ಸಮಾಜವಾದಿ ಪಕ್ಷದ ರಾಷ್ಟ್ರೀಯ ವಕ್ತಾರ ತಾರಿಕ್ ಖಾನ್ ಅವರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಬಂದಿದೆ. ಗ್ಯಾಂಗ್‌ಗೆ ಸೇರಿದ ವ್ಯಕ್ತಿ ಎಂದು ಹೇಳಿಕೊಂಡು ಓರ್ವ ಕರೆ ಮಾಡಿದ್ದು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಎರಡು ದಿನಗಳ ಹಿಂದೆ ಈ ಕರೆ ಮಾಡಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶನಿವಾರ ಸಂಜೆಯಿಂದ ಸಾಮಾಜಿಕ ಮಾಧ್ಯಮದಲ್ಲಿ ಈ ಬೆದರಿಕೆ ಕರೆಯ ಆಡಿಯೋ ಹರಿದಾಡುತ್ತಿದೆ. ಎಸ್‌ಪಿ ನಾಯಕ ಖಾನ್ ಅವರನ್ನು ನಿಂದಿಸಲಾಗಿದೆ.
ಇದನ್ನು ಓದಿದ್ದೀರಾ? ಬಿಷ್ಣೋಯ್ ಗ್ಯಾಂಗ್ ಜೀವ ಬೆದರಿಕೆ; ಝಡ್ ಭದ್ರತೆ ಕೋರಿದ ಬಿಹಾರ ಸಂಸದ ಪಪ್ಪು ಯಾದವ್
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಖಾನ್, “ಕಳೆದ ಎರಡು ತಿಂಗಳಿನಿಂದ ನನಗೆ ನಿಂದನೀಯ ಮತ್ತು ಬೆದರಿಕೆ ಕರೆಗಳು ಬರುತ್ತಿವೆ. ಅದನ್ನು ನಾನು ನಿರ್ಲಕ್ಷಿಸಿದೆ. ಆದರೆ ಶುಕ್ರವಾರ ರಾತ್ರಿ ಕರೆ ಮಾಡಿದ ವ್ಯಕ್ತಿ ನಿಂದಿಸಿದ್ದು, ಬೆದರಿಕೆ ಹಾಕಿದ್ದರು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕಡೆಯಿಂದ ಮಾತನಾಡುವುದಾಗಿ ಕರೆ ಮಾಡಿದವರು ಹೇಳಿದ್ದಾರೆ” ಎಂದು ತಿಳಿಸಿದರು.
ಬೆದರಿಕೆಯ ಗಂಭೀರತೆಯನ್ನು ಪರಿಗಣಿಸಿ ನಾನು ತಕ್ಷಣ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರಿಗೆ ಮಾಹಿತಿ ನೀಡಿದ್ದೇನೆ. ಈಗ, ಆ ಸಂಭಾಷಣೆಯ ಆಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಸಲ್ಮಾನ್ ಖಾನ್ ಮನೆ ಮುಂದೆ ಗುಂಡಿನ ದಾಳಿ: ಇಬ್ಬರ ಬಂಧನ
“ಇದು ವಂಚನೆಯಾಗಿರಬಹುದು ಎಂದು ನಾನು ಪೊಲೀಸರಿಗೆ ತಿಳಿಸಿದ್ದೇನೆ. ಆದರೆ ಕರೆ ಮಾಡಿದವರನ್ನು ಗುರುತಿಸಿ ಬಂಧಿಸುವುದು ಅತ್ಯಗತ್ಯ. ಎಲ್ಲಾ ಮಾಹಿತಿಯನ್ನು ನಾನು ಪೊಲೀಸರಿಗೆ ಒದಗಿಸಿದ್ದೇನೆ” ಎಂದು ಖಾನ್ ತಿಳಿಸಿದ್ದಾರೆ. ಕರೆಯಲ್ಲಿ “ಎಚ್ಚರಿಕೆಯಿಂದ ಇರದಿದ್ದರೆ ನೀವೇ ಮುಂದಿನ ಗುರಿ” ಎಂದು ಹೇಳಲಾಗಿದೆ.
ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್, ಮಂಗಳವಾರ ಖಾನ್ ಅವರನ್ನು ಲಕ್ನೋಗೆ ಕರೆಸಿದ್ದಾರೆ.
