ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವುದು ಕಷ್ಟ ಸಾಧ್ಯ ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯತ್ನಾಳ್ ಹೊಸ ಪಕ್ಷ ಕಟ್ಟುವ ವಿಚಾರಕ್ಕೆ ನಾನು ಏನು ಹೇಳಲ್ಲ. ಆದರೆ ಅವರು ನಮ್ಮ ಪಕ್ಷಕ್ಕೆ ಯಾವುದೇ ಅರ್ಜಿ ಹಾಕಿಲ್ಲ. ಹಾಕಿದರೂ ಕೂಡ ನಮ್ಮಲ್ಲಿ ಅವರನ್ನು ಸೇರಿಸಿಕೊಳ್ಳುವುದು ಕಷ್ಟ ಇದೆ. ಅವರು ಒಂದು ಸಮಾಜದ (ಮುಸ್ಲಿಂ) ವಿರುದ್ಧಅಸಹ್ಯ ಮತ್ತು ಕೀಳಾಗಿ ಮಾತಾಡಿದ್ದಾರೆ, ಹಾಗಾಗಿ ಅವರಿಗೆ ತಮ್ಮ ಪಕ್ಷದಲ್ಲಿ ಸ್ಥಾನ ಸಿಗಲಾರದು. ಈ ಕಾರಣ ನಮ್ಮಲ್ಲಿ ಅವರನ್ನ ಸೇರಿಸಿಕೊಳ್ಳುವುದು ಕಷ್ಟ ಅಂತ ಸಚಿವರು ಹೇಳಿದ್ದಾರೆ.
ಇದೇ ವೇಳೆ ಸಚಿವ ರಾಜಣ್ಣ ಪುತ್ರನ ಹತ್ಯೆಗೆ ಸುಪಾರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಪ್ರಕರಣ ನೋಡಿಕೊಳ್ಳಲು ಗೃಹ ಸಚಿವರು, ಪೊಲೀಸರು ಇದ್ದಾರೆ. ಅವರು ಪ್ರಕರಣವನ್ನು ಬಯಲಿಗೆ ಎಳೆಯುತ್ತಾರೆ ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪುಟ್ಟ ರಾಷ್ಟ್ರಗಳಿಂದ ಇಸ್ರೇಲ್, ರಷ್ಯಾ, ಅಮೆರಿಕ ಕಲಿಯುವುದು ಬಹಳಷ್ಟಿದೆ!
ಹನಿಟ್ರ್ಯಾಪ್ ವಿಚಾರದಲ್ಲಿ ಸಚಿವ ರಾಜಣ್ಣ ದೂರು ಯಾಕೆ ಕೊಟ್ಟಿಲ್ಲ ಎನ್ನುವ ವಿಚಾರ ಕುರಿತು ಮಾತನಾಡಿ, ಪಕ್ಷದಲ್ಲಿ ಯಾವುದೇ ಒತ್ತಡ ಇಲ್ಲ. ದೂರು ಕೊಡೋದು ಅವರಿಗೆ ಬಿಟ್ಟ ವಿಚಾರ. ಯಾಕೆ ಏನು ಅನ್ನೋದನ್ನು ರಾಜಣ್ಣ ಅವರಿಗೆ ಕೇಳಬೇಕು ಅಂತ ಹೇಳಿದ್ದಾರೆ.
ಬಿ ಎಸ್ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಾ ಬಂದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಲಾಗಿದೆ. ಪಕ್ಷದ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ ಅವರನ್ನು ಕೇಂದ್ರೀಯ ಶಿಸ್ತು ಸಮಿತಿ ಪಕ್ಷದಿಂದ ಉಚ್ಚಾಟಿಸಿದೆ. ಈ ನಡುವೆ ಯತ್ನಾಳ್ ತಾವು ಹೊಸ ಪಕ್ಷ ಕಟ್ಟುವುದಾಗಿ ಹೇಳಿದ್ದಾರೆ.