- ಅಸ್ಸಾಂ ಪ್ರವಾಹದಿಂದ 4.88 ಲಕ್ಷ ಜನರಿಗೆ ಹಾನಿ
- ಭೂತಾನ್ ನಲ್ಲಿ ಸುರಿಯುತ್ತಿರುವ ಮಳೆ ರಾಜ್ಯದ ಮೇಲೆ ಪರಿಣಾಮ
ಅಸ್ಸಾಂ ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಗಂಭೀರ ಸ್ಥಿತಿ ತಲುಪಿದೆ. ಈ ಹಿನ್ನೆಲೆ ಸುಮಾರು 35 ಸಾವಿರ ಮಂದಿಯನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಾರೀ ಮಳೆಯ ಪರಿಣಾಮ ರಾಜ್ಯದಲ್ಲಿ ಅಪಾರ ಹಾನಿಯಾಗಿದೆ. ಇದುವರೆಗೆ ಮಳೆಯಿಂದ ರಾಜ್ಯದಲ್ಲಿ 4,88,525 ಲಕ್ಷ ಜನರು ತೊಂದರೆಗೀಡಾಗಿದ್ದಾರೆ ಎಂದು ಅಸ್ಸಾಂನ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಶುಕ್ರವಾರ (ಜೂನ್ 23) ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರೀ ಮಳೆಯಿಂದ ರಾಜ್ಯದೆಲ್ಲೆಡೆ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿದ್ದು ಅಸ್ಸಾಂ ರಾಜ್ಯದ ನಾನಾ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.
ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಹಲವೆಡೆ ಭೂಕುಸಿತ ಸಂಭವಿಸಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಸ್ಸಾಂ ರಾಜ್ಯದಲ್ಲಿ ಪ್ರವಾಹಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ಪ್ರವಾಹಪೀಡಿತ ಸ್ಥಳದಲ್ಲಿರುವ ಸುಮಾರು 4.88 ಲಕ್ಷ ಜನರ ಬದುಕು ಅಸ್ತವ್ಯಸ್ತವಾಗಿದೆ. ಬ್ರಹ್ಮಪುತ್ರ ಸೇರಿದಂತೆ ರಾಜ್ಯದ ಪ್ರಮುಖ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಈವರೆಗೆ 19 ಜಿಲ್ಲೆಗಳು, ನಾಲ್ಕು ಉಪ ವಿಭಾಗಗಳು ಸಂಪೂರ್ಣವಾಗಿ ಪ್ರವಾಹಪೀಡಿತವಾಗಿವೆ. ಭಾರೀ ಮಳೆಯು ಇನ್ನೂ ಕೆಲ ದಿನಗಳ ಕಾಲ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಸಿಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ, ಸರ್ಕಾರೇತರ ಸಂಘಟನೆಗಳು ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಕೆಲವು ರಾಜ್ಯಗಳಲ್ಲಿ ಮಳೆ
ಅಸ್ಸಾಂ ಹೊರತುಪಡಿಸಿ ಹರಿಯಾಣ, ಪಂಜಾಬ್ ನ ಕೆಲವು ಭಾಗಗಳಲ್ಲಿ ಶುಕ್ರವಾರ ಮಳೆಯಾಗಿದೆ ಎಂದು ಐಎಂಡಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಪ್ರತಿಪಕ್ಷಗಳ ಒಗ್ಗಟ್ಟಿನ ಮಂತ್ರಕ್ಕೆ ಬಿಜೆಪಿ ಟಕ್ಕರ್ | ದೇವದಾಸ್‌ಗೆ ರಾಹುಲ್ ಗಾಂಧಿ ಹೋಲಿಸಿ ಪೋಸ್ಟರ್
ಹರಿಯಾಣದ ಅಂಬಾಲ, ಕರ್ನಾಲ್, ರೋಹಕ್, ಪಂಚಕುಲಾ, ಕುರುಕ್ಷೇತ್ರ ಮತ್ತು ಫತೇಹಬಾದ್ ನಲ್ಲಿ ಮಳೆಯಾಗಿದೆ. ಪಂಜಾಬ್ ನ ಫತೇಗಢ ಸಾಹಿಬ್, ಎಸ್ಬಿಎಸ್ ನಗರ ಮತ್ತು ರೂಪನಗರ ಸಾಧಾರಣ ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಲವು ದಿನಗಳಿಂದ ಎರಡೂ ರಾಜ್ಯಗಳಲ್ಲಿ ಬಿಸಿಲ ಧಗೆ ಹೆಚ್ಚಾಗಿತ್ತು ಎಂದು ಹೇಳಲಾಗಿದೆ.
ಭೂತಾನ್‌ನ ಬೆಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆಯ ಪರಿಣಾಮ ಅಸ್ಸಾಂ ನದಿಗಳ ಮೇಲೆ ಬೀರಿದ್ದು ನದಿಗಳು ಉಕ್ಕಿ ಹರಿಯುತ್ತಿವೆ.