“ಎರಡು ತಿಂಗಳ ಕಾಲಾವಧಿಯೊಳಗೆ ಎಲ್ಲ ದತ್ತಾಂಶಗಳನ್ನ ಕ್ರೂಢೀಕರಿಸಿ, ಜನಗಣತಿ ಮಾಡಿ ಎಲ್ಲ ಅಂಶಗಳನ್ನ ಇಟ್ಟುಕೊಂಡು ಅಂತಿಮ ವರದಿಯನ್ನ ಪಡೆದು ಒಳಮೀಸಲಾತಿ ಜಾರಿ ಮಾಡುತ್ತೇವೆ ಎಂದು ಹೇಳುವ ಸರ್ಕಾರದ ಮಾತಿನ ಮೇಲೆ ನಂಬಿಕೆ ಇದೆ. ಸರ್ಕಾರ ಕೊಟ್ಟ ಮಾತನ್ನ ಉಳಿಸಿಕೊಳ್ಳಬೇಕು. ಸಾಮಾಜಿಕ ಕಾಳಜಿಯಿಂದ ನೈತಿಕವಾಗಿ ಈ ಕೆಲಸ ಮಾಡಬೇಕು. ಒಳಮೀಸಲಾತಿ ಜಾರಿ ಮಾಡಿ ನಮಗೆ ಸಿಹಿ ಸುದ್ದಿ ನೀಡಬೇಕು. ಇಲ್ಲವಾದರೇ, ಸರ್ಕಾರದ ವಿರುದ್ಧ ಬೃಹತ್ ರಾಜ್ಯವ್ಯಾಪ್ತಿ ರ‍್ಯಾಲಿ, ಸಮಾವೇಶ ಮಾಡುತ್ತೇವೆ. ಎರಡು ತಿಂಗಳೊಳಗಾಗಿ ಒಳಮೀಸಲಾತಿ ಜಾರಿ ಮಾಡಬೇಕು” ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಬಸವರಾಜ್ ಕೌತಾಳ್ ಸರ್ಕಾರಕ್ಕೆ ಆಗ್ರಹಿಸಿದರು.
ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಮತ್ತು ಜನರನ್ನು ಜಾಗೃತಿಗೊಳಿಸಲು ಒಳಮೀಸಲಾತಿ ಹೋರಾಟಗಾರರ ಸಮಾಲೋಚನಾ ಸಭೆ ಬೆಂಗಳೂರಿನ ಗಾಂಧಿ ಭವನದಲ್ಲಿ ಶನಿವಾರ ನಡೆಯಿತು. ಈ ಸಭೆಯಲ್ಲಿ ಹಲವು ಸಮುದಾಯಗಳ ಮುಖಂಡರು ಭಾಗವಹಿಸಿದ್ದರು.
ಮುಂದುವರೆದು ಮಾತನಾಡಿದ ಅವರು, “ನಾಗಮೋಹನ್ ದಾಸ್ ಶಿಫಾರಸ್ಸಿನಂತೆ ಮಧ್ಯಂತರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಈ ವರದಿಯ ಪ್ರಮುಖ ಅಂಶಗಳನ್ನು ಇಟ್ಟುಕೊಂಡು ಚರ್ಚೆ ಮಾಡಿ ಈ ಅಂಶಗಳನ್ನು ಜನರ ಮಧ್ಯೆ ತೆಗದುಕೊಂಡು ಹೋಗಬೇಕಿದೆ. ಪರಿಶಿಷ್ಟ ಜಾತಿಯ 101 ಜಾತಿಗಳ ಜನಗಣತಿ ಆಗಲೇಬೇಕು. ದತ್ತಾಂಶ, ತಾಂತ್ರಿಕ ಅಂಶಗಳನ್ನ ಕ್ರೂಢೀಕರಿಸಬೇಕು. ಇವತ್ತಿನ ಸಭೆಯಲ್ಲಿ ಮಾದಿಗ ಸಂಘಟನೆ ಹಾಗೂ ಇನ್ನಿತರ ಸಂಘಟನೆಯ ಮುಖಂಡರು ಸಮಾಲೋಚನಾ ಮಾಡಿದ್ದೇವೆ. ಈ ಜನಗಣತಿಯನ್ನ ಜನರ ಮಧ್ಯೆ ತೆಗೆದುಕೊಂಡು ಹೋಗಬೇಕಿದೆ. ಈ ಜನಗಣತಿಯಲ್ಲಿ ನಾವೆಲ್ಲರೂ ಸಕ್ರೀಯವಾಗಿ ಭಾಗವಹಿಸಬೇಕಿದೆ. ರಾಜ್ಯ ಮಟ್ಟದ ಪ್ರವಾಸ ಮಾಡಬೇಕು. ಎಲ್ಲ ಸಂಘಟನೆಗಳ ಮುಖಂಡರು ಸಮುದಾಯಗಳ ಮುಖಂಡರು ಇದರಲ್ಲಿ ಭಾಗವಹಿಸಬೇಕು. ಇದರ ಬಗ್ಗೆ ಕಾರ್ಯಕ್ರಮ ರೂಪಿಸಬೇಕು. ಮಾದಿಗ ಸಮುದಾಯದ ಜನರನ್ನ ಹೆಚ್ಚು ಜಾಗೃತಗೊಳಿಸಬೇಕು. ಅತ್ಯಂತ ಜಾಗೃತಿಯಿಂದ ಜವಾಬ್ದಾರಿಯಿಂದ ಈ ಸಮುದಾಯವನ್ನು ಜಾಗೃತಗೊಳಿಸಬೇಕು. ಈ ಹಿಂದೆ ಸರ್ಕಾರ ಕೊಟ್ಟ ಮಾತಿನಂತೆ ಒಳಮೀಸಲಾತಿ ವಿಚಾರದಲ್ಲಿ ನಡೆದುಕೊಂಡಿಲ್ಲ. ಇದು ಖಂಡನಾರ್ಹ. ಇದೇ ರೀತಿ ಸರ್ಕಾರ ಮುಂದುವರೆದರೇ ಬೃಹತ್ ಪ್ರತಿಭಟನೆ ಮಾಡುತ್ತೇವೆ. ಎಲ್ಲ ಜಿಲ್ಲೆಗಳಲ್ಲಿಯೂ ಈ ರೀತಿ ಪ್ರತಿಭಟನೆಗೆ ಕರೆ ಕೊಡುತ್ತೇವೆ” ಎಂದು ಹೇಳಿದರು.
“ವೈಜ್ಞಾನಿಕವಾದ ದತ್ತಾಂಶಗಳು, ಸಾಮಾಜಿಕ ಅಂಶಗಳ ದತ್ತಾಂಶಗಳಿಗಾಗಿ ಪರಿಶಿಷ್ಟ ಜಾತಿಯ ಸಮೀಕ್ಷೆ ಮಾಡಬೇಕು. ಸರ್ಕಾರವೇ ಈ ಸಮೀಕ್ಷೆ ಮಾಡಬೇಕು” ಎಂದರು.
ಕರ್ನಾಟಕ ಒಳಮೀಸಲಾತಿ ಜಾರಿಗಾಗಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಕರಿಯಪ್ಪ ಗುಡಿಮನಿ, “ನಾಗಮೋಹನ್ ದಾಸ್ ಸಮುದಾಯದ ಬಗ್ಗೆ ಖಾಳಜಿ ಇಟ್ಟು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಇಡೀ ರಾಜ್ಯದಲ್ಲಿ ಎಲ್ಲ ಸಮುದಾಯದ ಅಂದರೆ ಹೊಲೆಯ, ಮಾದಿಗ, ಭೋವಿ, ಲಂಬಾಣಿ, ಡೋಹರ್, ಡೊಕ್ಕಲರು ಸಮೀಕ್ಷೆ ಮಾಡಲು ಬಂದ ಅಧಿಕಾರಿಗಳಿಗೆ ನಿಮ್ಮ ಜಾತಿ ಯಾವುದು ಎಂದು ಸ್ಪಷ್ಟವಾಗಿ ಹೇಳಬೇಕು. ಪರಿಶಿಷ್ಟ ಜಾತಿ ಅಥವಾ ಎಸ್ ಸಿ ಎಂದು ಹೇಳಬೇಡಿ. ನಿಮ್ಮ ನಿಖರವಾದ ಜಾತಿ ಯಾವುದು ಎಂದು ಹೇಳಿ. ಭಿಕ್ಷುಕರಿಗೂ ಕೂಡ ಈ ಮೀಸಲಾತಿ ಸಿಗಬೇಕು. ಆದಿ ಕರ್ನಾಟಕ ಇದ್ದರೇ ಅದರ ಮುಂದೆ ಮಾದಿಗ ಎಂದು ಬರೆಸಿ, ಯಾವುದೇ ಕಾರಣಕ್ಕೂ ಅವಮಾನಕ್ಕಿಡಾಗದೇ ಮೂಲ ಸಮುದಾಯ ಮಾದಿಗ ಎಂದು ಬರೆಸಿ. ಇಡೀ ರಾಜ್ಯದ ಸಮುದಾಯದವರು ದಾರಿ ತಪ್ಪದೇ ನಿಮ್ಮ ಜಾತಿ ಬರೆಸಲೇಬೇಕು. ಇಲ್ಲವಾದರೇ, ನಿಮಗೆ ತೊಂದರೆ ಉಂಟಾಗುತ್ತದೆ. ಮಕ್ಕಳ ಭವಿಷ್ಯ ಹಾಳಾಗುತ್ತದೆ. ನಮ್ಮ ಭವಿಷ್ಯದ ಮಕ್ಕಳಿಗೆ ನ್ಯಾಯ, ಶಿಕ್ಷಣ, ಉದ್ಯೋಗ, ಆರ್ಥಿಕ ಭದ್ರತೆ ಸಿಗುವುದಿಲ್ಲ. ನಮ್ಮ ಭವಿಷ್ಯದ ಮಕ್ಕಳಿಗೆ ನ್ಯಾಯ ಸಿಗಲಿ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ನಗರ ನಿವೃತ್ತ ಪೊಲೀಸ್ ಆಯುಕ್ತ ಬಿ ಎನ್ ಗರುಡಾಚಾರ್ ನಿಧನ
ದಾಸನೂರು ಕೂಸಣ್ಣ ಮಾತನಾಡಿ, “ಒಳಮೀಸಲಾತಿಗೆ ಸಂಬಂಧಿಸಿದಂತೆ ಮಧ್ಯಂತರ ವರದಿಯನ್ನ ನಾಗಮೋಹನ್ ದಾಸ್ ಅವರು ಸಿಎಂ ಅವರಿಗೆ ಸಲ್ಲಿಸಿದ್ದಾರೆ. ಮೂರು ನಾಲ್ಕು ಅಂಶಗಳ ಆಧಾರ ಮೇಲೆ ಹೊಸ ಸಮೀಕ್ಷೆ ನಡೆಸಬೇಕು. ಆ ಸಮೀಕ್ಷೆಯ ಆಧಾರದ ಮೇಲೆ ದತ್ತಾಂಶ ಕ್ರೂಢಿಕರಣ ಮಾಡಿ ಇದರ ಆಧಾರದ ಮೇಲೆ ಮೀಸಲಾತಿ ವರ್ಗೀಕರಣ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಇದು ಸ್ವಾಹತಾರ್ಹ” ಎಂದರು.
“ಈ ಹಿಂದೆ ಶಾಸನಬದ್ದವಾಗಿ ಸದಾಶಿವ ಆಯೋಗ ವರದಿ ಮಾಡಿದೆ. ಇದನ್ನ ಕೆಲವು ಜನರು ಸ್ವೀಕರಿಸುವ ಮನೋಧರ್ಮ ಹೊಂದಿಲ್ಲ. ಜನಗಣತಿಯಲ್ಲಿಯೂ ಕೂಡ ಗೊಂದಲಗಳನ್ನ ಸೃಷ್ಟಿ ಮಾಡಿದ್ದಾರೆ. ಇದರಲ್ಲಿ ತಾರ್ಕಿಕ ಅಂತ್ಯ ಇಲ್ಲ ಎಂದು ನಾಗಮೋಹನ್ ದಾಸ್ ಮುಂದೆ ಮನವರಿಕೆ ಆಗಿದೆ. ಇದು ಮಾದಿಗ ಸಮುದಾಯದ ಸಮೀಕ್ಷೆ ಮಾತ್ರ ಅಲ್ಲ. ಇದು 101 ಜಾತಿಗಳ ಸಮೀಕ್ಷೆ. ಇಲ್ಲಿ ಎಲ್ಲರಿಗೂ ಸಮಾನವಾದ ನ್ಯಾಯ ಸಿಗುತ್ತದೆ. ಪ್ರತಿಯೊಂದು ಜಾತಿಯೂ ತನ್ನ ಪಾತ್ರ ಪ್ರದರ್ಶನ ಮಾಡಿ ತನ್ನ ಅಂಕಿ ಸಂಖ್ಯೆಗಳನ್ನ ಹೇಳಿಕೊಳ್ಳಲು ಇದೊಂದು ಸದಾವಕಾಶ. ಕಾಂತರಾಜು ವರದಿಯ ಆಧಾರದ ಮೇಲೆ ಈಗ ಒಳಮೀಸಲಾತಿ ಕೇಳುವುದಕ್ಕೆ ಆಗುವುದಿಲ್ಲ. ಇದರಲ್ಲಿ ಅನೇಕ ತಾಂತ್ರಿಕ ಗೊಂದಲಗಳಿವೆ. ಹಾಗಾಗಿ, ಈ ಸಮೀಕ್ಷೆಯನ್ನ ದಿಟ್ಟತೆಯಿಂದ ಯಾವುದೇ ಲೋಪವಿಲ್ಲದೇ ಎಲ್ಲವೂ ಸಹ ಪಾರದರ್ಶಕವಾಗಿ ಎಲ್ಲ ಸಮುದಾಯವನ್ನ ಸಹಮತಕ್ಕೆ ತೆಗೆದುಕೊಂಡು ಈ ಸಮೀಕ್ಷೆ ಮಾಡಬೇಕು. 35 ವರ್ಷದ ಸಮಸ್ಯೆಗೆ ಅಂತಿಮ ಹಾಡಬೇಕಿದೆ. ಪದೇಪದೆ ಇದೇ ಸುದ್ದಿಯನ್ನ ಜನರು ನೋಡಬಾರದು. ಈ ಒಳಮೀಸಲಾತಿ ಹೋರಾಟಕ್ಕೆ ಈ ಸಮೀಕ್ಷೆ ದಾರಿ ದೀಪವಾಗಬೇಕು. ಮುನ್ನುಡಿಯಾಗಬೇಕು” ಎಂದರು.