ಅಮೆರಿಕ ಅಥವಾ ಅಮೆರಿಕ ಬೆಂಬಲಿತ ರಾಷ್ಟ್ರಗಳು ನಮ್ಮ ಮೇಲೆ ದಾಳಿ ಮಾಡಿದರೆ, ನಮ್ಮ ರಕ್ಷಣೆಗೆ ಪರಮಾಣು ಅಸ್ತ್ರಗಳನ್ನು ಬಳಸದೆ ಬೇರೆ ದಾರಿಯಿಲ್ಲ ಎಂದು ಇರಾನ್‌ನ ಪರಮೋಚ್ಛ ನಾಯಕ ಆಯತ್ತೊಲ್ಲಾ ಅಲಿ ಖಮೇನಿ ಅವರ ಸಲಹೆಗಾರರು ತಿಳಿಸಿದ್ದಾರೆ.
ಇರಾನ್ ತನ್ನ ಪರಮಾಣು ಕಾರ್ಯಕ್ರಮದ ಕುರಿತು ವಾಷಿಂಗ್ಟನ್‌ನೊಂದಿಗೆ ಒಪ್ಪಂದಕ್ಕೆ ಬರದಿದ್ದರೆ ಬಾಂಬ್ ದಾಳಿ ಮತ್ತು ಎರಡು ಪಟ್ಟು ಸುಂಕಗಳನ್ನು ವಿಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ ನಂತರ ಖಮೇನಿ ಅವರು ಕೂಡ ತಾವು ದಾಳಿ ನಡೆಸುವುದಾಗಿ ಹೇಳಿದ್ದರು.
“ನಾವು ಪರಮಾಣು ಅಸ್ತ್ರಗಳನ್ನು ಮೊದಲು ಬಳಸುವುದಿಲ್ಲ, ಆದರೆ ನೀವು ಇರಾನ್‌ನ ಪರಮಾಣು ವಿಷಯದಲ್ಲಿ ತಪ್ಪು ನಿರ್ಧಾರ ಕೈಗೊಂಡರೆ, ಇಲ್ಲವೆ ಇರಾನ್ ಮೇಲೆ ದಾಳಿ ನಡೆಸಿದರೆ ನಾವು ನಮ್ಮ ರಕ್ಷಣೆಯನ್ನು ಮಾಡಿಕೊಳ್ಳುತ್ತೇವೆ. ಇರಾನ್‌ಗೆ ಈ ರೀತಿ ಮುಂದಾಗುವುದು ಬೇಕಾಗಿಲ್ಲ, ಆದರೆ ಬೇರೆ ಆಯ್ಕೆಗಳಿಲ್ಲ. ನೀವು ಅಥವಾ ಇಸ್ರೇಲ್ ಮೂಲಕ ನಮ್ಮ ಮೇಲೆ ಬಾಂಬ್ ದಾಳಿ ಮಾಡಿದರೆ ಇರಾನ್ ನಿಮ್ಮ ಮೇಲೆ ಬೇರೆಯದೆ ನಿರ್ಧಾರ ಕೈಗೊಳ್ಳುತ್ತದೆ” ಎಂದು ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆಯತ್ತೊಲ್ಲಾ ಅಲಿ ಖಮೇನಿ ಅವರ ಸಲಹೆಗಾರರಾದ ಲರಿಜಾನಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೆನಡಾ ಸಂಸದ ಕನ್ನಡಿಗ ಚಂದ್ರ ಆರ್ಯಗೆ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಬಾಂಬ್ ಬೆದರಿಕೆಗೆ ಮಣಿಯಲು ಇರಾನ್ ನಿರಾಕರಿಸಿದ್ದು, ಅಗತ್ಯವಿದ್ದರೆ ಅಮೆರಿಕ ಸಂಬಂಧಿತ ಸ್ಥಳಗಳಲ್ಲಿ ದಾಳಿ ಮಾಡಲು ತನ್ನ ಭೂಗತ ಕ್ಷಿಪಣಿ ಶಸ್ತ್ರಾಗಾರವನ್ನು ಸಿದ್ಧಪಡಿಸುತ್ತಿದೆ ಎಂದು ಇರಾನ್ ಪರಮೋಚ್ಛ ನಾಯಕ ತಿಳಿಸಿದ್ದರು.
ಟ್ರಂಪ್ ಅವರ ಬೆದರಿಕೆಯ ನಂತರ, ಇರಾನ್ ತನ್ನ ಕ್ಷಿಪಣಿಗಳನ್ನು ದೇಶಾದ್ಯಂತವಿರುವ ತನ್ನ ಭೂಗತ ಸ್ಥಳಗಳಲ್ಲಿ ಉಡಾವಣೆಗೆ ಸಿದ್ಧವಾದ ಸ್ಥಿತಿಯಲ್ಲಿ ಇರಿಸಿದೆ. ಇವು ವೈಮಾನಿಕ ದಾಳಿಗಳನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಇರಾನ್ ರಾಜಕೀಯ ನಾಯಕರು ತಿಳಿಸಿದ್ದರು.
ಇಸ್ಲಾಮಿಕ್ ಗಣರಾಜ್ಯವು ತನ್ನ ಯುರೇನಿಯಂ ಪುಷ್ಟೀಕರಣ ಕಾರ್ಯಕ್ರಮವನ್ನು ಹೆಚ್ಚಿಸುವಲ್ಲಿ ನಿರತವಾಗಿದೆ. ಒಪ್ಪಂದ ಮಾಡಿಕೊಳ್ಳಿ, ಇಲ್ಲವೇ ಮಿಲಿಟರಿ ಪರಿಣಾಮಗಳನ್ನು ಎದುರಿಸಿ ಎಂಬ ಟ್ರಂಪ್ ಎಚ್ಚರಿಕೆಯನ್ನು ನಿರ್ಲಕ್ಷಿಸಿದೆ.