- ಬಿಜೆಪಿ ರಾಜ್ಯಾಧ್ಯಕ್ಷರ ರೇಸ್‌ನಿಂದ ಹಿಂದೆ ಸರಿದ ಸಿ ಟಿ ರವಿ
- ನಾನು ಯಾವಾಗಲೂ ಪಕ್ಷದ ನಿಷ್ಠಾವಂತ ಕಾರ್ಯಕರ್ತ
ಸದ್ಯ ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ, ಜೊತೆಗೆ ನಾನು ಯಾವುದೇ ರೇಸ್‌ನಲ್ಲೂ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದರು.
ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷ ನನಗೆ ಎಕ್ಸ್ ಪೀರಿಯನ್ಸ್, ಎಕ್ಸ್ ಪೋಸ್ ಎರಡಕ್ಕೂ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ನಾನು ಸದ್ಯ ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ, ಯಾವುದೇ ರೇಸ್‌ನಲ್ಲೂ ಇಲ್ಲ ಎಂದರು.
ಈಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ ಎಂದ ಸಿಟಿ ರವಿ ಅದಕ್ಕೆ ನ್ಯಾಯ ಒದಗಿಸುವುದಾಗಿ ಹೇಳಿದರು.
ರಾಜ್ಯಾಧ್ಯಕ್ಷ ಹುದ್ದೆ ವಿಚಾರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಸಿ ಟಿ ರವಿ, ಕಾರ್ಯಕರ್ತ ಎನ್ನುವುದನ್ನ ಯಾವತ್ತೂ, ಯಾರೂ ಕಿತ್ತುಕೊಳ್ಳಲು ಆಗುವುದಿಲ್ಲ. ಪಕ್ಷದ ಕಾರ್ಯಕರ್ತ ಮೊದಲು ಆ ನಂತರ ಉಳಿದ ಹುದ್ದೆಗಳು ಎಂದರು.
ಈ ಸುದ್ದಿ ಓದಿದ್ದೀರಾ?:ಸದ್ಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ: ಮಾಜಿ ಸಚಿವ ಆರ್ ಅಶೋಕ
ರಾಜ್ಯಾಧ್ಯಕ್ಷ ನೇಮಕ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿ ಬಳಿಕ ಯೂಟರ್ನ್ ತೆಗೆದುಕೊಂಡ ವಿಚಾರ ದಾಖಲಾದ ವೇಳೆ ಬಿಜೆಪಿಗೆ ನೂತನ ಸಾರಥಿ ಆಯ್ಕೆ ವಿಚಾರ ಮುನ್ನೆಲೆಗೆ ಬಂದಿತ್ತು.
ಕಟೀಲ್ ಅವಧಿ ಮುಕ್ತಾಯಗೊಂಡಿದ್ದರೂ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಧ್ಯಕ್ಷೀಯ ಅವಧಿ ವಿಸ್ತರಿಸಲಾಗಿತ್ತು. ಆದರೆ ಈ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಕಂಡಿತ್ತು. ಹೀಗಾಗಿ ಲೋಕಸಭೆ ಚುನಾವಣೆಗೆ ಪಕ್ಷ ಹೊಸಬರ ನೇತೃತ್ವದಲ್ಲಿ ಮುನ್ನಡೆಯಬೇಕೆನ್ನುವ ಒತ್ತಾಯ ಪಕ್ಷದೊಳಗೆ ಕೇಳಿ ಬಂದಿತ್ತು.
ಈ ನಡುವೆ ರಾಜ್ಯಾಧ್ಯಕ್ಷ ಹುದ್ದೆಗೆ ಮಾಜಿ ಸಚಿವ ಸುನಿಲ್ ಕುಮಾರ್, ಅಶ್ವತ್ಥ್ ನಾರಾಯಣ, ಸಿ ಟಿ ರವಿ, ವಿ ಸೋಮಣ್ಣ, ಹಾಗೂ ಶೋಭಾ ಕರಂದ್ಲಾಜೆಯವರ ಹೆಸರುಗಳು ಕೇಳಿ ಬಂದಿತ್ತು. ಪಕ್ಷದ ಮೂಲಗಳ ಮಾಹಿತಿಗಳ ಪ್ರಕಾರ ಶೋಭಾ ಕರಂದ್ಲಾಜೆಯವರಿಗೆ ಮುಂದಿನ ಅವಕಾಶ ಸಿಗುವುದು ದಟ್ಟವಾಗಿದೆ ಎನ್ನಲಾಗುತ್ತಿದೆ.