ಮಂಗಳೂರು ನಗರದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹೈಡ್ರೋವೀಡ್ ಗಾಂಜಾ, ಚರಸ್, ಗಾಂಜಾದಂತಹ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಯುವಕರಿಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ತೈಸಿರ್ ಇಸ್ಮಾಯಿಲ್ ಹುಸೈನ್ ಹಾಗೂ ರೋಯಸ್ಟನ್ ಕ್ಸವಿಯರ್ ಲೋಬೋ ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು 8 ಲಕ್ಷ ಮೌಲ್ಯದ ನಿಷೇಧಿತ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರಿನಿಂದ ಗಾಂಜಾ ಖರೀದಿಸಿ ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಶಿವಭಾಗ್ 5 ನೇ ಕ್ರಾಸ್ ರಸ್ತೆ ಬಳಿ ದಾಳಿ ಮಾಡಿದ ಪೊಲೀಸರು ಲಕ್ಷಾಂತರ ಮೌಲ್ಯದ ಹೈಡ್ರೋವೀಡ್, ಚರಸ್, ಗಾಂಜಾ ಹಾಗೂ 2 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಐಷಾರಾಮಿ ಜೀವನ ಸಾಗಿಸುವ ಉದ್ದೇಶದಿಂದ ಮಾದಕ ವಸ್ತು ಮಾರಾಟದ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಂಗಳೂರು | ಮಹಾನಗರ ಪಾಲಿಕೆಯ ಮಾಜಿ ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್ ನಿಧನ
ಕಾರ್ಯಾಚರಣೆಯಲ್ಲಿ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಉಪ ಪೊಲೀಸ್ ಆಯುಕ್ತ ಸಿದ್ದಾರ್ಥ ಗೋಯಲ್ ಮತ್ತು ಉಪ ಪೊಲೀಸ್ ಆಯುಕ್ತ ಕೆ.ರವಿಶಂಕರ್ ನಿರ್ದೇಶನದಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ರಫೀಕ್ ಕೆ ಎಂ, ಪಿಎಸ್ಐ ನರೇಂದ್ರ, ಎಎಸ್ಐ ರಾಮ ಪೂಜಾರಿ, ಶೀನಪ್ಪ, ಸುಜನ್ ಶೆಟ್ಟಿ ಮತ್ತು ಸಿಸಿಬಿ ಘಟಕದ ಸಿಬ್ಬಂದಿಯವರು ಪಾಲ್ಗೊಂಡಿದ್ದರು.