ತುಮಕೂರು ಜಿಲ್ಲೆಯಲ್ಲಿ ಹುಣಸೆ ಸುಗ್ಗಿ ಆರಂಭವಾಗಿದೆ. ಬರದ ನಾಡಿನ ಬಂಗಾರವಾಗಿರುವ ಹುಣಸೆಯಿಂದ ಈ ಬಾರಿ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ.
ಹೌದು.. ಮಾರುಕಟ್ಟೆಯಲ್ಲಿ ಹುಣಸೆ ಹಣ್ಣಿನ ಧಾರಣೆ ನಿರಂತರವಾಗಿ ಏರುತ್ತಲೇ ಸಾಗಿದೆ. ತುಮಕೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ಗುರುವಾರ ಉತ್ತಮ ಗುಣಮಟ್ಟದ ಹುಣಸೆ ಹಣ್ಣು ಕ್ವಿಂಟಲ್‌ಗೆ 40 ಸಾವಿರ ರೂಪಾಯಿಗೆ ಮಾರಾಟವಾಗುವ ಮೂಲಕ ದಾಖಲೆ ಬೆಲೆ ದಾಖಲಿಸಿದೆ. ಇದು ಈ ವರ್ಷದಲ್ಲಿ ಗರಿಷ್ಠ ಬೆಲೆ ಎನ್ನಲಾಗಿದೆ. ತುಮಕೂರಿನ ಎಪಿಎಂಸಿ ಮಾರುಕಟ್ಟೆಗೆ ಸುಮಾರು 250 ಟನ್ ಹುಣಸೆ ಆವಕವಾಗಿತ್ತು. ಇಳುವರಿಯಲ್ಲಿ ಭಾರಿ ಕುಸಿತ ಕಂಡಿದ್ದರಿಂದ ಈ ಬಾರಿ ಹುಣಸೆಗೆ ಬಂಪರ್ ಬೆಲೆ ಬಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ತುಮಕೂರು ಜಿಲ್ಲೆ ತೆಂಗು ಬೆಳೆಗೆ ಹೆಸರಾಗಿದ್ದರೂ ಗಣನೀಯವಾಗಿ ಹುಣಸೆ ಬೆಳೆಯನ್ನು ಬೆಳೆಯಲಾಗುತ್ತದೆ. ಜಿಲ್ಲೆಯ ಕೊರಟಗೆರೆ, ಶಿರಾ, ಮಧುಗಿರಿ, ಪಾವಗಡ ತಾಲೂಕು ಭಾಗದಲ್ಲಿ ಹೇರಳವಾಗಿ ಹುಣಸೆ ಬೆಳೆಯಲಾಗುತ್ತದೆ. ಉಳಿದಂತೆ ಗುಬ್ಬಿ, ಚಿಕ್ಕನಾಯಕನಹಳ್ಳಿ, ತಿಪಟೂರು, ಕುಣಿಗಲ್, ತುಮಕೂರು ತಾಲೂಕುಗಳಲ್ಲಿ ಹಿತ್ತಲ ಬೆಳೆಯಾಗಿ ಬೆಳೆಯಲಾಗುತ್ತದೆ. ತೋಟಗಾರಿಕೆ ಇಲಾಖೆ ಪ್ರಕಾರ ಅಂದಾಜು ಜಿಲ್ಲೆಯಲ್ಲಿ 6550 ಹೆಕ್ಟೆರ್ ಪ್ರದೇಶದಲ್ಲಿ ಹುಣಸೆ ಬೆಳೆಯಲಾಗುತ್ತದೆ. ಮಳೆಯಾಶ್ರಿತ ಬೆಳೆಯಾದ ಹುಣಸೆ ಒಣ ಬೇಸಾಯಕ್ಕೆ ಹೇಳಿ ಮಾಡಿಸಿದ ವಾರ್ಷಿಕ ಬೆಳೆಯೂ ಹೌದು.

ತುಮಕೂರು ಹುಣಸೆಗೆ ಜಿಐ (ಜಿಯಾಗ್ರಪಿಕಲ್ ಇಂಡಿಕೇಶನ್) ಟ್ಯಾಗ್ ಆಗಿದೆ. ಜಿಲ್ಲೆಯ ಹುಣಸೆ ದೇಶದಲ್ಲೇ ಹೆಸರುವಾಸಿಯಾಗಿದೆ. ಆಂಧ್ರಪ್ರದೇಶ, ತಮಿಳುನಾಡು, ಕೇರಳದ ಜತೆಗೆ ಉತ್ತರ ಭಾರತದ ಬಹುತೇಕ ರಾಜ್ಯಗಳಿಗೆ ಇಲ್ಲಿನ ಹುಣಸೆ ರಫ್ತಾಗುತ್ತದೆ.
ತುಮಕೂರು ಜಿಲ್ಲೆ ನಂದಿಹಳ್ಳಿ ಗ್ರಾಮದ ಲಕ್ಷ್ಮಣ ಎಂಬ ಹಿರಿಯ ರೈತರು ಬೆಳೆದಿರುವ ಹುಣಸೆ ಮರ ದೇಶದಲ್ಲಿಯೇ ವಿಶಿಷ್ಟ ಎಂದು ನಿರೂಪಿತವಾಗಿದೆ. ಪ್ರತಿವರ್ಷ ಫಸಲು ಕೊಡುವ, ಹುಳಿಯ ಅಂಶ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿರುವ ಈ ಹುಣಸೆ ತಳಿಗೆ ಇದೀಗ ಮರ ಬೆಳೆಸಿರುವ ರೈತರಾದ ಲಕ್ಷ್ಮಣ ಅವರ ಹೆಸರನ್ನೇ ಹೆಸರುಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ನಾಮಕರಣ ಮಾಡಿರುವುದು ವಿಶೇಷ. ʼಲಕ್ಷ್ಮಣ ಹುಣಸೆ’ ತಳಿಯನ್ನು ಗುರುತಿಸಿ, ಸಂವರ್ಧನೆ ಮಾಡಲು ಐಐಎಚ್ಆರ್ ಮುಂದಾಗಿದೆ.
ಗುರುವಾರ ತುಮಕೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮಧುಗಿರಿ ತಾಲೂಕಿನ ಹಾವಿನಮಡಗು ಗ್ರಾಮದ ರೈತ ತಂದಿದ್ದ ಗುಣಮಟ್ಟದ ಹುಣಸೆ ಕ್ವಿಂಟಲ್ 40 ಸಾವಿರಕ್ಕೆ ಮಾರಾಟವಾಗಿದೆ. ಹಾಗೂ ಶಿರಾ ತಾಲೂಕಿನ ಕುಂಟರಾಮನಹಳ್ಳಿ ರೈತ ತಂದಿದ್ದ ಹುಣಸೆ ಹಣ್ಣು ಕ್ವಿಂಟಲ್‌ಗೆ 38 ಸಾವಿರ ರೂಪಾಯಿಗೆ ಮಾರಾಟವಾಗಿದೆ. ಹೀಗೆ ಉಳಿದ ಸಾಮಾನ್ಯ ಹುಣಸೆ ಹಣ್ಣಿಗೆ 13 ಸಾವಿರದಿಂದ 36 ಸಾವಿರದ ವರೆಗೂ ಮಾರಾಟವಾಗಿದೆ.
ಹುಣಸೆ ಹಣ್ಣು ಧಾರಣೆ ಏರಿಕೆ ನಡುವೆ ಹುಣಸೆ ಬೀಜಕ್ಕೂ ಬಂಪರ್ ಬೆಲೆ ಸಿಕ್ಕಿದೆ. ಎರಡೇ ವಾರದಲ್ಲಿ ಕ್ವಿಂಟಲ್ ಹುಣಸೆ ಬೀಜದ ಬೆಲೆ 900 ರೂ ವರೆಗೆ ಏರಿಕೆಯಾಗಿದೆ. ಹೀಗಾಗಿ ಹುಣಸೆ ಬೆಳೆಗಾರರಿಗೆ ಹಣ್ಣಿನ ಜೊತೆಗೆ ಬೀಜಕ್ಕೂ ಉತ್ತಮ ಬೆಲೆ ದೊರೆಯುತ್ತಿದೆ. ಈ ಬಾರಿ ತುಮಕೂರು ಮಾರುಕಟ್ಟೆಗೆ 2 ಸಾವಿರ ಚೀಲ (60 ಕೆಜಿ ಪ್ರತಿ ಚೀಲಕ್ಕೆ) ಹುಣಸೆ ಬೀಜ ಬಂದಿದ್ದು ಕ್ವಿಂಟಲ್‌ಗೆ 3700 ರೂಪಾಯಿಯಂತೆ ಮಾರಾಟವಾಗಿದೆ. ಹುಣಸೆ ಬೀಜದ ಸಿಪ್ಪೆ ತೆಗೆದು, ಪೌಡರ್ ಮಾಡಿ, ಬಟ್ಟೆ ಮತ್ತು ಸೊಳ್ಳೆನಾಶಕ ತಯಾರಿಕಾ ವಸ್ತುಗಳನ್ನು ಮಾಡಲು ಬಳಸಲಾಗುತ್ತದೆ. ದಾಬಸ್ ಪೇಟೆ ಬಳಿ ಇರುವ ಕಾರ್ಖಾನೆಗೆ ಈ ಹುಣಸೆ ಬೀಜಗಳನ್ನು ಖರೀದಿಸಲಾಗುತ್ತದೆ. 2023ರ ಡಿಸೆಂಬರ್ ತಿಂಗಳಲ್ಲಿ ಹುಣಸೆ ಬೀಜ ಒಂದು ಕ್ವಿಂಟಲ್‌ಗೆ 5 ಸಾವಿರಕ್ಕೆ ಮಾರಾಟವಾಗಿ ದಾಖಲೆ ನಿರ್ಮಿಸಿತ್ತು. ಮುಂದೆ ಹುಣಸೆ ಬೀಜದ ಧಾರಣೆ ಮತ್ತಷ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಹುಣಸೆ ಹಣ್ಣಿನ ಬೆಲೆಯೇನೋ ಏರಿಕೆಯಾಗಿದೆ. ಆದರೆ ಹುಣಸೆ ಬೆಳೆಗಾರರಿಗೆ ಇದರ ಲಾಭ ದೊರೆಯುತ್ತಿಲ್ಲ. ಇಳುವರಿ ಕುಸಿತದಿಂದ ಮರದಲ್ಲಿ ಹಣ್ಣೆ ಇಲ್ಲ. ಹಾಗಾಗಿ ಅಲ್ಲಿಗಲ್ಲಿಗೆ ಸಮವಾಗುತ್ತಿದೆ ಎನ್ನುತ್ತಾರೆ ಹುಣಸೆ ಬೆಳೆಗಾರ ಹೂವಿನಕಟ್ಟೆ ವಸಂತಯ್ಯ.
ಹುಣಸೆ ಮರ ಹತ್ತಿ ಬಡಿಯುವಾಗ ಹಲವರು ಆಯತಪ್ಪಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ಹುಣಸೆ ಹಣ್ಣು ಬಡಿಯಲು ಬರಲು ಹಿಂದೇಟು ಹಾಕುತ್ತಾರೆ. ಈ ರೀತಿ ಮೃತ ಪಟ್ಪವರಿಗೆ ಸರ್ಕಾರ ಪರಿಹಾರ ನೀಡಬೇಕು. ಹಾಗೂ ಹುಣಸೆ ಬೆಳೆಯನ್ನು ವಿಮೆ ವ್ಯಾಪ್ತಿಗೆ ಸೇರಿಸಬೇಕು ಎನ್ನುತ್ತಾರೆ ಹುಣಸೆ ಬೆಳೆಗಾರ ರಂಗಸ್ವಾಮಿ.
ಇದನ್ನೂ ಓದಿ: ತುಮಕೂರು | ಸಂಭ್ರಮದಿಂದ ರಂಜಾನ್ ಹಬ್ಬ ಆಚರಣೆ : ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ
ಒಟ್ಟಾರೆ ಸರ್ಕಾರ ಹುಣಸೆ ಬೆಳೆಗಾರರ ನೆರವಿಗೆ ಬರಬೇಕಿದೆ. ಮಳೆಯಾಶ್ರಿತ, ಒಣಬೇಸಾದ ವಾರ್ಷಿಕ ಬೆಳೆಯನ್ನು ಪ್ರೋತ್ಸಾಹಿಸಬೇಕು ಎಂಬುದು ರೈತರ ಒತ್ತಾಯ.
