ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಗೊಲ್ಲಹಳ್ಳಿ ಬಳಿ ಯುಗಾದಿ ಹಬ್ಬದ ದಿನದಂದು ರೌಡಿ ಶೀಟರ್ ಒಬ್ಬನ ಭೀಕರ ಹತ್ಯೆಯಾಗಿದೆ.
ಹತ್ಯೆಯಾದ ರೌಡಿಶೀಟರ್‌ನನ್ನು ಮಂಜ ಅಲಿಯಾಸ್ ನೇಪಾಳಿ ಮಂಜ ಎಂದು ಗುರುತಿಸಲಾಗಿದೆ. ಹಬ್ಬದ ದಿನ ಮದ್ಯಪಾನ ಪಾರ್ಟಿಗೆ ಹೋಗಿದ್ದ ವೇಳೆ, ಎರಡು ಬೈಕ್‌ಗಳಲ್ಲಿ ಬಂದ ಹಂತಕರ ಪಡೆ ಕ್ಷಣಮಾತ್ರದಲ್ಲಿ ಆತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಲಾಂಗು ಮಚ್ಚುಗಳಿಂದ ತಲೆ, ಹೊಟ್ಟೆ, ಎದೆ ಕೈಗಳು ಹೀಗೆ ಸಿಕ್ಕ ಸಿಕ್ಕ ಕಡೆ ಹಲ್ಲೆ ನಡೆಸಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಹಳೇ ದ್ವೇಷದ ಹಿನ್ನೆಲೆ ಹೆಬ್ಬಗೋಡಿ ರೌಡಿಶೀಟರ್ ಜಗ್ಗ ಅಲಿಯಾಸ್ ಜಗದೀಶ್ ಮತ್ತವನ ಗ್ಯಾಂಗ್ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ರೌಡಿಶೀಟರ್ ಮಂಜ ಅಲಿಯಾಸ್ ನೇಪಾಳಿ ಮಂಜ, ಹೆಬ್ಬಗೋಡಿ ಸೇರಿದಂತೆ ಹಲವೆಡೆ ಎರಡು ಕೊಲೆ, ಕೊಲೆ ಯತ್ನ ಸೇರಿದಂತೆ 12ಕ್ಕೂ ಹೆಚ್ಚು ಪ್ರಕರಣದಲ್ಲಿ ಭಾಗಿಯಾಗಿದ್ದ. ಈತನ ವಿರುದ್ಧ ಪೊಲೀಸರು ಗೂಂಡಾ ಪ್ರಕರಣ ದಾಖಲಿಸಿದ್ದರು. ವಿರೋಧಿಗಳು ಹಾಗೂ ಪೊಲೀಸರ ಕಿರುಕುಳ ತಾಳಲಾರದೆ ಕುಣಿಗಲ್‌ನಲ್ಲಿ ಮನೆ ಮಾಡಿಕೊಂಡಿದ್ದ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪುಟ್ಟ ರಾಷ್ಟ್ರಗಳಿಂದ ಇಸ್ರೇಲ್, ರಷ್ಯಾ, ಅಮೆರಿಕ ಕಲಿಯುವುದು ಬಹಳಷ್ಟಿದೆ!
ನಿನ್ನೆ ಯುಗಾದಿ ಹಬ್ಬದಂದು ಸ್ನೇಹಿತರು ಕರೆದರೂ ಎಂದು ಕುಣಿಗಲ್ನಿಂದ ಬೆಂಗಳೂರಿಗೆ ಮಂಜ ಬಂದಿದ್ದಾನೆ. ಇಬ್ಬರು ಸ್ನೇಹಿತರ ಜೊತೆ ಆನೇಕಲ್ ತಾಲೂಕಿನ ಗೊಲ್ಲಹಳ್ಳಿ ಬಳಿ ನಿರ್ಜನ ಪ್ರದೇಶದಲ್ಲಿ ರಾತ್ರಿ ಮದ್ಯಪಾನ ಪಾರ್ಟಿ ಮಾಡುತ್ತಿದ್ದ. ಈ ವೇಳೆ 2 ಬೈಕ್ನಲ್ಲಿ ಐವರ ಗ್ಯಾಂಗ್ ಲಾಂಗು, ಮಚ್ಚು, ಚಾಕುವಿನಿಂದ ದಾಳಿ ಮಾಡಿ ಮಂಜನನ್ನೂ ಕೊಂದಿದ್ದಾರೆ. ಹೆಬ್ಬಗೋಡಿ ಠಾಣೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.