ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್-ವೇನಲ್ಲಿ ಟೋಲ್ ಶುಲ್ಕವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೆಚ್ಚಿಸಿದೆ. ಪ್ರಾಧಿಕಾರದ ನಿರ್ಧಾರವನ್ನು ಖಂಡಿಸಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕಣಮಿಣಕಿ ಟೋಲ್ ಬಳಿ ಪ್ರತಿಭಟನೆ ನಡೆಸಿದ್ದಾರೆ.
ಕುಂಬಳಗೋಡು ಬಳಿಯ ಕಣಮಿಣಕಿ ಟೋಲ್ ಪ್ಲಾಜಾ ಬಳಿ ಜಮಾಯಿಸಿದ ಕಾರ್ಯಕರ್ತರು, ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಟೋಲ್ ದರವನ್ನು ಇಳಿಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ರಸ್ತೆ ತಡೆಗೆ ಮುಂದಾದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಸು.ಚಿ ನೀಲೇಶ್ಗೌಡ, “ಎಕ್ಸ್ಪ್ರೆಸ್-ವೇಅನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಮಳೆ ಬಂದಾಗೆಲ್ಲ ರಸ್ತೆಯಲ್ಲಿ ನೀರು ತುಂಬಿಕೊಳ್ಳುತ್ತದೆ. ಸರಿಯಾದ ನಿರ್ವಹಣೆಯಿಲ್ಲ. ಆದರೂ, ಪದೇ-ಪದೇ ಟೋಲ್ ದರ ಹೆಚ್ಚಿಸಲಾಗುತ್ತಿದೆ. ಇದೀಗ, 22% ಟೋಲ್ ದರ ಹೆಚ್ಚಿಸಿದ್ದಾರೆ. ಇದು ಖಂಡನೀಯ” ಎಂದು ಕಿಡಿಕಾರಿದ್ದಾರೆ.
‘ಟೋಲ್ ದರ ಹೆಚ್ಚಳದಿಂದ ವಾಹನ ಸವಾರರಿಗೆ ಭಾರೀ ಹೊರೆ ಬೀಳಲಿದೆ. ಕೂಡಲೇ ದರವನ್ನು ಕಡಿತಗೊಳಿಸಬೇಕು” ಎಂದು ಆಗ್ರಹಿಸಿದ್ದಾರೆ.