- ನಾವು ದಾನ ಕೇಳುತ್ತಿಲ್ಲ, ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ
- ಕಾಂಗ್ರೆಸ್‌ಗೆ ಹೆಸರು ಬರುತ್ತದೆ ಎಂದು ಮೋದಿ ಅಕ್ಕಿ ಕೊಡುತ್ತಿಲ್ಲ
ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡದ ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, “ರಾಜ್ಯದ ಬಡವರು ಹಸಿವಿನಿಂದ ಸಾಯಲಿ ಎಂದು ಕೇಂದ್ರ ಅಕ್ಕಿ ಕೊಡುತ್ತಿಲ್ಲ” ಎಂದು ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದರು.
“ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡಜನರಿಗೆ ಅನುಕೂಲವಾಗಲಿ ಎಂದು ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದೆ. ಆದರೆ ಇದಕ್ಕೆ ಅಕ್ಕಿ ನೀಡಲು ಮೋದಿ ಸರ್ಕಾರ ಹಿಂದೇಟು ಹಾಕುತ್ತಿದೆ. ನಮಗೆ ಅಕ್ಕಿ ಕೊಡಲು ಸಿದ್ದವಾಗಿದ್ದ ಆಹಾರ ನಿಗಮದ ಮೇಲೆ ಒತ್ತಡ ತಂದು ಒಡಂಬಡಿಕೆ ರದ್ದಾಗುವಂತೆ ಮಾಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಬಡವರಿಗೆ 10 ಕೆಜಿ ಅಕ್ಕಿ ನೀಡುವುದು ಮೋದಿ ಸರ್ಕಾರಕ್ಕೆ ಇಷ್ಟವಿಲ್ಲ. ಜನ ಉಪವಾಸದಿಂದ ಸಾಯಲಿ ಎಂದು ಅಕ್ಕಿ ನೀಡುತ್ತಿಲ್ಲ. ಆದರೆ ನಾವು ಬಿಡುವವರಲ್ಲ. ನ್ಯಾಯಯುತವಾಗಿ ನಮ್ಮ ಗ್ಯಾರಂಟಿ ಯೋಜನೆಗೆ ಕೇಂದ್ರ ಸರ್ಕಾರ ಕೊಡಲೇಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ?:ರಾಜ್ಯ ಸರ್ಕಾರ ಜನರಿಗೆ ಅಕ್ಕಿ ಕೊಟ್ಟರೆ ಬಿಜೆಪಿಗೆ ಸೋಲಿನ ಭೀತಿ : ಶಾಸಕ ಪ್ರದೀಪ್ ಈಶ್ವರ್
“ನಾವು ಅವರಿಗೆ ಅಕ್ಕಿಯನ್ನು ದಾನ ಮಾಡಿ ಎನ್ನುತ್ತಿಲ್ಲ, ಬದಲಿಗೆ ದುಡ್ಡಿಗೆ ಕೇಳಿದ್ದೇವೆ. ಸ್ಟಾಕ್ ಇದೆ ಎಂದಿದ್ದಕ್ಕೆ ಅಕ್ಕಿ ಕೊಡಿ ಎಂದಿದ್ದೇವೆ. ಕಾಂಗ್ರೆಸ್ಸಿಗೆ ಲಾಭವಾಗಲಿದೆ ಎಂದು ರಾಜಕೀಯ ಮಾಡಲಾಗುತ್ತಿದೆ” ಎಂದರು.
“ಕೋವಿಡ್ ಸಂದರ್ಭದಲ್ಲಿ ಅಕ್ಕಿ ತೆಗೆದುಕೊಳ್ಳಿ ಎಂದಿದ್ದ ಪ್ರಧಾನಿ ಮೋದಿ ಈಗ್ಯಾಕೆ ಸಂಕಷ್ಟದಲ್ಲಿರೋ ಜನರಿಗೆ ಕೊಡುತ್ತಿಲ್ಲ. ಅವರು ಬಡವರಿಗೆ ಅಕ್ಕಿ ಕೊಡಲು ಹಿಂದೇಟು ಹಾಕಬಾರದು” ಎಂದು ಖರ್ಗೆ ಹೇಳಿದರು.