ಬಿಹಾರದ ದರ್ಭಾಂಗಾದಲ್ಲಿ ಮಾರ್ಚ್ 30ರಂದು ಚೈತಿ ರಾಮನವಮಿಯ ಮೊದಲ ದಿನದಂದು ‘ಕಲಶ ಶೋಭಾ ಯಾತ್ರೆ’ಯ ಸಂದರ್ಭದಲ್ಲಿ ಘರ್ಷಣೆ ಭುಗಿಲೆದ್ದಿದೆ. ಯಾತ್ರೆ ವೇಳೆ ಕಲ್ಲು ತೂರಾಟ ನಡೆದಿದ್ದು, ಈ ಗಲಭೆಗೆ ಸಂಬಂಧಿಸಿದ್ದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
‘ಕಲಶ ಶೋಭಾ ಯಾತ್ರೆ’ಯಲ್ಲಿ ಭಾಗವಹಿಸಿ ಮನೆಗೆ ಹಿಂತಿರುಗುತ್ತಿದ್ದ ಭಕ್ತರ ಮೇಲೆ ಹತ್ತಿರದ ಕಟ್ಟಡಗಳ ಮೇಲ್ಛಾವಣಿಯಿಂದ ಕಲ್ಲು ತೂರಾಟ ನಡೆದಿದೆ ಎಂದು ಹೇಳಲಾಗಿದೆ. ಕಲ್ಲು ತೂರಾಟದಲ್ಲಿ ಹಲವು ಮಹಿಳೆಯರು ಗಾಯಗೊಂಡಿದ್ದಾರೆ. ಈ ಬೆನ್ನಲ್ಲೇ ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ.
ಇದನ್ನು ಓದಿದ್ದೀರಾ? ಚಲಿಸುತ್ತಿರುವ ರೈಲುಗಳಿಗೆ ಕಲ್ಲು ತೂರಾಟ; ತಪ್ಪಿತಸ್ಥರ ವಿರುದ್ಧ ಕಾರ್ಯಾಚರಣೆ ಪ್ರಾರಂಭಿಸಿದ ನೈರುತ್ಯ ರೈಲ್ವೆ
ಯಾವುದೇ ಅಹಿತಕರ ಘಟನೆ ನಡೆಯದಂತೆ ಪಕ್ಕದ ಪೊಲೀಸ್ ಠಾಣೆಗಳ ಪೊಲೀಸ್ ಸಿಬ್ಬಂದಿಗಳನ್ನು ಗ್ರಾಮದಲ್ಲಿ ನಿಯೋಜಿಸಲಾಗಿದೆ ಎಂದು ಕೆವತ್‌ಗಾಮಾ ಗ್ರಾಮದ ಮಾಜಿ ಮುಖ್ಯ ಅಲೋಕ್ ಕುಮಾರ್ ಅಲಿಯಾಸ್ ವಿಕಾಸ್ ಕುಮಾರ್ ಹೇಳಿದ್ದಾರೆ.
ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ದರ್ಭಾಂಗಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಜೆ ಜಗುನಾಥ್ ರೆಡ್ಡಿ ತಿಳಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಕುಶೇಶ್ವರಸ್ಥಾನ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಅವರಿಗೆ ಗ್ರಾಮದಲ್ಲಿ ಹೊರಗಿನವರ ಚಲನವಲನಗಳ ಮೇಲೆ ನಿಗಾ ಇಡಲು ಸೂಚಿಸಲಾಗಿದೆ ಎಂದು ಎಸ್‌ಎಸ್‌ಪಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಬಾಲಕಿ ಮೇಲಿನ ಅತ್ಯಾಚಾರ ಖಂಡಿಸಿ ಪ್ರತಿಭಟನೆ; ಹಿಂದುತ್ವವಾದಿ ಕಾರ್ಯಕರ್ತರಿಂದ ಕಲ್ಲು ತೂರಾಟ
ಎಸ್‌ಎಚ್‌ಒ ರಾಕೇಶ್ ಕುಮಾರ್, “ಜನರು ತಾಳ್ಮೆ ಕಾಯ್ದುಕೊಳ್ಳುವಂತೆ ಮನವಿ ಮಾಡುತ್ತೇವೆ. ನಾವು ಜಾಗರೂಕರಾಗಿದ್ದೇವೆ ಮತ್ತು ಪರಿಸ್ಥಿತಿಯ ಮೇಲೆ ನಿಕಟ ನಿಗಾ ಇಡುತ್ತಿದ್ದೇವೆ. ವದಂತಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.
ಕಳೆದ ವಾರ, ಡಿಜಿಪಿ ವಿಜಯ್ ಕುಮಾರ್ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿ, ಈದ್ ಮತ್ತು ರಾಮನವಮಿಯ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸೂಚನೆ ನೀಡಿದ್ದರು.
