಿದೆ. ಗಾಯಗೊಂಡ ಬಾಲಕಿಯನ್ನು ಮುಕಪ್ಪ ಎನ್ನುವವರ ಮಗಳು 8 ವರ್ಷದ ಚೈತ್ರ ಎಂದು ಗುರುತಿಸಲಾಗಿದೆ.
ಬಾಲಕಿ ಇಂದು ಬೆಳಗ್ಗೆ 9.30ರ ಸುಮಾರಿಗೆ ಮನೆಯ ಬಳಿ ಬಯಲು ಬಹಿರ್ದೆಸೆಗೆ ಹೋಗುವಾಗ 15 ಬೀದಿನಾಯಿಗಳ ಹಿಂಡು ದಾಳಿ ಮಾಡಿದೆ. ಘಟನೆಯಲ್ಲಿ ಬಾಲಕಿಯ ಕಿವಿ ಸೀಳಿದೆ, ಕತ್ತು ಹಾಗೂ ಬೆನ್ನಿಗೆ ಗಂಭೀರವಾಗಿ ಗಾಯಗಳಾಗಿದ್ದು, ಬಾಲಕಿಯ ಸ್ಥಿತಿ ಗಂಭೀರವಾಗಿದೆ.
ಪಂಚಾಯತಿ ಅಧಿಕಾರಿಗಳು ಬೀದಿ ನಾಯಿಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳದೇ ಇರುವುದು ಘಟನೆಗೆ ಕಾರಣ ಎಂದು ಬಾಲಕಿಯ ಪೋಷಕರು, ಸಂಬಂಧಿಕರು ಆರೋಪಿಸಿದ್ದಾರೆ.
ಇದನ್ನೂ ಓದಿ: ರಾಯಚೂರು | ಟ್ರಾಕ್ಟರ್ ಟ್ರಕಿಗೆ ಬೈಕ್ ಡಿಕ್ಕಿ; ಸವಾರ ಸಾವು
ಗಾಯಗೊಂಡ ಬಾಲಕಿಯನ್ನು ನಗರದ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.