ತನ್ನ ಸಹೋದರಿಯ ಮೇಲೆಯೇ ಹಲ್ಲೆ ನಡೆಸಿ, ಸಾವಿಗೆ ಕಾರಣವಾಗಿದ್ದ ಆರೋಪದಡಿ ಸಹೋದರನಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ರದ್ದುಪಡಿಸಿ ಆದೇಶ ಹೊರಡಿಸಿದೆ.
ಅಣ್ಣಪ್ಪ ಭಂಡಾರಿ ಎಂಬವರು ತಮಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ಕೆ.ವಿ. ಅರವಿಂದ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದ್ದು, ಶಿಕ್ಷೆಯನ್ನು ಮಾರ್ಪಡಿಸಿದೆ.
ಅಲ್ಲದೆ, 2018ರ ಜುಲೈ 26ರಂದು ಬಂಧನಕ್ಕೊಳಗಾದಾಗಿನಿಂದ 6 ವರ್ಷಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿದ್ದಾರೆ ಎಂಬ ಅಂಶವನ್ನು ಪರಿಗಣಿಸಿದ ಪೀಠ, ಅಣ್ಣಪ್ಪಗೆ ವಿಧಿಸಿದ್ದ ಶಿಕ್ಷೆಯನ್ನು ಆ ಅವಧಿಗೆ ನಿಗದಿಪಡಿಸಿ, 10,000 ರೂಗಳ ದಂಡ ಪಾವತಿಸಲು ಸೂಚನೆ ನೀಡಿದೆ.
ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಸಲೂನ್ ನಡೆಸುತ್ತಿದ್ದ ಅಣ್ಣಪ್ಪ ಭಂಡಾರಿ 2018ರ ಜುಲೈ 22ರಂದು ತನ್ನ ಸಹೋದರಿ ವಿಜಯ ಭಂಡಾರಿ ಜೊತೆ ಜಗಳವಾಡಿದ್ದ. ಅಣ್ಣಪ್ಪ ಭಂಡಾರಿ ತನ್ನ ಸಹೋದರಿಯಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದು, ವಿಜಯಾ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು. ವಿಜಯಾರ ಎಡಭುಜದ ಬಳಿ, ಬೆನ್ನಿನ ಬಲಭಾಗದಲ್ಲಿ ಗಾಯಗಳಾಗಿದ್ದವು. ಬಳಿಕ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಜುಲೈ 28ರಂದು ಆಕೆ ಮೃತಪಟ್ಟಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ, ಪ್ರತ್ಯಕ್ಷ ಸಾಕ್ಷ್ಯಾಧಾರಗಳಾದ ಮೃತ ವಿಜಯಾ ಸಹೋದರಿ ಮತ್ತು ಸೋದರಳಿಯ, ಸುಶೀಲಾ ಮತ್ತು ಕಮಲಾಕ್ಷಿ ಎಂಬುವರ ಸಾಕ್ಷ್ಯಗಳನ್ನು ಪರಿಗಣಿಸಿ ಆರೋಪಿ ಅಣ್ಣಪ್ಪ ಭಂಡಾರಿಗೆ ಕೊಲೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆ ಪ್ರಶ್ನಿಸಿ ಅವರು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ: ಬೆಂಗಳೂರು | ಬಿಎಂಟಿಸಿ ಬಸ್ ಡಿಕ್ಕಿ; ಇಬ್ಬರ ಸಾವು
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಗಾಯವು ಕುತ್ತಿಗೆ ಭಾಗದ ರಕ್ತನಾಳಗಳಿಗೆ ಹಾನಿಯಾಗದಂತೆ ಮೇಲ್ನೋಟಕ್ಕೆ ಕಾಣುತ್ತದೆ. ಆರಂಭಿಕ ಹಂತದಲ್ಲಿ ಗಮನಿಸಲಾದ ನಾಡಿಮಿಡಿತ ಮತ್ತು ರಕ್ತದೊತ್ತಡದಲ್ಲಿ (ಬಿಪಿ) ಯಾವುದೇ ಹೃದಯ ಸಂಬಂಧಿತ ಸಮಸ್ಯೆ ಅಥವಾ ಕಾಯಿಲೆಯನ್ನು ನಿರೀಕ್ಷಿಸಲು ಅಸಹಜವಾಗಿ ಹೆಚ್ಚಾಗಿರಲಿಲ್ಲ. ಈ ದೃಷ್ಟಿಕೋನದಲ್ಲಿ ಮೃತ ವಿಜಯಾ ಭಂಡಾರಿಗೆ ತಮಗಾದ ಗಾಯಗಳಿಂದಾಗಿ ಹೃದಯಸ್ತಂಭನ ಸಂಭವಿಸಿದೆ ಎಂಬ ವೈದ್ಯರ ಅಭಿಪ್ರಾಯವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.