ದರ್ಪದ ನೆರಳಲ್ಲಿ ಕೊಡಗಿನ ‘ ಲೈನ್ ಮನೆ ‘ ಜೀತ. ಇಂತಹ ಕಾಲಘಟ್ಟದಲ್ಲಿ, ಆಧುನಿಕ ಜೀವನಕ್ಕೆ ತೆರೆದುಕೊಂಡಿರುವ ಹೊತ್ತಿನಲ್ಲಿ, ಕಾನೂನು ಬಿಗಿ ಹೊಂದಿರುವ ಸಮಯದಲ್ಲೂ ಜೀತದ ಮಾರು ವೇಷ ತೊಟ್ಟು ಲೈನ್ ಮನೆ ಹೆಸರಿನಲ್ಲಿ ದುಡಿಯುವ ಪರಿ ತೀರಾ ನಿಕೃಷ್ಟ.ನಾಗರೀಕ ಸಮಾಜ ತಲೆ ತಗ್ಗಿಸುವಂತದ್ದು.
ರಾಜ್ಯದ ಬಹು ಜಿಲ್ಲೆಗಳಲ್ಲಿ ಇಂತಹ ಧಾರಣು ಸ್ಥಿತಿ ಇರಲಾರದು.ಅಲ್ಲಲ್ಲಿ ಕಂಡು ಬರುವ, ಕೇಳಿ ಬರುವ ಜೀತಕ್ಕೆ ಸಿಲುಕಿದವರ ರಕ್ಷಿಸಿ ಪುನರ್ವಸತಿ, ಪರಿಹಾರ ಕಲ್ಪಿಸುವ ವ್ಯವಸ್ಥೆ ಆಗ್ತಾ ಇದೆ. ಮುಂಚಿನಂತೆ ದೊಡ್ಡ ಮಟ್ಟದಲ್ಲಿ ಇಲ್ಲ. ಆದರೆ ಕೊಡಗಿನಲ್ಲಿ ‘ ಲೈನ್ ಮನೆ’ ( ಸಾಲು ಮನೆ ) ಹೆಸರಿನಲ್ಲಿ ದುಡಿಯುವ ಸರತಿ ಬಹು ಸಂಖ್ಯೆಯಲ್ಲಿದೆ.
ಜೀತ ಕಾರ್ಮಿಕ ಪದ್ಧತಿ (ನಿರ್ಮೂಲನ) ಅಧಿನಿಯಮ 1976 ಆಕ್ಟ್ ಪ್ರಕಾರ ಯಾವುದೇ ವ್ಯಕ್ತಿ, ಕುಟುಂಬ ಯಾವುದೇ ಸಾಲದ ಹೆಸರಲ್ಲಿ, ಅಲ್ಪ ಹಣಕ್ಕೆ ಸುದೀರ್ಘ ಸಮಯ ಸೇವೆ, ಕೂಲಿ, ದುಡಿಸಿಕೊಳ್ಳುವುದು ಕಾನೂನು ಬಾಹಿರ.ಹೀಗಿರುವಾಗ ಇಂತಹ ಕಾನೂನು ಕೊಡಗಿನ ಮಟ್ಟಿಗೆ ನಗಣ್ಯ. ರಾಜ್ಯದಲ್ಲಿ ಒಂದೋ ಎರೆಡೋ ಅಲ್ಲಲ್ಲಿ ಕೇಳಿ ಬಂದರೆ, ಕೊಡಗಿನಲ್ಲಿ ಹೆಸರೇ ಹೇಳುವಂತೆ ಸಾಲು ಸಾಲು ಜೀತ. ಕಾಫಿ ತೋಟದಲ್ಲಿ ‘ಲೈನ್ ಮನೆ ‘ (ಸಾಲು ಮನೆ) ಹೆಸರಿನಲ್ಲಿ ಸಾಮೂಹಿಕವಾಗಿ ಜೀತ ಮಾಡುತ್ತಿವೆ.

” ಒಂದೇ ಒಂದು ಭದ್ರತೆ ಈ ಕುಟುಂಬಗಳಿಗೆ ಇಲ್ಲ. ನಿವೇಶನ, ಮನೆ, ಭೂಮಿ ಸೇರಿದಂತೆ ಇನ್ನಿತರೇ ಯಾವುದೇ ಸವಲತ್ತನ್ನು ಕಾರ್ಮಿಕರಿಗೆ ಒದಗಿಸಿಲ್ಲ. ಕೇವಲ ಗಾಣದ ಎತ್ತುಗಳು. ಇರುವಷ್ಟು ದಿನ ಗೆಯ್ಯಬೇಕು. ಜೀತ ನಿರ್ಮೂಲನೆ ಆಗುವಂತಹ ಯಾವುದೇ ದಿಟ್ಟ ಕೆಲಸ ಕೊಡಗಿನಲ್ಲಿ ಆಗಿಲ್ಲ. ಅಂತಹ ಜನಪ್ರತಿನಿಧಿಗಳು ಇಲ್ಲ, ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಇಲ್ಲವೇ ಇಲ್ಲ, ಇರೋರೆಲ್ಲ ಉಳ್ಳವರ ಪರವಾಗಿ ಮೇಲ್ಪಂಕ್ತಿ ” ಹಾಕುವವರೆ.
ಪುಂಖಾನು ಪುಂಖವಾಗಿ ಹೇಳಿಕೊಳ್ಳುವ, ನಾವೆಲ್ಲಾ ಸಮಾಜಕ್ಕೆ ಮಾದರಿ ಅನ್ನುವ ಜನ ಪ್ರತಿನಿಧಿಗಳಿಗೆ ಕಣ್ಣಿದ್ದರು ಜಾಣ ಕುರುಡರಾಗಿ ವರ್ತನೆ ತೋರುತ್ತಾರೆ. ಅವರಿಗೂ ಗೊತ್ತು ಮತಕ್ಕಾಗಿ ಮಾತ್ರ ಬೇಕು. ಇರೋದು ಭೂ ಮಾಲೀಕರ ಕಪಿ ಮುಷ್ಟಿಯಲ್ಲಿ ಆತನ ಓಲೈಕೆಯಲ್ಲಿ ಇದ್ದರೆ ಸಾಕು. ಆತ ಬೆದರಿಸಿಟ್ಟು ಮತ ಹಾಕಿಸೇ ಹಾಕಿಸುತ್ತಾನೆ ಅನ್ನುವ ಮೊಂಡತನ.
” ಬೇರೆ ಜಿಲ್ಲೆಗಳಲಿ ಅನ್ಯಾಯಕ್ಕೆ ಒಳಗಾದವರು, ಜೀತಕ್ಕೆ ದೂಡಲ್ಪಟ್ಟವರು ಸಂಘ, ಸಂಸ್ಥೆಗಳ ನೆರವಿನಲ್ಲಿ ಧೈರ್ಯವಾಗಿ ಹೇಳಿಕೊಳ್ತಾರೆ. ಆದರೆ, ಕೊಡಗಿನಲ್ಲಿ ಇದು ಸಾಧ್ಯವೇ ಇಲ್ಲ.ಇಲ್ಲಿರುವುದು ಲಕ್ಷಾಂತರ ಜನ. ಇಡೀ ತೋಟಗಳಲ್ಲಿ ಇರುವ ಕುಟುಂಬಗಳೆಲ್ಲವೂ ಲೈನ್ ಮನೆ ದಾಸ್ಯದಲ್ಲಿವೆ. ಇನ್ನ, ಯಾರೇ ಆಗಲಿ ತೋಟದ ಒಳಗಡೆ ಹೋಗಲು ಸಾಧ್ಯವಿಲ್ಲ. ಹಾಗೇ, ತೋಟದಲ್ಲಿ ಇರುವವರು ತಮ್ಮ ಕಷ್ಟ, ಜೀತದ ಬಗ್ಗೆ ಹೇಳಿಕೊಳ್ಳಲು ಸಾಧ್ಯವಾಗಲ್ಲ. ಯಾಕಂದ್ರೆ ಇಲ್ಲಿನ ಅಧಿಕಾರಿಗಳನ್ನ ನಂಬಲು ಸಾಧ್ಯವೇ ಇರದ ಪರಿಸ್ಥಿತಿ. ಇನ್ನ ಹೊರಗಡೆ ಬಂದರೆ ಕೆಲಸ ಸಿಗಲ್ಲ. ಇರಲು ಜಾಗ ಇಲ್ಲ.ಎಲ್ಲೋದರು ಹೆದರಿಸಿ, ಬೆದರಿಸಿ ಅಟ್ಟುತ್ತಾರೆ. ಇನ್ನ ತೋಟದ ಮಾಲೀಕನ ಬಗ್ಗೆ ಮಾತಾಡಿದ್ದು ಜೀತದ ಬಗ್ಗೆ ಹೇಳಿದ್ದೆ ಆದರೆ ಅವರ ಜೀವನವೇ ಕೊನೆ ಆದಂತೆ “.

ಇಲ್ಲಿನ ‘ ಆದಿವಾಸಿಗಳ, ಶೋಷಿತರ, ದಲಿತರ ಪರಿಸ್ಥಿತಿ ಸ್ವಂತವಾಗಿ ಏನನ್ನು ಮಾಡಲಾಗದ ಪರಿಸ್ಥಿತಿ. ಧೈರ್ಯವಾಗಿ ಇರಲು ಒಂದು ಮನೆಯು ಇಲ್ಲದಿರುವಾಗ ಬಾಹ್ಯವಾಗಿ ನಾವು ಜೀತದಲ್ಲಿ ಇದ್ದೇವೆ,ದುಡಿಯುತ್ತಿದ್ದೇವೆ ಅಂತೇಳಲು ಶಕ್ತಿಯೇ ಇರಲ್ಲ. ಇದ್ದರು ಭೂ ಮಾಲೀಕರಿಗೆ ಜೀತದಾಳುಗಳನ್ನು ಹೆಣೆಯುವ ತಂತ್ರಗಾರಿಕೆ, ತಮ್ಮಲ್ಲಿಯೇ ಇರುವಂತೆ ಮಾಡುವ ಸಾಮರ್ಥ್ಯ ಕರಗತವಾಗಿದೆ ‘.
” ಕೊಡಗಿನ ಭೂ ಮಾಲೀಕರ ಪರ ಬ್ಯಾಟ್ ಬೀಸುವ, ಸಾಮಾಜಿಕವಾಗಿ ಎಲ್ಲವೂ ಸರಿಯಿದೆ, ಒಳ್ಳೆಯ ಕೂಲಿ ಕೊಡುತ್ತಿದ್ದಾರೆ. ಎಲ್ಲಾ ವ್ಯವಸ್ಥೆ ಕಲ್ಪಿಸಿರುವುದಾಗಿ ಹೇಳಿಕೊಳ್ಳುವ. ಮುಂಚೆ ಹಾಗಿದ್ದೀರಬಹುದು! ಈಗ ಹಾಗೇನಿಲ್ಲ, ಯಾವ ಸಮಸ್ಯೆ ಇಲ್ಲ ಎಲ್ಲವು ಬದಲಾಗಿದೆ.ಎಲ್ಲರೂ ಸುಖವಾಗಿದ್ದಾರೆ ಎಂದು ಬುರುಡೆ ಮಾತುಗಳನ್ನ ಆಡುತ್ತಾರೆ. ಆದರೆ, ಕೊಡಗಿನ ಕಾಫಿ ತೋಟಗಳಿಗೆ ತೆರಳಿದರೆ ಸಾಕು ನೈಜ ಬಂಡವಾಳ ಹೊರ ಜಗತ್ತಿಗೆ ತಿಳಿಯುತ್ತೆ. ಲಕ್ಷಾಂತರ ಕುಟುಂಬಗಳು ಇವತ್ತು ಎಂತಹ ಶೋಚನಿಯ ಪರಿಸ್ಥಿತಿಯಲ್ಲಿ ಇದ್ದಾವೆ, ಯಾವ ರೀತಿ ಲೈನ್ ಮನೆ ಜೀತ ಮಾಡುತ್ತಿವೆ ಅನ್ನೋದನ್ನ ಕಣ್ಣಾರೆ ಕಾಣಬಹುದು “.
ಅದರಲ್ಲೂ, ಲೈನ್ ಮನೆ ಜೀತ ಮಾಡುವ ಕುಟುಂಬಗಳ ಸಮೀಕ್ಷೆ (ಸರ್ವೇ ) ಇಲಾಖೆ, ಅಧಿಕಾರಿಗಳು ಮಾಡಿದರೆ ನೈಜ ಬಣ್ಣ ಬಯಲಾಗುತ್ತೆ. ಯಾವುದೇ ಆಸ್ತಿ ಹೊಂದಿರಲ್ಲ. ಸತ್ತರೆ ಹೂಣಲು ಜಾಗ ಇರದವರಿಗೆ ಇನ್ನ ಮನೆ ಮಠ ಇರಲು ಸಾಧ್ಯವೇ? ಕೊಡಗಿನಲ್ಲಿ ಎಲ್ಲಾದರೂ ಒಂದು ಕಡೆ ಲೈನ್ ಮನೆ (ಸಾಲು ಮನೆ ) ಜೀತದಾಳುಗಳಿಗೆ ಭೂಮಿ, ಮನೆ, ಸ್ಮಶಾನ ಇರುವುದಾದರೂ ತೋರಲಿ ಅಂದರೆ ಅದನ್ನ ಕಂಡರಿಯುವುದು ಸಾಹಸವೇ ಸರಿ.

ಭೂ ಮಾಲೀಕರ ಅಟ್ಟಹಾಸಕ್ಕೆ ನಲುಗಿ ಲೈನ್ ಮನೆ ಜೀತ ಸಹಿಸಲಾರದೇ ಹೊರ ಬಂದಿರುವ ಕುಟುಂಬವೊಂದರ ನೈಜತೆಯನ್ನ ಈದಿನ.ಕಾಮ್ ಓದುಗರ ಮುಂದಿಡುತ್ತಿದೆ.
“ಪೊನ್ನಂಪೇಟೆ ತಾಲ್ಲೂಕು ಹುದೂರು ಗ್ರಾಮದ ತೀತಮಡ ಕಾಶಿ ಎಂಬುವರ ಕಾಫಿ ತೋಟದಲ್ಲಿ ಚಂದ್ರ, ರಾಣಿ ಮಕ್ಕಳಾದ ಶಬರಿ, ಸಂತೋಷ ಹಾಗೂ ಶ್ರಾವಣಿ ‘ಲೈನ್ ಮನೆ ‘ ಜೀತ ಮಾಡುತ್ತಿದ್ದ ಕುಟುಂಬ. ಚಂದ್ರ ಹಾಗೂ ರಾಣಿ ಇಬ್ಬರು ದಿನದ ಕೂಲಿ ₹400 ರೂಪಾಯಿ ಅನ್ನುವಂತೆ ದುಡಿಯುತಿದ್ದರು. ಆದರೆ, ಭೂ ಮಾಲೀಕ ವಾರಕ್ಕೆ ಕೇವಲ ₹500 ಕೊಡುತ್ತ, ಕೇಳಿದರೆ ಬೆದರಿಸುತ್ತಾ, ಯರವ ಜನಾಂಗಿಯ ನಿಂದನೆ ಮಾಡಿ, ಕೊಲ್ಲುವ ಬೆದರಿಕೆಯೊಡ್ಡಿ ಸತತವಾಗಿ 2 ರಿಂದ 3 ವರ್ಷಗಳ ಕಾಲ ಜೀತ ಮಾಡಿಸಿಕೊಂಡಿದ್ದಾರೆ “.
ಚಂದ್ರ ಅವರು ” ಇಷ್ಟು ವರ್ಷಗಳಿಂದ ಕೆಲಸ ಮಾಡ್ತಾ ಇದ್ದೀವಿ, ವಾರಕ್ಕೆ ಬರೀ ₹500 ಕೊಡ್ತೀರಿ, ಕೇಳಿದ್ರೆ ಬಾಯಿಗೆ ಬಂದಂತೆ ಮಾತಾಡ್ತೀರಿ. ನಾವು ಇಷ್ಟು ದಿನ ಜೀತ ಮಾಡಿದ್ದೀವಿ ನಮ್ಮ ದುಡ್ಡು ಕೊಡಿ ಎಂದು ಕೇಳಿದಾಗ ಅದಕ್ಕೆ, ತೀತಮಡ ಕಾಶಿ ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ಸಾಲ ಕೊಡಬೇಕು ಅದನ್ನೆಲ್ಲ ತೀರಿಸಿ ಮನೆ ಸಾಮಾನು ತೆಗೆದುಕೊಂಡು ಹೋಗು, ಇಲ್ಲಾಂದರೆ ಗುಂಡು ಹಾರಿಸಿ ಕೊಲ್ಲುವುದಾಗಿ ಹೆದರಿಸಿ, ಅವಾಚ್ಯವಾಗಿ ನಿಂದಿಸಿ ಲೈನ್ ಮನೆಗೆ ಬೀಗ ಜಡಿದು ಕಾಫಿ ತೋಟದಿಂದ ಹೊರ ಹಾಕಿದ್ದಾರೆ “.

ನೊಂದ ಕುಟುಂಬ ತಾತ್ಕಾಲಿಕವಾಗಿ ತನ್ನ ಅಣ್ಣನ ಮನೆಗೆ ಬಂದು ಮತ್ತದೇ ಕೂಲಿ ಮಾಡಿಕೊಂಡು ಜೀವನ ಮಾಡುತ್ತಾ, ತನಗಾದ ಅನ್ಯಾಯವನ್ನು ದಿನಾಂಕ-05-03-2025 ರಂದು ಕೊಡಗಿನ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ, ಕೊಡಗು ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿ. ಜೀತ ಮಾಡಿಸಿಕೊಂಡು ಕೂಲಿ ಹಣ ನೀಡದೆ, ಸಾಲ ನೀಡಬೇಕೆಂದು ಪ್ರಾಣ ಬೆದರಿಕೆ, ಅವಹೇಳನವಾಗಿ ನಿಂದಿಸಿದರ ಮಾಹಿತಿಯನ್ನು ವಿವರವಾಗಿ ಪೊನ್ನಂಪೇಟೆ ತಹಶೀಲ್ದಾರ್ ಕಚೇರಿಯಲ್ಲಿ ಹೇಳಿಕೆ (ಸ್ಟೇಟ್ಮೆಂಟ್ ) ದಾಖಲಿಸಿ, ವಿಡಿಯೋ ಚಿತ್ರೀಕರಣ ಸಹ ಮಾಡಿರುತ್ತಾರೆ.
ಇದಾದ ಬಳಿಕ, ಉಪ ವಿಭಾಗಾಧಿಕಾರಿಗಳ ಕಚೇರಿಯಿಂದ ಪೊನ್ನಂಪೇಟೆ ತಹಶೀಲ್ದಾರ್ ಅವರ ಕಚೇರಿಗೆ ಖುದ್ದು ಪರಿಶೀಲನೆ, ವರದಿಗೆ ಕೋರಿದ್ದಾರೆ.ತೀತಮಡ ಕಾಶಿ ಅವರ ಕಾಫಿ ತೋಟದ ಲೈನ್ ಮನೆಗೆ ತಹಶೀಲ್ದಾರ್ ಆಗಲಿ, ಮೇಲ್ಪಟ್ಟ ಅಧಿಕಾರಿಗಳಾಗಲಿ ಹೋಗದೆ ಜೀತ ಪದ್ಧತಿ ನಿರ್ಮೂಲನ ಸಮಿತಿ ತಂಡ ಹಾಗೂ ತಾಲ್ಲೂಕು ಕಚೇರಿ ಸಿಬ್ಬಂದಿ ಜಂಟಿಯಾಗಿ ಸ್ಥಳಕ್ಕೆ ಹೋಗಿ
ಕಾನೂನು ರೀತ್ಯಾ ಕ್ರಮ ವಹಿಸದೆ ಮನಸೋ ಇಚ್ಛೆ, ವರದಿ ಕೇಳಿದ್ದಾರೆ,ವರದಿ ಸಿದ್ದ ಪಡಿಸಿ ಕಳಿಸಬೇಕು ಅನ್ನುವಂತೆ ಸಿದ್ದಪಡಿಸಿದ್ದಾರೆ.

ವರದಿಯ ನಿಜವಾದ ಅಸಲಿಯತ್ತು ಹೀಗಿದೆ….
- ದೂರು ದಾರನಿಗೆ ಯಾವುದೇ ಮಾಹಿತಿ ನೀಡದೆ. ಸ್ಪಷ್ಟವಾಗಿ ದೂರಿನಲ್ಲಿ ಲೈನ್ ಮನೆಯಿಂದ ಆಚೆ ಹಾಕಿರುವುದನ್ನು ನಮೂದಿಸಿದ್ದರು ಸಹ ಗಮನ ಹರಿಸದೆ. ದೂರುದಾರ ಕುಟುಂಬ ಆರು ತಿಂಗಳಿಂದ ಲೈನ್ ಮನೆಯಲ್ಲಿ ವಾಸವಿಲ್ಲವೆಂದು ದೃಡೀಕರಿಸಿರುವುದು.
- ಲೈನ್ ಮನೆ ಜೀತ ಕುಟುಂಬದ ದಿನಬಳಕೆ ವಸ್ತುಗಳು,ಬಟ್ಟೆ,ಪಾತ್ರೆಗಳನ್ನು ಗೋಣಿ ಚೀಲದಲ್ಲಿ ತುಂಬಿಸಿ ಹೊರಗೆ ಇಟ್ಟಿರುವುದಾಗಿಯೂ.
- ಭೂ ಮಾಲೀಕ ದಿನಾಂಕ-14-03-2025 ಮಾನಸಿಕ ಹಾಗೂ ಗ್ರಹಣ ಶಕ್ತಿ ಅನಾರೋಗ್ಯ ನಿಮಿತ್ತ ಮೈಸೂರಿನ ಸಂಜೀವಿನಿ ವನ ಕೇಂದ್ರ ಚಿಕಿತ್ಸೆಗೆ ದಾಖಲು ಆಗಿರುವುದಾಗಿ ಮಗನಾದ ಟಿ ಕೆ ಭೋಪಣ್ಣ ಹೇಳಿಕೆ ಅನುಸಾರ ವರದಿಯನ್ನು ಮಾಡಿದ್ದಾರೆ.

ದೂರುದಾರ ಚಂದ್ರ ದೂರಿನಲ್ಲಿ ಸ್ಪಷ್ಟವಾಗಿ ತೀತಮಾಡ ಕಾಶಿ ಬೆದರಿಸಿ, ಕೊಲ್ಲುವುದಾಗಿ ಹೇಳಿ ಲೈನ್ ಮನೆಯಿಂದ ಆಚೆ ಹಾಕಿರುವುದನ್ನು ಸ್ಪಷ್ಟ ಪಡಿಸಿದ್ದಾರೆ. ಅದೇ ತೀತಮಡ ಕಾಶಿ ಜೀತ ಇದ್ದ ಕುಟುಂಬದ ದಿನ ಬಳಕೆ ವಸ್ತು, ಬಟ್ಟೆ, ಪಾತ್ರೆ ಎಲ್ಲಾ ಒತ್ತೆ ಇರಿಸಿಕೊಂಡಿರುವುದನ್ನು ಅಧಿಕಾರಿಗಳೇ ಉಲ್ಲೇಖಸಿದ್ದಾರೆ. ಭೂ ಮಾಲೀಕ ಬೆದರಿಸದೆ ಇದ್ದಿದ್ದರೆ ಮನೆ ಸಾಮಗ್ರಿ ಇಲ್ಲಿರಲು ಸಾಧ್ಯವೇ ಇರುತ್ತಿರಲಿಲ್ಲ. ಭೂ ಮಾಲೀಕ ಕೊಲ್ಲುವ ಬೆದರಿಕೆಯೊಡ್ಡಿ ಜೀತ ಮಾಡಿಸಿಕೊಂಡು ಆಚೆ ಹಾಕಿದ್ದಾನೆ ಇದರಲ್ಲಿಯೇ ಸ್ಪಷ್ಟತೆ ಇದೆ. ಇನ್ನ ದೂರುದಾರನ ಹೇಳಿಕೆ ಕೇಳದೆ ಭೂ ಮಾಲೀಕನ ಮಗನ ಮಾತನ್ನ ಉಲ್ಲೇಖಸಿ ಚಿಕಿತ್ಸೆಗೆ ತೆರಳಿದ್ದಾರೆ ಎಂದು ವರದಿ ಮಾಡುತ್ತಾರೆ.
ಅಂದರೆ, ಜೀತ ಪದ್ಧತಿ ನಿರ್ಮೂಲನ ಸಮಿತಿ ಹಾಗೂ ತಾಲ್ಲೂಕು ಆಡಳಿತ ಪೂರ್ವ ನಿಯೋಜಿತವಾಗಿಯೇ ಭೂ ಮಾಲೀಕನ ಪರವಾಗಿ ಕೆಲಸ ಮಾಡಿದೆ. ಜೀತ ಮಾಡಿ ಅನ್ಯಾಯಕ್ಕೆ ಒಳಗಾದ ಕುಟುಂಬಕ್ಕೆ ನ್ಯಾಯ ಸಿಗದಂತೆ ಆದೇಶ ಮಾಡಿರುತ್ತದೆ.

ಉಪ ವಿಭಾಗಾಧಿಕಾರಿ ಆದೇಶದಲ್ಲಿ ” ತೀತಮಡ ಕಾಶಿ,ಹುದೂರು ಗ್ರಾಮ,ಪೊನ್ನಂಪೇಟೆ ತಾಲ್ಲೂಕು ಎಂಬುವರಲ್ಲಿ ಜೀತಕ್ಕಿದ್ದ ಚಂದ್ರ ಪಿ ಬಿ ಮತ್ತು ಕುಟುಂಬಸ್ಥರು ಕರ್ನಾಟಕ ಜೀತ ಕಾರ್ಮಿಕ ಪದ್ಧತಿ ವಿಮುಕ್ತಿ ಕಾಯ್ದೆ 1976 ಕಲಂ 10 ಮತ್ತು 12 ಕ್ಕೆ ಒಳಪಡದೆ ಇರುವುದರಿಂದ ಸದರಿ ಪ್ರಕರಣ ಮುಕ್ತಾಯಗೊಳಿಸಲಾಗಿದೆ ” ಇದಿಸ್ಟನ್ನು ನಯವಾಗಿ ಹೇಳಿ ಭೂ ಮಾಲೀಕನ ಪರ ಆದೇಶ ಮಾಡಿರುತ್ತದೆ.
ಉಪ ವಿಭಾಗಾಧಿಕಾರಿಯವರು” ಲೈನ್ ಮನೆ ಮುಂದೆ ಗೋಣಿ ಚೀಲದಲ್ಲಿ ಜೀತದಲ್ಲಿದ್ದ ಕುಟುಂಬದ ದಿನ ಬಳಕೆ ವಸ್ತು ಯಾಕೆ? ಇರಿಸಿಕೊಂಡಿದ್ದಾರೆ. ಅನ್ನುವ ಒಂದೇ ಒಂದು ಮಾತು ಕೇಳಿದ್ದರೆ ನೈಜತೆ ತಿಳಿಯುತಿತ್ತು. ಹಾಗೇ, ದೂರುದಾರನಿಗೆ ಯಾಕೆ ಮಾಹಿತಿ ಕೊಟ್ಟಿಲ್ಲ, ಸ್ಥಳಕ್ಕೆ ಕರೆದಿಲ್ಲ ಅನ್ನುವ ಪ್ರಶ್ನೆ ಮಾಡಿದ್ದರು ಸತ್ಯ ಹೊರ ಬರುತಿತ್ತು. ಇದ್ದಕಿದ್ದಂತೆ ದೂರು ಕೊಟ್ಟ ನಂತರ ಭೂ ಮಾಲೀಕ ತೀತಮಡ ಕಾಶಿಯವರಿಗೆ ಮಾನಸಿಕ ಅಸ್ವಸ್ತತೆ, ಖಿನ್ನತೆ, ಗ್ರಹಣ ಶಕ್ತಿ ಕಳೆದುಕೊಂಡಿದ್ದಾರಂತೆ. ಇದನ್ನೆಲ್ಲಾ ಅಧಿಕಾರಿಗಳು ಕೂಲಂಕುಷವಾಗಿ ತನಿಖೆ ಮಾಡದೆ ಒಂದು ಪ್ಯಾರಾದಲ್ಲಿ ಇಡೀ ಜೀತದಾಳುಗಳಾಗಿ ದುಡಿದ ಬಡ ಕುಟುಂಬಕ್ಕೆ ಅಧಿಕಾರಿಗಳು ನೇರವಾಗಿ ಅನ್ಯಾಯ ಮಾಡಿದ್ದಾರೆ “.
ಈ ವಿಶೇಷ ವರದಿ ಓದಿದ್ದೀರಾ? ಕೊಡಗು | ‘ ಲೈನ್ ಮನೆ ‘ ಜೀತ ಇಂದಿಗೂ ಜೀವಂತ
ಈ ದಿನ. ಕಾಮ್ ಇನ್ನು ಹೆಚ್ಚಿನ ಮಾಹಿತಿಯೊಡನೆ ಉಪ ವಿಭಾಗಾಧಿಕಾರಿ, ಸಂಬಂಧಪಟ್ಟ ಅಧಿಕಾರಿಗಳ ಪ್ರತಿಕ್ರಿಯೆ ಪಡೆದು ಮುಂದಿನ ಸಂಚಿಕೆಯಲ್ಲಿ ವಿವರವಾಗಿ ವರದಿ ಮಾಡಲಿದೆ.