ರೈತರ ಹೊಲದಲ್ಲಿನ ಸುಟ್ಟು ಹೋದ ವಿದ್ಯುತ್ ಪರಿವರ್ತಕವನ್ನು ಬದಲಾಯಿಸಿ ಕೊಡಲು ಲಂಚಕ್ಕೆ ಬೇಡಿಕೆಯಿರಿಸಿದ್ದ ವೇಳೆ ರೈತರು ದೂರು ನೀಡಿದ್ದು ಲಂಚಕ್ಕೆ ಬೇಡಿಕೆ ಇಟ್ಟಿದ್ದ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಸಂತೆಬೆನ್ನೂರು ವಿಭಾಗದ ಸಹಾಯಕ ಇಂಜಿನಿಯರ್ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಚನ್ನಗಿರಿ ತಾಲೂಕು ಮಲ್ಲಾಪುರ ಗ್ರಾಮದ, ಮಂಜುನಾಥ ಬಿ.ಎಂ. ಎನ್ನುವವರು ತನ್ನ ಚಿಕ್ಕಪ್ಪ ಸೋಮಶೇಖರಪ್ಪನವರ ಹೊಲದಲ್ಲಿ ಅಳವಡಿಸಿದ್ದ ವಿದ್ಯುತ್ ಪರಿವರ್ತಕ ಸುಮಾರು 01 ವರ್ಷದ ಹಿಂದೆ ಸುಟ್ಟು ಹೋಗಿದ್ದು, ಸದರಿ ವಿದ್ಯುತ್ ಪರಿವರ್ತಕ ಬದಲಾಯಿಸಿ ಬೇರೆ ವಿದ್ಯುತ್ ಪರಿವರ್ತಕ ಅಳವಡಿಸಿಕೊಡುವ ಬಗ್ಗೆ ಸಂತೆಬೆನ್ನೂರು ಬೆಸ್ಕಾಂ ಕಛೇರಿ, ಅಸಿಸ್ಟೆಂಟ್ ಇಂಜಿನಿಯರ್ ಮತ್ತು ಸೆಕ್ಷನ್ ಆಪೀಸರ್ ಮೋಹನ್ ಕುಮಾರ್ ಗೆ ಕೇಳಿದ್ದು, ಅಧಿಕಾರಿಯು ಹತ್ತು ಸಾವಿರ ರೂಪಾಯಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು, 2025 ಮಾರ್ಚ್ 29 ರಂದು ರಂದು ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ಸ್ವೀಕರಿಸಿದ್ದ ಲೋಕಾಯುಕ್ತ ಪೊಲೀಸರು ಮೊಕದ್ದಮೆ ಸಂ:04/2025 ಯು ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಅಸಿಸ್ಟೆಂಟ್ ಇಂಜಿನಿಯರ್ ಮೋಹನ್ ಕುಮಾರ್ ಹತ್ತು ಸಾವಿರ ರೂಪಾಯಿ ಲಂಚದ ಹಣವನ್ನು ಸ್ವೀಕರಿಸುವ ವೇಳೆ ದಾಳಿ ನಡೆಸಿ ದಸ್ತಗಿರಿ ಮಾಡಿ ವಿಚಾರಣೆ ಕೈಗೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಒಳಮೀಸಲಾತಿ ಜಾರಿಗೆ ತರದೇ ಸರ್ಕಾರ ವಂಚನೆ; ಮಾದಿಗ ಸಂಘಟನೆಗಳ ಒಕ್ಕೂಟ.
ಕರ್ನಾಟಕ ಲೋಕಾಯುಕ್ತದ ದಾವಣಗೆರೆ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪೂರೆ, ಪೊಲೀಸ್ ಉಪಾಧೀಕ್ಷಕಿ ಕಲಾವತಿರವರ ಮಾರ್ಗದರ್ಶನದಲ್ಲಿ, ಪೊಲೀಸ್ ನಿರೀಕ್ಷಕ ಹೆಚ್.ಗುರುಬಸವರಾಜು, ಸರಳ. ಪಿ. ಹಾಗೂ ಪೊಲೀಸ್ ಸಿಬ್ಬಂದಿಗಳು ಭಾಗಿಯಾಗಿದ್ದು ಯಶಸ್ವಿ ಕಾರ್ಯಾಚರಣೆ ನೆಡೆಸಿದ್ದಾರೆ.