ಸಂವಿಧಾನವು ಆರಂಭವಾಗುವುದೇ ಪ್ರಸ್ತಾವನೆಯಿಂದ. ಅದಕ್ಕೆ ಅದನ್ನು ಸಂವಿಧಾನದ ಓದಿಗೊಂದು ಕೈದೀವಿಗೆ ಎನ್ನುತ್ತೇವೆ. ಇಡೀ ಸಂವಿಧಾನದ ಆಶಯವನ್ನು ಪ್ರಸ್ತಾವನೆಯು ಅಡಕವಾಗಿ ಹೇಳುತ್ತದೆ. ಇದರ ಒಂದೊಂದು ಪದವನ್ನೂ ಚೆನ್ನಾಗಿ ಮನನ ಮಾಡಿಕೊಂಡರೆ ಸಂವಿಧಾನದ ಇತರ ಭಾಗಗಳನ್ನು ಓದುವುದಕ್ಕೆ ಒಂದು ದಿಕ್ಕು ದೊರಕುತ್ತದೆ.

ಅಂಬೇಡ್ಕರರ ಈ ಮಾತನ್ನು ಅನುಸರಿಸಿ, ನಾನು ಕಳೆದ ಆರು ವರ್ಷಗಳಿಂದ ಸಂವಿಧಾನ ಸಾಕ್ಷರತೆಯನ್ನು ಒಂದು ಆಂದೋಲನದ ರೀತಿಯಲ್ಲಿ ನಡೆಸುತ್ತಿದ್ದೇನೆ. ಒಂದು ದಿನದ ಕಾರ್ಯಶಿಬಿರದಲ್ಲಿ ಭಾಗಿಗಳಿಗೆ ಸಂವಿಧಾನದ ರಚನೆಯ ಸಂಕ್ಷಿಪ್ತ ಇತಿಹಾಸ, ಅದರ ಪ್ರಸ್ತಾವನೆಯಲ್ಲಿ ಬರುವ ‘ಭಾರತದ ಜನತೆಯಾದ ನಾವು’ ಎನ್ನುವ ಮಾತಿನ ಅರ್ಥ ಮತ್ತು ನಾವು ಭಾರತದ ನಾಗರಿಕರಾಗಿ ಅಳವಡಿಸಿಕೊಳ್ಳಬೇಕಾದ ಸಾಂವಿಧಾನಿಕ ಮೌಲ್ಯಗಳ ಕುರಿತು ಮನನ ಮಾಡಿಸಲಾಗುತ್ತದೆ. ಸಂವಿಧಾನ ಜಾಗೃತಿಯ ಈ ಆಂದೋಲನದ ಒಂದು ಪ್ರಮುಖ ಅಂಗವಾಗಿ ಎಲ್ಲರಿಗೂ ಸಂವಿಧಾನದ ಪ್ರಸ್ತಾವನೆಯ ಭಿತ್ತಿಚಿತ್ರವನ್ನು ವಿತರಿಸಲಾಗುತ್ತದೆ. ಈಗ ಇದು ನಾನಷ್ಟೇ ಅಲ್ಲ, ನನ್ನ ಶಿಬಿರಗಳಲ್ಲಿ ಭಾಗವಹಿಸಿ, ಸಾಕಷ್ಟು ಆಳವಾಗಿ ಪ್ರಭಾವಿತರಾದವರೂ ತಮ್ಮ ಕಡೆಯಿಂದಲೂ ಇಂಥ ಭಿತ್ತಿಚಿತ್ರಗಳನ್ನು ವಿತರಿಸತೊಡಗಿದ್ದಾರೆ. ಕನ್ನಡದಲ್ಲಿ, ಎಲ್ಲಾ ಸೇರಿ ಹತ್ತು ಸಾವಿರಕ್ಕೂ ಹೆಚ್ಚು ಭಿತ್ರಿಚಿತ್ರಗಳು ವಿತರಿತವಾಗಿರಬಹುದು.
ಸಂವಿಧಾನವು ಆರಂಭವಾಗುವುದೇ ಪ್ರಸ್ತಾವನೆಯಿಂದ. ಅದಕ್ಕೆ ಅದನ್ನು ಸಂವಿಧಾನದ ಓದಿಗೊಂದು ಕೈದೀವಿಗೆ ಎನ್ನುತ್ತೇವೆ. ಇಡೀ ಸಂವಿಧಾನದ ಆಶಯವನ್ನು ಪ್ರಸ್ತಾವನೆಯು ಅಡಕವಾಗಿ ಹೇಳುತ್ತದೆ. ಇದರ ಒಂದೊಂದು ಪದವನ್ನೂ ಚೆನ್ನಾಗಿ ಮನನ ಮಾಡಿಕೊಂಡರೆ ಸಂವಿಧಾನದ ಇತರ ಭಾಗಗಳನ್ನು ಓದುವುದಕ್ಕೆ ಒಂದು ದಿಕ್ಕು ದೊರಕುತ್ತದೆ.
ನಮ್ಮ ಮನೆಗಳಲ್ಲಿ ಧರ್ಮ ಗ್ರಂಥಗಳು ಇರಬಹುದು. ಆದರೆ, ಭಾರತ ಸಂವಿಧಾನದ ಮೂಲ ಪ್ರತಿ ಇದೆಯೇ ಎಂದು ನಾವು ಕೇಳಿಕೊಳ್ಳಬೇಕು. ಸಾಮಾನ್ಯವಾಗಿ ಇದ್ದರೂ ಸಂವಿಧಾನದ ಕುರಿತು ವಿವಿಧ ಲೇಖಕರು ಬರೆದಿರುವ ಪುಸ್ತಕಗಳು ನಿಮ್ಮಲ್ಲಿ ಇರಬಹುದು. ಆದರೆ, ನಾನು ಕೇಳುತ್ತಿರುವುದು ಸಂವಿಧಾನದ ಮೂಲ ಅಧಿಕೃತ ಪಠ್ಯವನ್ನು. ಅದು ಸಾಮಾನ್ಯವಾಗಿ ಅಲಭ್ಯ.
ನಾವು ಭಾರತೀಯರು, ನಮಗೆ ಆ ಕುರಿತು ನಮಗೆ ಹೆಮ್ಮೆ ಇದ್ದರೆ ಅದರ ದ್ಯೋತಕವಾಗಿ ನಮ್ಮ ಮನೆಯಲ್ಲಿ ನಮ್ಮ ಬದುಕಿನ ಮಾರ್ಗದರ್ಶಿಯಾದ ಸಂವಿಧಾನ ಇರಬೇಕು. ಮತ್ತು ಅದನ್ನು ನಮ್ಮ ಶಕ್ತ್ಯನುಸಾರ ಓದಿರಬೇಕು. ಅದರ ಮೌಲ್ಯಗಳನ್ನು ನಮ್ಮ ಮನೆ, ಸಂಸ್ಥೆಗಳಲ್ಲಿ ಅನುಸರಿಸಬೇಕು. ಇದರ ಪ್ರತೀಕವಾಗಿ ನಾವು ಸಂವಿಧಾನದ ಪ್ರಸ್ತಾವನೆಯ ಫೋಟೋವನ್ನು ನಮ್ಮ ಆವರಣದಲ್ಲಿ ಪ್ರದರ್ಶಿಸುವ ಪದ್ಧತಿಯನ್ನು ಜಾರಿಗೆ ತಂದಿದ್ದೇವೆ. ಯಾವ ಆವರಣದಲ್ಲಿ ಸಂವಿಧಾನದ ಪ್ರಸ್ತಾವನೆ ಇದೆಯೋ ಅದು ಸಾಂವಿಧಾನಿಕ ಘನತೆಯನ್ನು ಹೊಂದಿರುತ್ತದೆ ಎಂಬ ಭಾವನೆ ಮತ್ತು ಆ ಆವರಣದಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಜೀವನದ ಮೌಲ್ಯಗಳನ್ನಾಗಿ ಅನುಸರಿಸಲಾಗುತ್ತದೆ ಎಂಬ ಬದ್ಧತೆ.

ಇವತ್ತಿನ ನುಡಿಯಂಗಳದಲ್ಲಿ ನಾನು ಚರ್ಚಿಸ ಬಯಸುವುದು ಎಂದರೆ ಸಂವಿಧಾನದ ಈ ಪ್ರಸ್ತಾವನೆಯಲ್ಲಿ ಬಳಕೆಯಾಗಿರುವ ಭಾಷೆಯ ಕುರಿತು.
ಭಾರತ ಸಂವಿಧಾನದ ಪ್ರಸ್ತಾವನೆಯು, ಇಂಗ್ಲಿಷಿನಲ್ಲಿ 81 ಪದಗಳ ಒಂದೇ ಒಂದು ಅಖಂಡ ವಾಕ್ಯ ಎಂಬುದನ್ನು ಗಮನಿಸಿದ್ದೀರಾ? ಕನ್ನಡದ ಅನುವಾದದಲ್ಲಿ ಅದು 57 ಪದಗಳ ವಾಕ್ಯವಾಗಿದೆ. ಇಂಗ್ಲಿಷಿನ ಈ ಪ್ರಸ್ತಾವನೆಯ, ಸರಕಾರದ ಕೆಲವು ಇಲಾಖೆಗಳು ಹಲವು ರೀತಿಯಲ್ಲಿ ಅನುವಾದಿಸಿಕೊಂಡಿವೆ. ನಾನೂ ಈ ಪದಗಳನ್ನು ನನ್ನದೇ ಆದ ರೀತಿಯಲ್ಲಿ ಅನುವಾದಿಸಿಕೊಂಡಿದ್ದೇನೆ. ಅದಕ್ಕೆ ಕೆಲವರು ಆಕ್ಷೇಪಿಸಿದಾಗ ಅದನ್ನು ನಾನು ಮನೋ ಭಾಷಾವಿಜ್ಞಾನದ ನೆಲೆಗಟ್ಟಿನಲ್ಲಿ ಸಮರ್ಥಿಸಿಕೊಳ್ಳುತ್ತೇನೆ.
ಭಾಷೆ, ಗ್ರಹಿಕೆ, ವ್ಯಕ್ತಿತ್ವ…
ಭಾಷೆಯನ್ನು ಸಂವಹನದ ಸಾಧನ ಎಂದು ಹೇಳಲಾಗುತ್ತದೆ. ನಿಜ, ಆದರೆ, ಭಾಷೆ ಅದಕ್ಕೂ ಹೆಚ್ಚಿನದು. ಅದು ನಮ್ಮ ಆಲೋಚನೆಗಳನ್ನು ರೂಪಿಸುವ, ಗ್ರಹಿಕೆಯನ್ನು ವೃದ್ಧಿಸುವ, ಮತ್ತು ಆತ್ಮಾವಲೋಕನವನ್ನು ಪ್ರೇರೇಪಿಸುವ ಸಾಧನವೂ ಹೌದು. ಆಲೋಚನೆಯ ಸಾಧನವಾಗಿ ಭಾಷೆಯು ನಮಗೆ ವಿಚಾರಗಳನ್ನು ವ್ಯಕ್ತಪಡಿಸಲು, ಸಂಕೀರ್ಣವಾದ ತಾರ್ಕಿಕತೆಯನ್ನು ರೂಪಿಸಿಕೊಳ್ಳಲು, ಅಮೂರ್ತ ಪರಿಕಲ್ಪನೆಗಳನ್ನು ಅನ್ವೇಷಿಸಲು ಅನುವು ಮಾಡಿಕೊಡುತ್ತದೆ. ಭಾಷೆಯು ನಾವು ಹೇಗೆ ಆಲೋಚಿಸುತ್ತೇವೆ ಮತ್ತು ಜಗತ್ತನ್ನು ಹೇಗೆ ಅರ್ಥೈಸುತ್ತೇವೆ ಎಂಬುದನ್ನು ಪ್ರಭಾವಿಸುತ್ತದೆ.
ಭಾಷೆಯು ಅರಿವಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ, ನಾವು ಮಾಹಿತಿಯನ್ನು ಸಂಸ್ಕರಿಸಲು, ತೀರ್ಮಾನಗಳನ್ನು ತಾಳಲು ಮತ್ತು ಸಮಸ್ಯೆಗಳನ್ನು ಬಗೆಹರಿಸಲು ಒಂದು ಚೌಕಟ್ಟನ್ನು ಒದಗಿಸುತ್ತದೆ.
ಭಾಷೆಯು ನಮ್ಮ ಸಾಮಾಜಿಕ ಗುರುತಿನೊಂದಿಗೆ ನಿಕಟವಾದ ಸಂಬಂಧವನ್ನು ಸಂಬಂಧವನ್ನು ಹೊಂದಿದೆ. ನಾವು ಮಾತಾಡುವ ರೀತಿ, ಆಯ್ಕೆ ಮಾಡಿಕೊಳ್ಳುವ ಪದಗಳು, ನಾವು ಬಳಸುವ ಅಭಿವ್ಯಕ್ತಿಗಳು ನಮ್ಮ ಸಾಂಕೃತಿಕ ಹಿನ್ನೆಲೆ, ಸಾಮಾಜಿಕ ಗುಂಪು ಮತ್ತು ವೈಯಕ್ತಿಕ ಗುರುತನ್ನು ಬಿಂಬಿಸುತ್ತವೆ. ನಾವು ಬಳಸುವ ಪದಗಳು ಮಾಹಿತಿಯನ್ನು ನಾವು ಹೇಗೆ ಗ್ರಹಿಸುತ್ತೇವೆ ಮತ್ತು ಸಂಘಟಿಸುತ್ತೇವೆ ಎಂಬುದನ್ನು ಪ್ರಭಾವಿಸುತ್ತವೆ.
ಎಂದರೆ, ನಾವು ಬಳಸುವ ಪದಗಳು ನಮ್ಮ ವ್ಯಕ್ತಿತ್ವವನ್ನು ಬಿಂಬಿಸುವ ಹಾಗೆ, ಅವು ನಮ್ಮ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರಬಹುದು. ಹೀಗಾಗಿ, ಪ್ರಸ್ತುತ ಸಂವಿಧಾನದ ಪ್ರಸ್ತಾವನೆಯನ್ನು ಓದುವ, ಶಪಥ ಮಾಡುವ ಹೊತ್ತಿನಲ್ಲಿ ಅವುಗಳಲ್ಲಿ ಬಳಕೆಯಾಗಿರುವ ಕೆಲವು ಪದಗಳನ್ನು ನಾವು ಸಂವಿಧಾನದ ಆಶಯದ ಬೆಳಕಿನಲ್ಲಿ ಅರ್ಥೈಸಿಕೊಳ್ಳುವುದು ಬಹಳ ಮುಖ್ಯ.
ಸಂವಿಧಾನದ ಪ್ರಸ್ತಾವನೆ

ಇಡೀ ಸಂವಿಧಾನವು ಆರಂಭವಾಗುವುದೇ ‘‘We the People of India…ʼ ಎಂದು. ಸರಕಾರದ ಒಂದು ಅನುವಾದದಲ್ಲಿ ಇದನ್ನು ‘ಭಾರತದ ಪ್ರಜೆಗಳಾದ ನಾವು…’ ಎಂಬಂತೆ ಅನುವಾದಿಸಲಾಗಿದೆ. ಹಲವಾರು ಶತಮಾನಗಳ ರಾಜಶಾಹಿ, ಸುಲ್ತಾನಶಾಹಿ, ನವಾಬಶಾಹಿ ಮತ್ತು ವಸಾಹತುಶಾಹಿ ಆಳ್ವಿಕೆಯ ದಾಸ್ಯದಿಂದ ವಿಮೋಚಿತರಾದ ನಾವು ಈಗಲೂ ‘ಪ್ರಜೆ’ಗಳೇ? ಖಂಡಿತ ಅಲ್ಲ. ‘ಪ್ರಜೆ’ ಎಂದರೆ, ‘ಒಬ್ಬ ಆಳರಸನ ಅಧೀನದಲ್ಲಿರುವ ಅತಂತ್ರ ವ್ಯಕ್ತಿ’ ಎಂದರ್ಥ. ಸ್ವತಂತ್ರ ಭಾರತದಲ್ಲಿ ಯಾರೂ ರಾಜರಲ್ಲ, ಹೀಗಾಗಿ ನಾವು ಪ್ರಜೆಗಳಲ್ಲ. ಆದ್ದರಿಂದ ಪ್ರಸ್ತಾವನೆ, ‘ಭಾರತದ ಜನತೆಯಾದ ನಾವು’ ಎಂದು ಆರಂಭವಾಗುವುದು ಹೆಚ್ಚು ಸರಿ.
ಇದೇ ಧೋರಣೆಯನ್ನು ಅನುಸರಿಸಿ, ‘Democratic’ ಎಂಬ ಪದವನ್ನು ‘ಪ್ರಜಾಸತ್ತಾತ್ಮಕ’ ಎಂದು ಅನುವಾದಿಸಿದ್ದರಲ್ಲಿಯೂ ನಮ್ಮನ್ನು ಪ್ರಜೆಗಳಾಗಿಯೇ ಕಾಣಲಾಗಿದೆ. ಗ್ರೀಕ್ ಭಾಷೆಯಲ್ಲಿ ‘ಡಿಮೊಸ್’ ಎಂದರೆ ಜನ ಎಂದರ್ಥ. ‘ಕ್ರಸಿ’ ಎಂದರೆ, ಆಳ್ವಿಕೆ. ಡಿಮೋಕ್ರಸಿ ಎಂದರೆ ಜನರ ಆಳ್ವಿಕೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಡೆಮಾಕ್ರಸಿ ಎಂದರೆ ಆಡಳಿತವನ್ನು ನಡೆಸಿಕೊಂಡು ಹೋಗುವ ಪ್ರತಿನಿಧಿಗಳನ್ನು ಜನರೇ ಆಯ್ಕೆ ಮಾಡುವಂಥ ಒಂದು ರಾಜಕೀಯ ವ್ಯವಸ್ಥೆ. ಹೀಗಾಗಿ ‘Democratic’ ಎಂಬ ಪದವನ್ನು ‘ಜನತಂತ್ರಾತ್ಮಕ’ ಅಥವಾ ‘ಲೋಕತಂತ್ರಾತ್ಮಕ’ ಎಂದು ಹೇಳುವುದು ಒಳ್ಳೆಯದು.
ನಾಯಕರೋ, ಪ್ರತಿನಿಧಿಗಳೋ?
ನಾನು ಈ ಕುರಿತು ಇಷ್ಟೇಕೆ ಕಾಳಜಿ ವಹಿಸುತ್ತೇನೆ ಎಂದರೆ, ಮೇಲೆ ಓದಿದ ಹಾಗೆ ನಮ್ಮ ಬಾಯಿಂದ ಹೊರಡುವ ಪದಗಳು ನಮ್ಮ ಮನಸ್ಥಿತಿಯನ್ನು ಬಿಂಬಿಸುವ ಹಾಗೆ, ನಾವು ಬಳಸುವ ಪದಗಳು ನಮ್ಮ ಮನಸ್ಥಿತಿಯನ್ನು ರೂಪಿಸುತ್ತವೆಯೂ ಕೂಡ. ಭಾರತೀಯರಾದ ನಾವು ರಾಜಕೀಯವಾಗಿ ಸರ್ವತಂತ್ರ ಸ್ವತಂತ್ರರಾಗಿದ್ದರೂ ನಾವಿನ್ನೂ ಪ್ರಜೆಗಳೇ ಏನೋ ಎನ್ನುವ ಮನಸ್ಥಿತಿಯಲ್ಲಿ ಕೋಟ್ಯಂತರ ಜನಸಾಮಾನ್ಯರು ಈಗಲೂ ಇದ್ದಾರೆ.
ರಾಜಕಾರಣಿಗಳನ್ನು ‘ಜನನಾಯಕರು’ ಎನ್ನುವ ವಾಡಿಕೆ ಇದೆ. ಇವರು ಯಾವ ನೆಲೆಯಲ್ಲಿ ನಮ್ಮ ‘ನಾಯಕರು’ ಆಗುತ್ತಾರೆ. ಅವರ ಬಳಿ ಕೋಟಿಕೋಟಿ ಇದ್ದರೂ, ಪಂಚಾಯತಿ ಸದಸ್ಯರಿಂದ ಹಿಡಿದು ಸಂಸದರವರೆಗೆ ಅವರು ಯಾವುದೇ ಮಟ್ಟದ ಶಾಸಕರಾಗುವುದು, ಮತಚಲಾವಣೆಯ ಮೂಲಕ ನಾವು ನಮ್ಮ ಸಾರ್ವಭೌಮತೆಯನ್ನು ವಹಿಸಿಕೊಟ್ಟರೆ ಮಾತ್ರ. ಹೀಗಾಗಿ ಅವರು ನಮ್ಮ ನಾಯಕರಲ್ಲ, ಅವರು, ನಾವು ಒಪ್ಪಿಕೊಂಡಿರುವವರೆಗೆ, ನಮ್ಮ ಪ್ರತಿನಿಧಿಗಳು, ಅಷ್ಟೇ,
ಸ್ವಾತಂತ್ರ್ಯ ದೊರೆತು, ಸಂವಿಧಾನವೂ ಜಾರಿಗೆ ಬಂದು 70 ವರ್ಷವಾದಾದರೂ, ಜನಪ್ರತಿನಿಧಿಗಳು ತಾವು ರಾಜ, ಮಹಾರಾಜರೇನೋ ಎನ್ನುವಂತೆಯೇ ದರ್ಪದಿಂದ ನಡೆದುಕೊಳ್ಳುತ್ತಾರೆ, ಏಕೆಂದರೆ ಅವರನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಿದ ನಾವು ನಮ್ಮನ್ನು ‘ಪ್ರಜೆ’ಗಳೆಂದೇ ಭಾವಿಸಿ, ಆ ರೀತಿ ವಿನಯ, ಶರಣಾಗತಿ ಭಾವದಿಂದ ನಡೆದುಕೊಳ್ಳುತ್ತೇವೆ.
ನೋಡಿ, ಈ ದೇಶದ ಜನತೆಯಾದ ನಾವು ಸಂಪತ್ತನ್ನು ಸೃಷಿಸುವ, ಸೇವೆಗಳನ್ನು ನೀಡುವ ಕೆಲಸದಲ್ಲಿ ನಿರತರಾಗಿದಾರೆ, ದೇಶವನ್ನು ನಡೆಸಿಕೊಂಡು ಹೋಗುವಷ್ಟು ಸಮಯವಾಗಲೀ, ಪರಿಣತಿಯಾಗಲೀ ನಮ್ಮಲ್ಲಿ ಇರುವುದಿಲ್ಲ. ಅದಕ್ಕಾಗಿ ನಾವು ನಮ್ಮ ಪರವಾಗಿ, ನಮ್ಮನ್ನೂ ಒಳಗೊಂಡ ಹಾಗೆ ದೇಶವನ್ನು ಸಂವಿಧಾನದ ಬೆಳಕಿನಲ್ಲಿ ನಡೆಸಿಕೊಂಡು ಹೋಗುವುದಕ್ಕೆ ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತೇವೆ.

ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನೂ ನಾವು ಈಗಲೂ ಕೆಲವೊಮ್ಮೆ ‘ಮತದಾನ’ ಎಂದು ಕರೆಯುತ್ತೇವೆ. ಇದು ಶುದ್ಧ ತಪ್ಪು. ‘ಮತ’ ಅಥವಾ ‘ಅಭಿಪ್ರಾಯ’ ಎನ್ನುವುದು ಈ ದೇಶದ ನಾಗರಿಕರ ಮೂಲಭೂತ ಹಕ್ಕು. ಯಾವುದೇ ಮಾನವ ಹಕ್ಕನ್ನು ದಾನ ಮಾಡುವುದಾಗಲೀ, ಮಾರುವುದಾಗಲೀ, ಇನೊಬ್ಬರಿಗೆ ಪರಭಾರೆ ಮಾಡುವುದಾಗಲೀ, ಒತ್ತೆ ಇಟ್ಟು ಸಾಲ ತೆಗೆದುಕೊಳ್ಳುವುದಾಗಲೀ ಮಾಡಲು ಸಾಧ್ಯವಿಲ್ಲ. ಅದೊಂದು ಅನನ್ಯವಾದ ಹಕ್ಕು. ಚುನಾವಣೆಯ ಸಮಯದಲ್ಲಿ ನಮ್ಮ ಈ ಹಕ್ಕನ್ನು ದಾನ ಮಾಡುವುದಿಲ್ಲ, ಚಿಲ್ಲರೆ ಕಾಸಿಗೆ ಮಾರಿಕೊಳ್ಳೋದಿಲ್ಲ. ನಮ್ಮೆಲ್ಲಾ ಆತ್ಮಗೌರವದೊಂದಿಗೆ ‘ಚಲಾಯಿಸುತ್ತೇವೆ’. ಇದು ನಮಗೆ ಸರಿಯಾಗಿ ಅರ್ಥವಾದಾಗಲೇ ಜನ ನಾಯಕರು, ಜನ ಪ್ರತಿನಿಧಿಗಳಷ್ಟೆ ಆಗುವ ಸೌಜನ್ಯವನ್ನು ಕಲಿತಾರು.
ಮತ ಚಲಾಯಿಸುವ ಮೂಲಕ ಶಾಸಕರನ್ನು ಆಯ್ಕೆ ಮಾಡಿದ ನಂತರ ಅವರ ಕೆಲಸ ಸುಲಭವಾಗಲೆಂದು ಅವರಿಗೆ ಸಾರಿಗೆ, ಸಂಬಳ, ಬಂಗಲೆ, ಆಳುಕಾಳು ಎಲ್ಲವನ್ನೂ ಉಚಿತವಾಗಿ ಒದಗಿಸುತ್ತೇವೆ. ಬೇರೆ ಯಾವುದಕ್ಕೂ ದುರಾಸೆ ಪಡದೇ ದೇಶವನ್ನು ನಡೆಸಿಕೊಂಡು ಹೋಗಿ ಎಂದು. ಆದರೆ, ಈ ಜನಪ್ರತಿನಿಧಿಗಳು ಅಧಿಕಾರ ಗ್ರಹಣ ಮಾಡಿದ ಕೂಡಲೇ ದೊರೆಗಳ ಹಾಗೆ, ನವಾಬರ ಹಾಗೆ ವರ್ತಿಸತೊಡಗುತ್ತಾರೆ.
ಧರ್ಮನಿರಪೇಕ್ಷ
ಭಾರತವನ್ನು ಎಂಥ ದೇಶವನ್ನಾಗಿ ಮಾಡಹೊರಟಿದ್ದೇವೆ ಎಂದು ಹೇಳುವ ಪ್ರಸ್ತಾವನೆಯ ಭಾಗದಲ್ಲಿ ‘Seಛಿuಟಚಿಡಿ’ ಎಂಬ ಪದ ಬರುತ್ತದೆ. ಕರ್ನಾಟಕ ಸರಕಾರದ ರಾಜಭಾಷಾ ಆಯೋಗದಿಂದ ಅನುವಾದಿಸಲ್ಪಟ್ಟು ಪ್ರಕಟಿಸಲಾಗಿರುವ ಅನುವಾದದಲ್ಲಿ ಸೆಕ್ಯುಲರ್ ಪದವನ್ನು ‘ಸರ್ವಧರ್ಮ ಸಮಭಾವದ’ ಎಂದು ಅನುವಾದಿಸಲಾಗಿದೆ. ಇದು ಯಾವ ರೀತಿಯಲ್ಲಿಯೂ ಸರಿಯಲ್ಲ.
ಕೇಂಬ್ರಿಡ್ಜ್ ಇಂಗ್ಲಿಷ್ ನಿಘಂಟುವಿನಲ್ಲಿ ಎನ್ನುವ ಪದಕ್ಕೆ ಇರುವ ಅರ್ಥ: not connected with religious or spiritual matters; – not having any connection with religion ಎಂದಿದೆ. ಹಾಗೆಯೇ ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್-ಕನ್ನಡ ನಿಘಂಟುವಿನಲ್ಲಿ seಛಿuಟಚಿಡಿ ಪದದ ಅರ್ಥ: ‘ಲೌಕಿಕ, ಜಾತ್ಯತೀತ, ಮತಧರ್ಮಾತೀತ, ರಾಷ್ಟ್ರನೀತಿ, ಆಡಳಿತ ವ್ಯವಸ್ಥೆಯಲ್ಲಿ ಧರ್ಮದ ಪ್ರವೇಶ ಕೂಡದು ಎನ್ನುವ, ಧಾರ್ಮಿಕ ಕ್ಷೇತ್ರಕ್ಕೆ, ಚರ್ಚು, ಮಠ, ಮಸೀದಿ ಇತ್ಯಾದಿಗಳಿಗೆ ಸಂಬಂಧಿಸದೇ ಇರುವ’ ಎಂದಿದೆ.
ಇದನ್ನು ಅನುಸರಿಸಿಯೇ ನಾವು ವಿತರಿಸುತ್ತಿರುವ ಪ್ರಸ್ತಾವನೆಯಲ್ಲಿ ನಾನು ಇದನ್ನು ‘ಮತಧರ್ಮ ನಿರಪೇಕ್ಷ’ ಎಂದೇ ಅನುವಾದಿಸಿಕೊಂಡಿದ್ದೇನೆ. ಸಂವಿಧಾನದ ಹಿಂದಿ ಮತ್ತು ಇತರ ಕೆಲವು ಭಾಷೆಗಳಲ್ಲಿನ ಪ್ರಸ್ತಾವನೆಗಳನ್ನು ತೆರೆದು ನೋಡಿದರೆ, ಪಂಥ್ ನಿರಪೇಕ್ಷ್, ಧರ್ಮ್‍ನಿರಪೇಕ್ಷ್ ಎನ್ನುವ ಪದಗಳೇ ಸಿಗುತ್ತವೆಯೇ ವಿನಾ “ಸರ್ವಧರ್ಮ ಸಮಭಾವದ” ಎಂಬ ಪದ ಕನ್ನಡದಲ್ಲಿ ಬಿಟ್ಟರೆ ಬೇರೆಲ್ಲೂ ಸಿಗುವುದಿಲ್ಲ.
ಸಂವಿಧಾನದ ಅನುಚ್ಛೇದ 25 ಭಾರತದ ಪ್ರತಿಯೊಬ್ಬ ನಾಗರಿಕರಿಗೂ, ತಮ್ಮ ಆಯ್ಕೆಯ ಧರ್ಮವನ್ನು ನಂಬುವ, ಅನುಸರಿಸುವ ಮತ್ತು ಪ್ರಚಾರ ಮಾಡುವ ಮೂಲಭೂತ ಹಕ್ಕನ್ನು ನೀಡುತ್ತದೆ. ಧರ್ಮದಲ್ಲಿ ವಿಶ್ವಾಸವಿಲ್ಲದವರು ತಮ್ಮ ‘ಅಂತಃಸಾಕ್ಷಿ’ಯನ್ನು ಅನುಸರಿಸಬಹುದು ಎಂದು ಹೇಳುತ್ತದೆ. ಆದರೆ, ರಾಷ್ಟ್ರ ಮಾತ್ರ ಯವುದೇ ಧರ್ಮಕ್ಕೆ ಅಂಟಿಕೊಳ್ಳದೇ ನಿರಪೇಕ್ಷವಾಗಿಬೇಕು ಎಂದು ಸಂವಿಧಾನದ ವಿಧಿಸುತ್ತದೆ.
ನಮ್ಮ ಪ್ರತಿನಿಧಿಗಳು, ಶಾಸಕರು, ಸಾಂವಿಧಾನಿಕ ಸಂಸ್ಥೆಗಳಲ್ಲಿ ದೊಡ್ಡ ದೊಡ್ಡ ಹುದ್ದೆಯಲ್ಲಿರುವವರು ಈ ಆಶಯವನ್ನು ಗಾಳಿತೂರಿ ಪ್ರಧಾನದ ಧರ್ಮವೊಂದರ ಪೂಜೆ, ಪುನಸ್ಕಾರ, ಹೋಮಹವನ ಎಲ್ಲವನ್ನೂ ಸರಕಾರದ ಚೌಕಟ್ಟಿನ್ನಲ್ಲಿಯೇ ಮಾಡುತ್ತಾರೆ. ತಮ್ಮ ಹುದ್ದೆಯ/ಸ್ಥಾನದ ನೆಲೆಯಲ್ಲಿಯೇ ದೇವಸ್ಥಾನ, ದರ್ಗಾ, ಮಠ, ಚರ್ಚುಗಳಿಗೆ ಹೋಗುತ್ತಾರೆ. ಎಂದರೆ ನಮಗೆ ‘ಸೆಕ್ಯುಲರ್’ ಎಂಬ ಪದದ ಅರ್ಥವೇ ಆಗಿಲ್ಲವೆಂದೋ, ಅಥವಾ ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗಿಲ್ಲವೆಂದೂ, ಅಥವಾ ಅರ್ಥವಾಗಿದ್ದರೂ ಸಂವಿಧಾನದ ಆಶಯವನ್ನು ಧಿಕ್ಕರಿಸುತ್ತಾರೆಂದೋ ಗೊತ್ತಾಗದ ಹಾಗೆ ಆಗಿದೆ.
ನಾವು ಅಡುವ ಭಾಷೆ ನಮ್ಮ ಮನೋವೃತ್ತಿಯನ್ನು ಬಿಂಬಿಸುತ್ತದೆ, ನಾವು ಆಡುವ ಭಾಷೆ ನಮ್ಮ ಮನೋವೃತ್ತಿಯನ್ನು ಪ್ರಭಾವಿಸುತ್ತದೆ.

ಪ್ರೊ ಎಂ ಅಬ್ದುಲ್ ರೆಹಮಾನ್ ಪಾಷ
ಹಿರಿಯ ಭಾಷಾ ವಿಜ್ಞಾನಿ