ವಿದ್ಯಾರ್ಥಿಗಳು ದೇಶಭಕ್ತಿಯ ಜೊತೆಗೆ ಪಾಲಕರಿಗೆ ಸದಾ ಗೌರವ ನೀಡುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಎನ್ಎಸ್ಎಸ್ ಸಲಹಾ ಸಮಿತಿಯ ಸದಸ್ಯ ಡಾ. ಜಾವಿದ್ ಜಮಾದಾರ ಹೇಳಿದರು.
ವಿಜಯಪುರ ನಗರದ ರಾಜ್ಯ ಎನ್‌ಎಸ್‌ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್‌ಎಸ್‌ಎಸ್ ಪ್ರಾದೇಶಿಕ ನಿರ್ದೇಶನಾಲಯ, ಬೆಂಗಳೂರು ಭಾರತ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಆಯೋಸಿದ್ದ ‘ರಾಷ್ಟ್ರೀಯ ಭಾವೈಕ್ಯತಾ ಶಿಬಿರ-2025’ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, “ರಾಷ್ಟ್ರೀಯ ಸೇವಾ ಯೋಜನೆ ಸೇವೆ ಹಾಗೂ ಶ್ರಮದ ಮಹತ್ವವನ್ನು ಸಾರುವಂಥದ್ದಾಗಿದೆ. ಆತಿಥ್ಯಕ್ಕೆ ಹೆಸರಾದ ವಿಜಯಪುರ ಜಿಲ್ಲೆಗೆ ವಿವಿಧ ರಾಜ್ಯಗಳಿಂದ ಯುವ ಪ್ರತಿನಿಧಿಗಳು ಆಗಮಿಸಿದ್ದು ಸಂತೋಷದ ಸಂಗತಿ. ಅವರಿಗಾಗಿ ಒಳ್ಳೆಯ ಪರಿಸರವನ್ನು ಒದಗಿಸುವುದು ನಮ್ಮ ಕರ್ತವ್ಯವಾಗಿದ್ದು, ನಮ್ಮ ಸಂಸ್ಕೃತಿಯನ್ನು ಅವರಿಗೂ ಪರಿಚಯಿಸುವ ಅವಕಾಶ ಈ ಕಾರ್ಯಕ್ರಮದ ಮೂಲಕ ಸಿಕ್ಕಿದೆ. ವಿದ್ಯಾರ್ಥಿಗಳು ಶ್ರಮದ ಮಹತ್ವವನ್ನು ಅರ್ಥಮಾಡಿಕೊಂಡು, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು” ಎಂದರು.
ಸಂದರ್ಭದಲ್ಲಿ ಎನ್‌ಎಸ್ಎಸ್ ಕೋಶದ ಸಂಯೋಜನಾಧಿಕಾರಿ ಡಾ.ಅಶೋಕ ಕುಮಾರ ಸುರಪುರ ಮಾತನಾಡಿ, ಕಳೆದ ಏಳು ದಿನಗಳಿಂದ ನಡೆದ ಭಾವೈಕ್ಯತಾ ಶಿಬಿರದ ಕಾರ್ಯ ಚಟುವಟಿಕೆಗಳ ಕುರಿತು ವಿವರಣೆ ನೀಡಿದರು. ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ವರ್ಣರಂಜಿತ ತೆರೆ ಬಿದ್ದಿತು. ಮಹಾರಾಷ್ಟ್ರ, ತಮಿಳ್ನಾಡು, ಕನ್ನಡ ಸೇರಿ ವಿವಿಧ ಭಾಷೆ ಮೂಲಕ ಸಂಭಾಷಣೆ ಮೂಲಕ ಭಾವೈಕ್ಯತೆ ಸಂದೇಶ ಸಾರಿದರು. ಆಯಾ ರಾಜ್ಯದ ಉಡುಗೆ ಸಂಸ್ಕೃತಿಯನ್ನು ಸಾರುವ ವೇಷದಲ್ಲಿ ಯುವ ಸ್ವಯಂ ಸೇವಕರು ಗಮನ ಸೆಳೆದು ತಮ್ಮ ರಾಜ್ಯದ ಸಾಂಸ್ಕೃತಿಕ ಸಿರಿವಂತಿಕೆಯನ್ನು ಪರಿಚಯಿಸುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ: ವಿಜಯಪುರ | ಹರನಾಳ ಗ್ರಾಪಂ ಅವ್ಯವಹಾರ ಖಂಡಿಸಿ ದಸಂಸ ಪ್ರತಿಭಟನೆ
ಸಮಾರಂಭದಲ್ಲಿ ಕೇರಳ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಏಳು ರಾಜ್ಯಗಳಿಂದ 65 ವಿಶ್ವವಿದ್ಯಾಲಯಗಳಿಂದ 200 ಕ್ಕೂ ಹೆಚ್ಚು ಎನ್ಎಸ್‌ಎಸ್ ಸ್ವಯಂ ಸೇವಕರು, ಶಿಕ್ಷಣ ಆಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ವಿಷ್ಣು ಶಿಂದೆ, ಮಲ್ಲಮ್ಮ ವಾಜಪ್ಪನ್ನವರ, ವಿವಿಧ ವಿಭಾಗಗಳ ವಿದ್ಯಾರ್ಥಿನಿಯರು, ಮುಖ್ಯಸ್ಥರು, ಬೋಧಕ ವರ್ಗದವರು ಉಪಸ್ಥಿತರಿದ್ದರು.