ಹೆರಿಗೆ ನೋವಿನಿಂದ ಆಸ್ಪತ್ರೆಗೆ ಬಂದ ಗರ್ಭಿಣಿಯನ್ನು ದಾಖಲಿಸಿಕೊಳ್ಳಲು ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ನಿರಾಕರಿಸಿದ್ದು, ಮಹಿಳೆಯು ಕೈಗಾಡಿಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ, ಸೂಕ್ತ ರೀತಿಯಲ್ಲಿ ಹೆರಿಗೆಯಾಗದ ಪರಿಣಾಮ ಮಗು ಸಾವನ್ನಪ್ಪಿದೆ. ದುರ್ಘಟನೆ ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ನಡೆದಿದೆ.
ರತ್ಲಾಮ್ ಜಿಲ್ಲೆಯ ಸೈಲಾನಾದಲ್ಲಿ ಘಟನೆ ನಡೆದಿದೆ. ಮಹಿಳೆಯನ್ನು ಹೆರಿಗೆಗಾಗಿ ದಾಖಲಿಸಲು ಆಕೆಯ ಪತಿ ಎರಡು ಬಾರಿ ಸಮುದಾಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಾರೆ. ಆದರೆ, ಎರಡು ಬಾರಿಯೂ ಆಕೆಯನ್ನು ದಾಖಲಿಸಿಕೊಳ್ಳಲು ಆಸ್ಪತ್ರೆಯ ಸಿಬ್ಬಂದಿ ನಿರಾಕರಿಸಿದ್ದಾರೆ. ಹೆರಿಗೆಗೆ ಇನ್ನೂ ಸಮಯವಾಗಿಲ್ಲವೆಂದು ಆಕೆಯನ್ನು ವಾಪಸ್ ಕಳಿಸಿದ್ದಾರೆ. ಪರಿಣಾಮ, ಮಹಿಳೆಗೆ ರಸ್ತೆಯಲ್ಲೇ ಕೈಗಾಡಿ ಮೇಲೆ ಹೆರಿಗೆಯಾಗಿದೆ. ಮಗು ಸಾವನ್ನಪ್ಪಿದೆ.
ಘಟನೆಗೆ ಸಂಬಂಧಿಸಿದ ಸಿಸಿ ಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಬೆಳಕಿಗೆ ಬಂದ ಬಳಿಕ ಸೈಲಾನಾ ಬ್ಲಾಕ್ ವೈದ್ಯಕೀಯ ಅಧಿಕಾರಿಗೆ (ಬಿಡಿಒ) ಜಿಲ್ಲಾಡಳಿತ ಶೋಕಾಸ್ ನೋಟಿಸ್ ನೀಡಿದೆ. ಶುಶ್ರೂಷಕಿ ಚೇತನಾ ಚಾರೆಲ್ ಮತ್ತು ಗಾಯತ್ರಿ ಪಾಟೀದಾರ್ ಎಂಬವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಮೂಲಗಳ ಪ್ರಕಾರ, ಸೈಲಾನಾ ನಿವಾಸಿ ಕೃಷ್ಣ ಗ್ವಾಲಾ ಅವರು ತಮ್ಮ ಪತ್ನಿ ನೀತು ಅವರನ್ನು ಹೆರಿಗೆಗಾಗಿ ಮಾರ್ಚ್ 23ರ ರಾತ್ರಿ ಆರೋಗ್ಯಕ್ಕೆ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದರು. ಆದರೆ, ಶುಶ್ರೂಷಕಿ ಚೇತನಾ, ‘ಹೆರಿಗೆಗೆ ಇನ್ನೂ ಎರಡು/ಮೂರು ದಿನ ಬಾಕಿ ಇದೆ. ಈಗಲೇ ಆಕೆಯನ್ನು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿ ವಾಪಸ್ ಕಳಿಸಿದ್ದಾರೆ. ಮರುದಿನ (ಮಾರ್ಚ್ 24) ಮುಂಜಾನೆಯೇ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಕೆಯನ್ನು ಕೃಷ್ಣ ಅವರನ್ನು ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆಗ, ಕರ್ತವ್ಯದಲ್ಲಿದ್ದ ಶುಶ್ರೂಷಕಿ ಗಾಯತ್ರಿ ಕೂಡ ಅವರನ್ನು ವಾಪಸ್ ಕಳಿಸಿದ್ದಾರೆ.
ಮನೆಗೆ ಮರಳಿದ ಬಳಿಕ, ಹೆರಿಗೆ ನೋವು ಹೆಚ್ಚಾಗಿದೆ. ನೀತು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ವಾಹನಗಳು ಲಭ್ಯವಿಲ್ಲದೆ, ಆಕೆಯನ್ನು ಕೃಷ್ಣ ಅವರು ಕೈಗಾಡಿಯಲ್ಲಿ ಕೂರಿಸಿಕೊಂಡು ಆಸ್ಪತ್ರೆಯತ್ತ ಧಾವಿಸಿದ್ದಾರೆ. ಆದರೆ, ಆಸ್ಪತ್ರೆಗೆ ಬರುವುದಕ್ಕೂ ಮುನ್ನವೇ ಹೆರಿಗೆಯಾಗಿದ್ದು, ಶಿಶುವಿನ ಕಾಲುಗಳು ಮಾತ್ರ ಹೊರಬಂದಿದ್ದವು, ತಲೆ ಗರ್ಭದೊಳಗೇ ಇತ್ತು ಎಂದು ಹೇಳಲಾಗಿದೆ. ಈ ವೇಳೆ ಕರ್ತವ್ಯದಲ್ಲಿದ್ದ ಶುಶ್ರೂಷಕಿ ಹೆರಿಗೆ ಮಾಡಿಸಿದ್ದು, ಶಿಶು ಗರ್ಭದಲ್ಲೇ ಮೃತಪಟ್ಟಿತ್ತು ಎಂದು ವರದಿಯಾಗಿದೆ.
ಸಂತ್ರಸ್ತ ದಂಪತಿಗಳು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಕರ್ತವ್ಯಲೋಪ ಎಸಗಿದ ಶುಶ್ರೂಷಕಿಯನ್ನು ಅಮಾನತು ಮಾಡಿದ್ದಾರೆ.