ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ ಟೀಕೆ ಮಾಡಿದ ಸ್ಟಾಂಡಪ್ ಕಾಮೆಡಿಯನ್ ಕುನಾಲ್ ಕಾಮ್ರಾ ವಿರುದ್ಧ ಮುಂಬೈನ ಖಾರ್ ಪೊಲೀಸ್ ಠಾಣೆಯಲ್ಲಿ ಮತ್ತೆ ಮೂರು ಪ್ರಕರಣ ದಾಖಲಾಗಿದೆ.
ಹಾಸ್ಯ ಕಾರ್ಯಕ್ರಮವೊಂದರಲ್ಲಿ ಸ್ಟಾಂಡಪ್ ಕಾಮೆಡಿ ಮಾಡಿದ್ದ ಕುನಾಲ್ ಕಾಮ್ರಾ, ಶಿಂದೆ ಅವರನ್ನು ಪರೋಕ್ಷವಾಗಿ ಟೀಕಿಸಿದ್ದರು. ತನ್ನದೇ ಪಕ್ಷವನ್ನು ಇಬ್ಭಾಗ ಮಾಡಿದ ದ್ರೋಹಿ ಎಂದು ಕರೆದಿದ್ದರು. ಆದರೆ ಎಲ್ಲಿಯೂ ಶಿಂದೆ ಹೆಸರನ್ನು ಉಲ್ಲೇಖಿಸದೆ ಥಾಣೆಯ ನಾಯಕ ಎಂದಿದ್ದರು.
ಇದನ್ನು ಓದಿದ್ದೀರಾ? ಶಿವಸೇನೆ ಕಾರ್ಯಕರ್ತರನ್ನು ಕುಟುಕಿದ ಕುನಾಲ್ ಕಾಮ್ರಾ ಹೊಸ ಹಾಡು
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಿಟ್ಟಿಗೆದ್ದ ಶಿಂದೆ ಕಾರ್ಯಕರ್ತರು ಹಾಸ್ಯ ಕಾರ್ಯಕ್ರಮ ನಡೆದ ಸ್ಟುಡಿಯೋವನ್ನು ಧ್ವಂಸ ಮಾಡಿದ್ದರು. ಹೊಟೇಲ್‌ನಲ್ಲಿ ದಾಂಧಲೆ ಮಾಡಿದ್ದರು. ಹಾಗೆಯೇ ಕುನಾಲ್‌ಗೆ ಜೀವ ಬೆದರಿಕೆ ಕೂಡಾ ಹಾಕಿದ್ದರು. ಕುನಾಲ್ ವಿರುದ್ಧ ದೂರು ಕೂಡಾ ದಾಖಲಾಗಿತ್ತು.
ಇದೀಗ ಮತ್ತೆ ಮೂರು ದೂರು ದಾಖಲಾಗಿದೆ. ಜಲ್ಗಾವ್ ನಗರದ ಮೇಯರ್ ದೂರು ದಾಖಲಿಸಿದ್ದಾರೆ. ಹೋಟೆಲ್ ಮಾಲೀಕ ಮತ್ತು ನಾಸಿಕ್‌ನ ಉದ್ಯಮಿಯೊಬ್ಬರು ಕೂಡಾ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.
ಈಗಾಗಲೇ ಖಾರ್ ಪೊಲೀಸರು ಎರಡು ಬಾರಿ ಕಾಮ್ರಾ ಅವರನ್ನು ವಿಚಾರಣೆ ಕರೆದಿದ್ದಾರೆ. ಆದರೆ ಕಾಮ್ರಾ ಈವರೆಗೂ ಹಾಜರಾಗಿಲ್ಲ. ಈಗ ಮತ್ತೆ ಮೂರನೇ ಬಾರಿಗೆ ಸಮನ್ಸ್ ನೀಡಲಾಗಿದೆ ಎಂದು ವರದಿಯಾಗಿದೆ.
ಕುನಾಲ್ ವಿರುದ್ಧ ಈಗಾಗಲೇ ಹಲವು ಎಫ್‌ಐಆರ್‌ಗಳು ದಾಖಲಾಗಿದ್ದು, ಶುಕ್ರವಾರ ಮದ್ರಾಸ್ ಹೈಕೋರ್ಟ್ ಏಪ್ರಿಲ್ 7ರವರೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆದರೆ ಇದೀಗ ಮತ್ತೆ ದೂರು ದಾಖಲಿಸಲಾಗಿದೆ.
