ಮಳೆ ಅಭಾವದ ಕಾರಣ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಕೊಪ್ಪಳ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಕುಡಿಯುವ ನೀರು ಸರಬರಾಜು ಸೇರಿದಂತೆ ಹಲವು ವಿಷಯಗಳ ಕುರಿತು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿ, ಅವರು ಮಾತನಾಡಿದರು.
“ಮಳೆ ಬಾರದ ಕಾರಣ ಜಲ ಮೂಲಗಳು ಬತ್ತಿರುವ ಕಡೆ ಸಮರ್ಪಕ ನೀರಿನ ಪೂರೈಕೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಈಗಿನಿಂದಲೇ ಮಾಡಿಕೊಳ್ಳಬೇಕು. ಬೇರೆ ನೀರಿನ ಮೂಲಗಳು ಅಥವಾ ಖಾಸಗಿ ಬೋರ್‌ವೆಲ್‌ಗಳನ್ನು ಗುರುತಿಸಿಕೊಂಡು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಕ್ಕೆ ಸನ್ನದ್ಧರಾಗಿರಬೇಕು” ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಅಭಿಯಂತರರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
“ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಗ್ರಾಮೀಣ ಸೇರಿದಂತೆ ನಗರ ಪ್ರದೇಶಗಳಲ್ಲಿನ ಯಾವುದೇ ಕಡೆಗಳಲ್ಲಿ ಕುಡಿಯುವ ನೀರು ಸರಬರಾಜು ಪೈಪುಗಳಲ್ಲಿ ಕಲುಷಿತ ನೀರು ಸೇರದ ಹಾಗೆ ಸೋರಿಕೆ ಆಗುವುದನ್ನು ತಡೆಯುವುದಕ್ಕೆ ಮೊದಲ ಆದ್ಯತೆ ನೀಡಬೇಕು” ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕು ಮಟ್ಟದಲ್ಲಿಯೂ ಸಭೆ ನಡೆಯಲಿ: “ನೀರಿನ ಸಮಸ್ಯೆ ಕಾಣಿಸಿದ ಕಡೆ ಭೇಟಿ ನೀಡಿ ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಜಿಲ್ಲಾಮಟ್ಟದ ಸಭೆಗಳಲ್ಲಿ ನಿರ್ದೇಶಿಸಿದಂತೆ ಕಾರ್ಯಪ್ರವೃತ್ತರಾಗಬೇಕು. ತಾಲೂಕು ಮಟ್ಟದಲ್ಲಿಯೂ ತಹಸೀಲ್ದಾರರು, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಸೇರಿದಂತೆ ಇತರ ಅಧಿಕಾರಿಗಳು ನಿಯಮಿತವಾಗಿ ಸಭೆ ನಡೆಸಿ ಜಿಲ್ಲಾಮಟ್ಟದ ಸಭೆಯಲ್ಲಿ ತಿಳಿಸಿದ ಅಂಶಗಳ ಬಗ್ಗೆ ಸಭೆಗಳಲ್ಲಿ ಚರ್ಚಿಸಿ ತಾಲೂಕು ಮಟ್ಟದಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಜವಾಬ್ದಾರಿಯನ್ನು ಹಂಚಿಕೆ ಮಾಡಬೇಕು” ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಕುಡಿಯುವ ನೀರು ಪೂರೈಕೆಗೆ ಅನುಕೂಲವಾವ ಹಾಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಲು ಇದೇ ವೇಳೆ ಜಿಲ್ಲಾಧಿಕಾರಿಗಳು ಜೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನೀರಿನ ಪರೀಕ್ಷೆ ನಡೆಸಿ: ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಕೊರೆಯಿಸಿದ ಎಲ್ಲ ಕೊಳವೆಬಾವಿಯ ನೀರನ್ನು ಪರೀಕ್ಷೆಗೊಳಪಡಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ವಾರಕ್ಕೊಮ್ಮೆ, ಕೆರೆ, ಬಾವಿ ಸೇರಿದಂತೆ ಎಲ್ಲ ನೀರಿನ ಮೂಲಗಳನ್ನು ವಾರಕ್ಕೆರಡು ಬಾರಿ ಪರೀಕ್ಷಿಸುವುದನ್ನು ಕಡ್ಡಾಯಗೊಳಿಸಬೇಕು” ಎಂದು ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ, ಗ್ರಾಮ ಮಟ್ಟದ ಅಧಿಕಾರಿಗಳಿಗೆ ನಿರ್ದೇಶಿಸಿದರು.
“ನೀರು ಪೂರೈಸುವ ಮುನ್ನ ಮೇಲ್ಮಟ್ಟದ ಜಲಾಗಾರಗಳು ಮತ್ತು ಇನ್ನಿತರ ನೀರು ಶೇಖರಣೆ ಪ್ರದೇಶಗಳ ಶುದ್ಧೀಕರಣಕ್ಕೆ ಹೆಚ್ಚಿನ ಒತ್ತು ಕೊಡಬೇಕು” ಎಂದು ಸೂಚನೆ ನೀಡಿದರು.
ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ವರದಿಯಾದ ಶಂಕಿತ ವಾಂತಿ ಬೇಧಿ ಪ್ರಕರಣಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತಾಲೂಕುವಾರು ಆರೋಗ್ಯ ಕಾರ್ಯಕ್ರಮಗಳ ಜಾರಿಯ ಬಗ್ಗೆ ಸಲಹೆ ಮಾಡಿದರು.
“ಶಂಕಿತ ವಾಂತಿ ಬೇಧಿ ಪ್ರಕರಣಗಳು ಕಾಣಿಸಿದಲ್ಲಿ ಅಂತಹ ಕಡೆಗಳಲ್ಲಿ ಕೂಡಲೇ ತಾತ್ಕಾಲಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಲು ಮತ್ತು ಔಷಧಿ ಲಭ್ಯತೆಯ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕು. ಡೆಂಗಿ, ಚಿಕೂನ್ ಗುನ್ಯ ಹರಡಲು ಕಾರಣವಾಗುವ ಮಾರಕ ಸೊಳ್ಳೆಗಳ ನಿಯಂತ್ರಣಕ್ಕೆ ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಬೇಕು. ಆರೋಗ್ಯ ಇಲಾಖೆಯ ಜಾಗೃತಿ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸಬೇಕು” ಎಂದು ಜಿಲ್ಲಾ ಹಾಗೂ ತಾಲೂಕು ಮಟ್ಟದ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
“ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಗಟಾರುಗಳ ಶುಚಿತ್ವ, ಸುತ್ತಲಿನ ಪರಿಸರ ಸಂರಕ್ಷಣೆ ಮಾಡಲು ಮತ್ತು ವೈಯಕ್ತಿಕ ಶುಚಿತ್ವದ ಬಗ್ಗೆ ಗಮನ ಹರಿಸಲು ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. ಸ್ವಚ್ಛ ವಾಹಿನಿಗಳ ಮೂಲಕ ಮತ್ತು ಮನೆಮನೆಗೆ ಕರಪತ್ರ ವಿತರಿಸಿ ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಒತ್ತು ಕೊಡಬೇಕು” ಎಂದು ಜಿಲ್ಲಾಧಿಕಾರಿಗಳು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಮತ್ತು ಗ್ರಾಮಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಕರಣಗಳು ಮರುಕಳಿಸಿದಲ್ಲಿ ಕ್ರಮ : “ನೀರು ಪರೀಕ್ಷೆಯ ವೇಳೆ ಕುಡಿಯಲು ಯೋಗ್ಯವಲ್ಲ ಎಂದು ವರದಿ ಬಂದ ಕೂಡಲೇ ಜನತೆಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆಗೆ ಕ್ರಮ ವಹಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳು ಎಲ್ಲ ಕಡೆ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿನ ಗಟಾರುಗಳನ್ನು ಶುಚಿಯಾಗಿಟ್ಟುಕೊಳ್ಳವಂತೆ ಜಾಗೃತಿ ಮೂಡಿಸಬೇಕು. ಗ್ರಾಮದ ಯಾವುದೇ ಕಡೆ ನೀರು ನಿಲ್ಲದಂತೆ ಗ್ರಾಮದಲ್ಲಿ ಉತ್ತಮ ಪರಿಸರ ಮತ್ತು ಗ್ರಾಮದ ಸೌಂದರ್ಯೀಕರಣಕ್ಕೆ ಆಯಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮುತುವರ್ಜಿ ವಹಿಸಿ ಕಾರ್ಯಪ್ರವೃತ್ತರಾಗಬೇಕು” ಎಂದರು.
“ಆಯಾ ತಾಲೂಕಿನ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು ಈ ಬಗ್ಗೆ ಸೂಕ್ತ ಮೇಲ್ವಿಚಾರಣೆ ನಡೆಸಬೇಕು. ಹಾಗಾಗಿ ವಾಂತಿ ಭೇದಿ ಪ್ರಕರಣಗಳು ಮರುಕಳಿಸಿ ಅದಕ್ಕೆ ಕಲುಷಿತ ನೀರು ಸೇವನೆಯೇ ಕಾರಣವೆಂದು ಸಾಬೀತಾದಲ್ಲಿ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೇ ಹೊಣೆಯಾಗಿಸಿ ಕ್ರಮ ಕೈಗೊಳ್ಳಲಾಗುವುದು” ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸಹಾಯಕ ಆಯುಕ್ತರ ವಜಾಕ್ಕೆ ವಕೀಲರ ಆಗ್ರಹ
ಇ-ಕೆವೈಸಿ ಕಾರ್ಯ: ಇ-ಕೆವೈಸಿ ಮಾಡಿಸಿರುವ ಮತ್ತು ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ನಂಬರ್ ಲಿಂಕ್ ಮಾಡಿಸಿರುವ ಫಲಾನಭವಗಳಿಗೆ ಮಾತ್ರ ಕಿಸಾನ್ ಸಮ್ಮಾನ್ ಹಣ ಜಮೆಯಾಗಲಿದೆ. ಹೀಗಾಗಿ ಇ-ಕೈವೈಸಿ ಬಾಕಿ ಉಳಿಸಿಕೊಂಡಿರುವ ರೈತರು ರೈತ ಸಂಪರ್ಕ ಕೇಂದ್ರಗಳು ಅಥವಾ ಗ್ರಾಮ್ ಒನ್ ಇಲ್ಲವೇ ಸೇವಾ ಸಿಂಧು ಕೇಂದ್ರಗಳಿಗೆ ಭೇಟಿ ನೀಡಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೈವೈಸಿ ಮಾಡಿಸಬೇಕು ಎನ್ನುವ ಮಾಹಿತಿಯನ್ನು ರೈತರಿಗೆ ತಲುಪಿಸುತ್ತಿದ್ದೇವೆ. ಇದಕ್ಕಾಗಿ ಜೂನ್ 30 ಕೊನೆಯ ದಿನವಾಗಿದ್ದು, ಈ ಮಾಹಿತಿಯನ್ನು ರೈತರಿಗೆ ಮತ್ತೊಮ್ಮೆ ತಲುಪಿಸುವ ಕೃಷಿ ಇಲಾಖೆಯ ಕಾರ್ಯಕ್ಕೆ ಆಯಾ ತಾಲೂಕುಗಳಲ್ಲಿ ತಹಸೀಲ್ದಾರರು ಮತ್ತು ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳ ಸಹಕಾರ ಕೋರಿ ಅನುಷ್ಠಾನಗೊಳಿಸಲಾಗುತ್ತಿದೆ” ಎಂದು ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ ಕಡಿ, ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲಶೆಟ್ಟಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯರಾಣಿ ಕೆ ವಿ ಸೇರಿದಂತೆ ಹಲವು ತಾಲೂಕುಗಳ ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮತ್ತು ಇತರ ಇಲಾಖೆಗಳ ಅಧಿಕಾರಿಗಳು ಇದ್ದರು.