ರಾಯಭಾರ | ‘ಸಿದ್ದರಾಮಯ್ಯನವರ ನಂತರ ಯಾರು?’ ಕಾಂಗ್ರೆಸ್‌ನೊಳಗಿನ ಕಂಪನಗಳು 

Date:

Advertisements

ಡಿಕೆಶಿ ಒಮ್ಮೆ ತಮ್ಮ ಆಕಾಂಕ್ಷೆಗಳನ್ನು ಸ್ಪಷ್ಟವಾಗಿ ಹೊರಹಾಕಿದ್ದೇ ತಡ ಅವರಿಂದ ಅಂತರ ಕಾಯ್ದುಕೊಂಡಿರುವ ರಾಜ್ಯ ಕಾಂಗ್ರೆಸ್‌ನ ಅನೇಕ ಪ್ರಮುಖ ನಾಯಕರಿಗೆ ಸತೀಶ್‌ ಅವರ ಬೆನ್ನಿಗೆ ನಿಲ್ಲಲು ಒಂದು ಪ್ರಬಲ ಕಾರಣ ದೊರಕಿತು. ಇವರಲ್ಲಿ ಕೆಲವರು ಸತೀಶ್‌ ಅವರ ಬೆನ್ನಿಗೆ ಸ್ಪಷ್ಟವಾಗಿ ನಿಂತರೆ, ಮತ್ತೆ ಹಲವರು ತಮ್ಮದೇ ಆದ ವಿವಿಧ ಕಾರಣಗಳಿಂದಾಗಿ ಡಿಕೆಶಿ ವಿರುದ್ಧದ ರಾಜಕೀಯ ಸಮೀಕರಣದ ಪರವಾಗಿ ನಿಂತಿದ್ದಾರೆ. ಈ ಎರಡರ ಲಾಭವೂ ಸತೀಶ್‌ ಅವರಿಗೆ ದೊರೆಯುತ್ತಿದೆ.

ಒರೆಯಲ್ಲಿ ಕುದಿಯುತ್ತಿದ್ದ ಕತ್ತಿಗಳು ಹೊರಬಂದಿವೆ, ಮರೆಯಲ್ಲಿ ನಡೆಯುತ್ತಿದ್ದ ವ್ಯೂಹಗಳು ಮುನ್ನೆಲೆಗೆ ಬಂದಿವೆ – ಇದು ಸದ್ಯ ರಾಜ್ಯ ರಾಜಕಾರಣದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಹಾಗೂ ವಿಪಕ್ಷ ಬಿಜೆಪಿಯೊಳಗಿನ ಸ್ಥಿತಿ. ರಾಜಕಾರಣದಲ್ಲಿ ವ್ಯೂಹಗಳು, ಕದನಗಳು ಸಾಮಾನ್ಯವೇ ಅದರೂ ಸ್ಥಿತ್ಯಂತರಕ್ಕೆ ಕಾರಣವಾಗುವಂತಹ ವಿದ್ಯಮಾನಗಳು ಅಪರೂಪವೇ ಸರಿ.  

ಮುಂದಿನ ಕೆಲ ವರ್ಷಗಳ ಕಾಲ ರಾಜ್ಯ ಹಾಗೂ ದೇಶದ ರಾಜಕಾರಣಗಳೆರಡರಲ್ಲೂ ಇಂತಹ ಸ್ಥಿತ್ಯಂತರ ಪರ್ವವೇ ಇರಲಿದೆ. ಈ ಬಗೆಯ ಸ್ಥಿತ್ಯಂತರ ಸಾಮಾನ್ಯವಾಗಿ ಒಂದೂವರೆ ಎರಡು ದಶಕಗಳಿಗೊಮ್ಮೆ ಸಂಭವಿಸುವುದು ಉಂಟು. ರಾಜಕಾರಣ ಮಗ್ಗುಲು ಬದಲಿಸುವ ಈ ಪರ್ವ ಕೆಲವೊಮ್ಮೆ ಒಂದೆರಡು ವರ್ಷಗಳಲ್ಲಿಯೇ ಮುಗಿಯಬಹುದು, ಮತ್ತೆ ಕೆಲವು ಬಾರಿ ಅದು ಐದು-ಹತ್ತು ವರ್ಷಗಳ ಸುದೀರ್ಘ ಅವಧಿಯನ್ನೂ ತೆಗೆದುಕೊಳ್ಳಬಹುದು. ಈ ಅವಧಿಯಲ್ಲಿ ರಾಜಕಾರಣದ ಒಂದು ಪ್ರಭಾವಿ ತಲೆಮಾರು, ಅವರು ಪ್ರತಿನಿಧಿಸುತ್ತಿದ್ದ ರಾಜಕಾರಣದ ಶೈಲಿ ಎಲ್ಲವೂ ನೇಪಥ್ಯಕ್ಕೆ ಸರಿದು ಆ ಜಾಗಕ್ಕೆ ಮತ್ತೊಂದು ತಲೆಮಾರಿನ ನಾಯಕರು ಬರುತ್ತಾರೆ. ಈ ನಾಯಕರುಗಳು ತಂತಮ್ಮ ಪಕ್ಷಗಳೊಳಗೆ ಹಿಡಿತ ಸಾಧಿಸಲು ನಡೆಸುವ ಹೋರಾಟ, ಮಾಡಿಕೊಳ್ಳುವ ಹೊಂದಾಣಿಕೆಗಳೆಲ್ಲವೂ ರಾಜ್ಯ, ದೇಶದ ಭವಿಷ್ಯದ ರಾಜಕಾರಣದ ದಿಕ್ಕುದೆಸೆಗಳನ್ನು ರೂಪಿಸುತ್ತವೆ.

Advertisements

ಮೇಲಿನ ಈ ಬೀಸುನೋಟದಿಂದ ರಾಜ್ಯ ರಾಜಕಾರಣಕ್ಕೆ ಮರಳುವುದಾದರೆ, ಇದಾಗಲೇ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯನವರು ಅಧಿಕಾರ ರಾಜಕಾರಣದ ಕೇಂದ್ರದಿಂದ ನಿರ್ಗಮಿಸುವ ನಂತರದ ಸನ್ನಿವೇಶವನ್ನು ಊಹಿಸಿಕೊಂಡು ರಾಜಕೀಯ ಸಮೀಕರಣಗಳ ಅನ್ವೇಷಣೆ ನಡೆಯುತ್ತಿದೆ.

ಹಾಲಿ ಪಕ್ಷದ ರಾಜ್ಯಾಧ್ಯಕ್ಷ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಪಕ್ಷದ ಭಾವಿ ರಾಜ್ಯಾಧ್ಯಕ್ಷ, ಭಾವಿ ಮುಖ್ಯಮಂತ್ರಿ ಆಗಬೇಕೆನ್ನುವ ಉಮೇದಿನಲ್ಲಿರುವ ಸಚಿವ ಸತೀಶ್‌ ಜಾರಕಿಹೊಳಿ ಅವರು ತಮ್ಮ ತಮ್ಮ ಚದುರಂಗದಾಟವನ್ನು ಮುನ್ನಡೆಸಿದ್ದಾರೆ. ಇದರ ಬೆನ್ನಿಗೇ ದಲಿತ ಹಾಗೂ ಲಿಂಗಾಯತ ಸಚಿವರು ಸಹ ತಾವೂ ಆಟದಲ್ಲಿದ್ದೇವೆ ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ.

ಬೆಳಗಾವಿ ರಾಜಕಾರಣಕ್ಕೆ ಡಿ ಕೆ ಶಿವಕುಮಾರ್‌ ಅವರ ಪ್ರವೇಶದ ನಂತರ ಬೆಳವಣಿಗೆಗಳು ಹಾಗೂ ಜಾರಕಿಹೊಳಿ ಕುಟುಂಬದೊಟ್ಟಿಗೆ ಡಿ ಕೆ ಶಿವಕುಮಾರ್‌ ಹೊಂದಿರುವ ಎಣ್ಣೆ-ಸಿಗೇಕಾಯಿ ಸಂಬಂಧದ ಬಗ್ಗೆ ಇದಾಗಲೇ ಮಾಧ್ಯಮಗಳಲ್ಲಿ ಪುಂಖಾನುಪುಂಖವಾಗಿ ವರದಿಯಾಗಿದೆ. ಹಾಗಾಗಿ, ರಾಜಕೀಯ ಆಸಕ್ತರಿಗೆ ಮರಳಿ ಇದೇ ವಿಚಾರಗಳನ್ನು ವಿವರಿಸುವ ಅಗತ್ಯವಿಲ್ಲ. ಆದರೆ, ಇಲ್ಲಿ ಕೇಳಿಕೊಳ್ಳಬೇಕಿರುವ ಒಂದು ಪ್ರಶ್ನೆಯೆಂದರೆ ಒಂದೊಮ್ಮೆ ಡಿ ಕೆ ಶಿವಕುಮಾರ್‌ ಅವರು ಬೆಳಗಾವಿ ರಾಜಕಾರಣಕ್ಕೆ ಪ್ರವೇಶಿಸದೆ ಹೋಗಿದ್ದರೆ ಆಗ ಸತೀಶ್‌ ಜಾರಕಿಹೊಳಿ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗಾಗಲಿ ಅಥವಾ ಭವಿಷ್ಯದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಲಿ ತಮ್ಮ ದಾವೇದಾರಿಕೆಯನ್ನು ಮಂಡಿಸುತ್ತಿರಲಿಲ್ಲವೇ ಎನ್ನುವುದು. ಈ ದೃಷ್ಟಿಯಿಂದ ಗಮನಿಸಿದಾಗ ನಿಚ್ಚಳವಾಗುವುದೇನೆಂದರೆ ಪ್ರಸಕ್ತ ರಾಜಕೀಯ ಬೆಳವಣಿಗೆಗಳೇನಿವೆ ಅವು ಸತೀಶ್ ಅವರು ತಮ್ಮ ರಾಜಕೀಯ ದಾವೆದಾರಿಕೆಯನ್ನು ಮುಂದೆ ಮಾಡಲು ತಕ್ಷಣದ ಕಾರಣಗಳಾಗಿ ಒದಗಿರುವುದು ನಿಜವಾದರೂ ಅವರ ರಾಜಕೀಯ ಚಲನೆ ಆ ದಿಕ್ಕಿನೆಡಗೆ ಬಹಳ ಮುಂಚಿನಿಂದಲೂ ಸಾಗಿಯೇ ಇತ್ತು ಎನ್ನುವುದು. ಹಾಗಿಲ್ಲದಿದ್ದರೆ ಇಂದು ಈ ಪ್ರಮಾಣದಲ್ಲಿ ಕಾಂಗ್ರೆಸ್‌ನೊಳಗೆ ಎಲ್ಲ ಜಾತಿ ಲೆಕ್ಕಾಚಾರಗಳನ್ನು ಮೀರಿ ಸತೀಶ್‌ ಅವರ ಬೆನ್ನಿಗೆ ನಿಲ್ಲುವವರ ಸಂಖ್ಯೆ ಕಾಣಿಸುತ್ತಿರಲಿಲ್ಲ. ಈ ಶ್ರೇಯದಲ್ಲಿನ ಒಂದು ಪಾಲು ಸತೀಶ್‌ ಅವರು ಈವರೆಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಹಿರಿಕಿರಿಯ ರಾಜಕಾರಣಿಗಳಿಗೆ ವಿವಿಧ ಸಂದರ್ಭಗಳಲ್ಲಿ ಸಹಕರಿಸಿರುವ ರೀತಿ, ಮಾಡಿರುವ ಸಹಾಯ, ಸ್ಥಿತಪ್ರಜ್ಞತೆಯ ರಾಜಕಾರಣಕ್ಕೆ ಸಂದರೆ ಮತ್ತೊಂದು ಪಾಲು ಡಿ ಕೆ ಶಿವಕುಮಾರ್ ಅವರು ಪಕ್ಷದೊಳಗೆ ಸೃಷ್ಟಿಸಿದ ಕಂಪನಗಳಿಗೆ ಸಲ್ಲಬೇಕು.

ಡಿ ಕೆ ಶಿವಕುಮಾರ್ ಅವರು ಇರಿಸಿದ ಹೆಜ್ಜೆಗಳು, ವಿಶೇಷವಾಗಿ ಅವರು ಮುಖ್ಯಮಂತ್ರಿ ಹುದ್ದೆಯ ಅಧಿಕಾರ ಹಸ್ತಾಂತರದ ಬಗ್ಗೆ ಸೂಚ್ಯವಾಗಿ ಮಾತನಾಡಿದ ರೀತಿ, ಬರುವ ದಿನಗಳಲ್ಲಿ ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿ ತಾನು ಎಂದು ಪದೇ ಪದೇ ನೀಡಿದ ಸಂದೇಶಗಳು ಅವರಿಗೆ ನೆರವಾಗಿದ್ದಕ್ಕಿಂತ ಹೆಚ್ಚಾಗಿ ಸತೀಶ್‌ ಅವರ ಬಲ ಹೆಚ್ಚಿಸಲು ಕಾರಣವಾಗಿದ್ದು ದಿಟ. ಅವರು ತಮ್ಮ ಇಂಗಿತಗಳನ್ನು ಇಷ್ಟು ಶೀಘ್ರವಾಗಿ ಬಹಿರಂಗಗೊಳಿಸದೆ ಹೋಗಿದ್ದರೆ ಈಗ ಕಾಣುತ್ತಿರುವ ಸಮೀಕರಣ ಇಷ್ಟು ನಿಚ್ಚಳವಾಗಿ ಕಂಡುಬರುತ್ತಿರಲಿಲ್ಲ.

satishjarkiholi 3 1667843651

ಯುದ್ಧದ ಸುಳಿವು ಮುಂಚಿತವಾಗಿ ಬಹಿರಂಗಗೊಂಡಷ್ಟೂ ಅಲ್ಲಿ ಅಚ್ಚರಿಯ, ಆತುರದ ನಡೆಗಳ ಸಾಧ್ಯತೆ ಕ್ಷೀಣಿಸುತ್ತದೆ, ಬದಲಿಗೆ ತಂತ್ರಗಾರಿಕೆಗಳು ಹೆಚ್ಚು ಯೋಜಿತವಾಗತೊಡಗುತ್ತವೆ. ಪರಿಣಾಮ, ಅಚ್ಚರಿಯ ಅವಕಾಶಗಳಾಗಲಿ, ಗಲಿಬಿಲಿಯಲ್ಲಿ ಗೋಲು ಹೊಡೆಯುವ ಸಾಧ್ಯತೆಗಳಾಗಲಿ ಕುಸಿಯುತ್ತವೆ. ಅದರಲ್ಲಿಯೂ ನಿಮ್ಮ ಎದುರಾಳಿ ಮಿತಭಾಷಿಯೂ, ಸುಲಭಗ್ರಹಿಕೆಗೆ ಸಿಲುಕದವರು ಆಗಿದ್ದಾಗ ಹೀಗೆ ಮುಂಚಿತವಾಗಿಯೇ ಯುದ್ಧ ಘೋಷಣೆ ಮಾಡಿಕೊಂಡು ಅಖಾಡಕ್ಕಿಳಿಯುವುದು ಉತ್ತಮ ನಡೆಯಲ್ಲ.

ಡಿಕೆಶಿ ಒಮ್ಮೆ ತಮ್ಮ ಆಕಾಂಕ್ಷೆಗಳನ್ನು ಸ್ಪಷ್ಟವಾಗಿ ಹೊರಹಾಕಿದ್ದೇ ತಡ ಅವರಿಂದ ಅಂತರ ಕಾಯ್ದುಕೊಂಡಿರುವ ರಾಜ್ಯ ಕಾಂಗ್ರೆಸ್‌ನ ಅನೇಕ ಪ್ರಮುಖ ನಾಯಕರಿಗೆ ಸತೀಶ್‌ ಅವರ ಬೆನ್ನಿಗೆ ನಿಲ್ಲಲು ಒಂದು ಪ್ರಬಲ ಕಾರಣ ದೊರಕಿತು. ಇವರಲ್ಲಿ ಕೆಲವರು ಸತೀಶ್‌ ಅವರ ಬೆನ್ನಿಗೆ ಸ್ಪಷ್ಟವಾಗಿ ನಿಂತರೆ, ಮತ್ತೆ ಹಲವರು ತಮ್ಮದೇ ಆದ ವಿವಿಧ ಕಾರಣಗಳಿಂದಾಗಿ ಶಿವಕುಮಾರ್‌ ವಿರುದ್ಧದ ರಾಜಕೀಯ ಸಮೀಕರಣದ ಪರವಾಗಿ ನಿಂತಿದ್ದಾರೆ. ಈ ಎರಡರ ಲಾಭವೂ ಸತೀಶ್‌ ಅವರಿಗೆ ದೊರೆಯುತ್ತಿದೆ.

ಇದಲ್ಲದೆ, ಸತೀಶ್ ಅವರ‌ ಪರವಾಗಿ ಕೆಲಸ ಮಾಡುತ್ತಿರುವ ಮತ್ತೊಂದು ದೊಡ್ಡ ಅಂಶವೆಂದರೆ ಕರ್ನಾಟಕದ ರಾಜಕಾರಣದಲ್ಲಿ ಅಹಿಂದ ವರ್ಗಗಳಲ್ಲಿ ಮೂಡಿರುವ ವ್ಯಾಪಕ ಜಾಗೃತಿ. ಇಂದು ಅಹಿಂದ ಸಮುದಾಯಗಳು ತಮ್ಮ ಏಳಿಗೆಗಾಗಿ ಮಾತ್ರವೇ ರಾಜಕೀಯ ಪಕ್ಷಗಳನ್ನು ನೋಡುತ್ತಿಲ್ಲ, ಬದಲಿಗೆ ಅಧಿಕಾರ ರಾಜಕಾರಣದಲ್ಲಿ ತಮಗೆ ದೊರೆಯಬಹುದಾದ ಪ್ರಬಲ ಪಾಲಿನ ಬಗ್ಗೆಯೂ ವಿಶೇಷ ಮುತುವರ್ಜಿ ವಹಿಸುತ್ತಿವೆ. ಕುರುಬ ಸಮುದಾಯ ಹೇಗೆ ಸಿದ್ದರಾಮಯ್ಯನವರ ಬೆನ್ನಿಗೆ ನಿಂತು ಅಧಿಕಾರ ರಾಜಕಾರಣದ ಸಾಮುದಾಯಿಕ ಆಶೋತ್ತರಗಳನ್ನು ಈಡೇರಿಸಿಕೊಂಡಿದೆಯೋ, ಅದೇ ರೀತಿ ನಾಯಕ ಸಮುದಾಯವೂ ಸಹ ಈ ವಿಚಾರದಲ್ಲಿ ವಿಶೇಷ ಆಸ್ಥೆಯನ್ನು ಹೊಂದಿದೆ. ಒಂದೊಮ್ಮೆ ಗಣಿಧಣಿಗಳ ಬೆನ್ನಿಗೆ ನಿಂತು ಹವ್ಯಾಸಿ ರಾಜಕಾರಣ ಮಾಡುತ್ತಿದ್ದ ಶ್ರೀರಾಮುಲು ಅವರಿಗೆ ಅಗಾಧ ಪ್ರೀತಿ, ವಿಶ್ವಾಸ ತೋರುವ ಮೂಲಕ ಅವರನ್ನು ಬಿಜೆಪಿಯಲ್ಲಿ ಒಬ್ಬ ಪ್ರಮುಖ ಅಹಿಂದ ವರ್ಗದ ನಾಯಕನಾಗಿ ಬೆಳೆಸುವಲ್ಲಿ ಈ ಸಮುದಾಯದ ಪಾಲು ದೊಡ್ಡದು. ಅಂತಹದರಲ್ಲಿ, ಪಕ್ಕಾ ನುರಿತ ರಾಜಕಾರಣಿಯಾದ, ರಾಜಕೀಯ, ಸೈದ್ಧಾಂತಿಕ ಖಚಿತತೆ ಹೊಂದಿರುವ ಸತೀಶ್‌ ಅವರು ಮುಂಚೂಣಿಗೆ ಬರುತ್ತಾರೆ ಎಂದರೆ ಈ ಸಮುದಾಯ ಅವರ ಬೆನ್ನಿಗೆ ನಿಲ್ಲುವ ರೀತಿ ಇನ್ನೂ ಮಿಗಿಲಾಗಿರುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಅಂದಹಾಗೆ, ಇದೆಲ್ಲ ಸಾಧ್ಯವಾಗಲು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಿದ್ದರಾಮಯ್ಯನವರ ಆಶೀರ್ವಾದ ಇದ್ದೇ ಇರುತ್ತದೆ ಎನ್ನುವುದರಿಂದಲೇ ಈ ಇಡೀ ಸಮೀಕರಣದ ಚರ್ಚೆ ಶುರುವಾಗುತ್ತದೆ. ಹಾಗಾಗಿ ಪ್ರಸ್ತುತ ಸಿದ್ದರಾಮಯ್ಯನವರ ಸುತ್ತ ಇರುವ ನಾಯಕರೇನಿದ್ದಾರೆ, ಇವರೆಲ್ಲರೂ ತಮ್ಮ ವೈಯಕ್ತಿಕ ಆಕಾಂಕ್ಷೆಗಳೇನೇ ಇದ್ದರೂ ಒಂದು ವಿಸ್ತೃತವಾದ ರಾಜಕೀಯ ಕಾರ್ಯಯೋಜನೆಯ ಭಾಗವಾಗಿ ಸತೀಶ್‌ ಅವರೊಂದಿಗೆ ತಾಳಮೇಳ ಏರ್ಪಡಿಸಿಕೊಂಡು ಮುನ್ನಡೆಯುತ್ತಾರೆ ಎನ್ನುವ ಊಹೆ ಈ ಸಮೀಕರಣದ ಆಂತರ್ಯದಲ್ಲಿದೆ. ಆದರೆ, ಈ ಬಗೆಯ ಊಹೆಗಳೆಲ್ಲವೂ ಸದಾ ಕಾಲ – ಸುದೀರ್ಘ ಕಾಲ ನಿಜವಾಗಿರಲೇಬೇಕು ಎಂದೇನೂ ಇಲ್ಲ. ಇದುವೇ, ಸತೀಶ್‌ ಅವರಿಗೆ ಇರುವ ಸವಾಲು.    

ಡಿ ಕೆ ಶಿವಕುಮಾರ್‌ ಅವರ ವಿಚಾರದಲ್ಲಿ ಗಮನಿಸುವುದಾದರೆ, ಗಾಂಧಿ ಪರಿವಾರದೆಡೆಗಿನ ಅವರ ನಿಷ್ಠೆ, ಆ ಕುಟುಂಬಕ್ಕಾಗಿ ಹಾಗೂ ಪಕ್ಷಕ್ಕಾಗಿ ರಾಜಕೀಯವಾಗಿ ಮೈಮೇಲೆ ಎಳೆದುಕೊಂಡಿರುವ ಸಂಕಷ್ಟಗಳು, ನ್ಯಾಯಾಂಗ ಹೋರಾಟಗಳು, ಜೈಲುವಾಸ ಇದೆಲ್ಲವೂ ಅವರಿಗೆ ಪಕ್ಷದ ರಾಜ್ಯದ ಚುಕ್ಕಾಣಿ ಹಿಡಿಯಲು ಏರಬೇಕಾದ ಮೆಟ್ಟಿಲುಗಳಾದವು.

ಸಿದ್ದರಾಮಯ್ಯನವರ ಮಾಸ್‌ ಅಪೀಲ್‌ನೊಟ್ಟಿಗೆ, ಡಿ ಕೆ ಶಿವಕುಮಾರ್‌ ಅವರ ಮುನ್ನುಗ್ಗುವ ಪ್ರವೃತ್ತಿ, ಸಂಘಟನೆ-ಸಂಪನ್ಮೂಲಗಳ ರಾಜಕಾರಣವೂ ಸೇರಿ ಗ್ಯಾರಂಟಿಗಳ ದೋಣಿಯೇರಿ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಫಲಿತಾಂಶ ಬರಲು ಕಾರಣವಾಯಿತು. ಇದೆಲ್ಲದರ ಫಲವನ್ನು ಡಿ ಕೆ ಶಿವಕುಮಾರ್‌ ಅವರು ಸರ್ಕಾರ ರಚನೆಯ ನಂತರ ಭರ್ತಿಯಾಗಿಯೇ ಪಡೆದಿದ್ದಾರೆ. ಇದೆಲ್ಲದಕ್ಕೂ ಹೈಕಮಾಂಡ್‌ನ ಬೆಂಬಲವೂ ಇದ್ದುದರಿಂದ ಸಣ್ಣಪುಟ್ಟ ಗೊಣಗಾಟಗಳ ನಡುವೆಯೂ ರಾಜ್ಯದ ಎಲ್ಲ ಪ್ರಭಾವಿ ನಾಯಕರು ಡಿ ಕೆ ಶಿವಕುಮಾರ್‌ ಅವರಿಗೆ ದೊರೆತ ಸ್ಥಾನಮಾನಗಳ ಬಗ್ಗೆ ಹೇಳಿಕೊಳ್ಳುವಂತಹ ಅಸಮಾಧಾನವನ್ನೇನೂ ತೋರಿರಲಿಲ್ಲ.

DKS and Siddu

ಆದರೆ, ಸಮಸ್ಯೆ ಶುರುವಾದದ್ದು ತದನಂತರ. ತಾವು ಪಡೆದಿರುವುದನ್ನು ಪೂರ್ಣವಾಗಿ ಅನುಭವಿಸುವುದಕ್ಕೂ ಮೊದಲೇ ಡಿಕೆ ಮಹತ್ವಾಕಾಂಕ್ಷೆಯ ಬೆನ್ನಿಗೆ ಬಿದ್ದು ಹೈಕಮಾಂಡ್‌ನೊಂದಿಗೆ ಮತ್ತಷ್ಟು, ಮಗದಷ್ಟು ಚೌಕಾಶಿಯನ್ನು ನಡೆಸಲು ಆರಂಭಿಸಿದರು. ಇದೆಲ್ಲದರ ಪರಿಣಾಮ ಕಳೆದ ಕೆಲ ತಿಂಗಳಲ್ಲಿ ರಾಜ್ಯದ ರಾಜಕಾರಣದಲ್ಲಿ ಏನೆಲ್ಲ ನಡೆಯಿತು ಎನ್ನುವುದನ್ನು ಇದೇ ಅಂಕಣದಲ್ಲಿ ಈ ಹಿಂದೆ ಚರ್ಚಿಸಲಾಗಿದೆ.

ರಾಯಭಾರ | ಡಿಕೆ ಸಾಹೇಬರ ‘ಮಿಷನ್‌ ಚೀಫ್‌ ಮಿನಿಸ್ಟರ್‌’ ಎಂಬ ಯೋಜನೆ ‘ಗಾಳಿ ತೆಗೆಯುವ ಕಾರ್ಯಕ್ರಮ’ವಾದ ಪರಿ!   

ಡಿ ಕೆ ಶಿವಕುಮಾರ್‌ ಅವರು ಕಳೆದ ಕೆಲ ತಿಂಗಳಲ್ಲಿ ಇರಿಸಿರುವ ರಾಜಕೀಯ ನಡೆಗಳು ಅವರಿಗೆ ವೈಯಕ್ತಿಕವಾಗಿ ಬಲ ತುಂಬಿದ್ದಕ್ಕಿಂತ ಸಮಸ್ಯೆಗಳನ್ನು ಸೃಷ್ಟಿಸಿರುವುದೇ ಹೆಚ್ಚು. ಇನ್ನು ಡಿಕೆ‌ ಹಾಗೂ ದೇವೇಗೌಡರ ಕುಟುಂಬದ ನಡುವೆ ನಡೆಯುತ್ತಿರುವ ರಾಜಕೀಯ ಕದನ ಇದೀಗ ಭೌಗೋಳಿಕ ಕದನವೂ ಆಗಿ ಮಾರ್ಪಟ್ಟಿದೆ. ‘ಗ್ರೇಟರ್‌ ಬೆಂಗಳೂರು’ ಯೋಜನೆ ಮೂಲಕ ರಾಮನಗರ ಜಿಲ್ಲೆಯ ಕೆಲ ಭಾಗಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರುವುದು ಒಂದೆಡೆ ನಿಶ್ಚಿತವಾಗಿದ್ದರೆ, ಮತ್ತೊಂದೆಡೆ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ (ಇದಕ್ಕೆ ಕೇಂದ್ರದ ಅನುಮೋದನೆ ದೊರೆತಿಲ್ಲ) ಎಂದು ಹೆಸರಿಸಬೇಕೆಂದಿದ್ದ ಪ್ರಯತ್ನಕ್ಕೆ ಹಿನ್ನಡೆಯಾಗಿರುವುದನ್ನು ಇಲ್ಲಿ ಗಮನಿಸಬಹುದು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೂಲಕ ಡಿ ಕೆ ಕುಟುಂಬ ಬೆಂಗಳೂರಿನ ಕೆಲ ಭಾಗಗಳ ಮೇಲೆ ಹೊಂದಿರುವ ರಾಜಕೀಯ ಹಿಡಿತ ಇದೀಗ ಬೆಂಗಳೂರು ಅಭಿವೃದ್ಧಿ ಸಚಿವರಾದ ನಂತರದ ಸಂದರ್ಭದಲ್ಲಿ ಇಡೀ ಬೆಂಗಳೂರಿನ ಮೇಲೆ ದಟ್ಟವಾಗುತ್ತಿದೆ. ಇದು ಸಹಜವಾಗಿಯೇ ಬೆಂಗಳೂರು ಮೂಲದ ಹಿರಿಯ ಕಾಂಗ್ರೆಸ್‌ ಸಚಿವರು, ಶಾಸಕರಿಗೆ ಪಥ್ಯವಾಗುತ್ತಿಲ್ಲ. ಬೆಂಗಳೂರಿನ ಉಸ್ತುವಾರಿಯನ್ನು ಬೆಂಗಳೂರು ಮೂಲದವರೇ ಹೊರುವ ಅಗತ್ಯತೆಯ ಬಗ್ಗೆ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಕೂಡ ಮಾತನಾಡಿದ್ದುಂಟು.

ಬೃಹತ್‌ ಬೆಂಗಳೂರು, ರಾಮನಗರ ಜಿಲ್ಲೆಗಳಲ್ಲಿ ತಮ್ಮ ಹಿಡಿತವನ್ನು ವ್ಯಾಪಕಗೊಳಿಸಲು ಮುಂದಾಗಿರುವ ಡಿಕೆ ಆ ಮೂಲಕ ಭವಿಷ್ಯದಲ್ಲಿ ತಮ್ಮ ಪರವಾಗಿ ನಿಲ್ಲುವ ಶಾಸಕರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳುವ ಉಮೇದಿನಲ್ಲಿದ್ದಾರೆ. ಈ ಭಾಗದಲ್ಲಿ ತಮ್ಮ ಹೆಚ್ಚಿನ ಬೆಂಬಲಿಗರಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಳ್ಳುವ ಮೂಲಕ ಪಾರಮ್ಯ ಮೆರೆಯಬೇಕು ಎನ್ನುವ ಇರಾದೆ ಅವರಲ್ಲಿ ಕಾಣುತ್ತಿದೆ. ಇದೇ ಕಾರಣಕ್ಕೆ ಅವರ ನಡೆಗಳನ್ನು ಪಕ್ಷದೊಳಗಿನ ಈ ಪ್ರಾಂತ್ಯದ ಸಚಿವರು, ಶಾಸಕರೆಲ್ಲ ಅನುಮಾನದಿಂದಲೇ ನೋಡುವಂತಾಗಿದೆ. ಶಿವಕುಮಾರ್‌ ಅವರ ಇಂತಹ ಪ್ರಯತ್ನಗಳು ರಾಜ್ಯದುದ್ದಗಲಕ್ಕೂ ನಡೆದಿವೆ. ಇದರ ಫಲವೇ ರಾಜ್ಯದ ವಿವಿಧ ಭಾಗಗಳ ಪ್ರಮುಖ ಕಾಂಗ್ರೆಸ್‌ ನಾಯಕರಲ್ಲಿ ಡಿಕೆ ಅವರ ನಾಯಕತ್ವದ ಬಗ್ಗೆ ಮೂಡುತ್ತಿರುವ ಅಸಂತೋಷ.          

ಒಂದೇ ಸಾಲಿನಲ್ಲಿ ಹೇಳುವುದಾದರೆ, ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯನ್ನು ಹಾಗೂ ತಮಗೆ ದೊರೆತಿರುವ ಪ್ರಭಾವಿ ಖಾತೆಗಳನ್ನು ಡಿ ಕೆ ಶಿವಕುಮಾರ್‌ ಪಕ್ಷವನ್ನು ಗಟ್ಟಿಗೊಳಿಸುವುದಕ್ಕಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಗಟ್ಟಿಗೊಳಿಸಿಕೊಳ್ಳಲು, ಅದಕ್ಕೆ ಅನುಗುಣವಾಗಿ ಪಕ್ಷದೊಳಗಿನ ತಮ್ಮ ಪ್ರತಿಸ್ಪರ್ಧಿಗಳನ್ನು ರಾಜಕೀಯವಾಗಿ ಕಟ್ಟಿಹಾಕಲು ಬಳಸುತ್ತಿದ್ದಾರೆ ಎನ್ನುವ ಆರೋಪ ದೆಹಲಿ ಮುಟ್ಟಿದೆ.  

ದೆಹಲಿಯ ವಿಚಾರಕ್ಕೆ ಬರುವುದಾದರೆ, ಸಿದ್ದರಾಮಯ್ಯನವರೇ ಆಗಲಿ,‌ ಡಿ ಕೆ ಶಿವಕುಮಾರ್‌, ಸತೀಶ್‌ ಜಾರಕಿಹೊಳಿ ಅವರುಗಳೇ ಅಗಲಿ, ಇವರು ಹೇಳುವ ಎಲ್ಲದಕ್ಕೂ ಕಾಂಗ್ರೆಸ್‌ ಹೈಕಮಾಂಡ್ ಸುಮ್ಮನೆ‌ ತಲೆಯಾಡಿಸುವ ಸ್ಥಿತಿಯಲ್ಲಿ ಇಲ್ಲ. ರಾಜ್ಯದಲ್ಲಿ ಪಕ್ಷ ಯಶಸ್ವಿಯಾಗಿ ತನ್ನ ಅವಧಿಯನ್ನು ಪೂರೈಸಲು ಹಾಗೂ ದೇಶದ ರಾಜಕಾರಣದಲ್ಲಿ ತನ್ನದೊಂದು ಯಶಸ್ವಿ ಮಾದರಿ ಇದೆ ಎಂದು ತೋರಿಸಿಕೊಳ್ಳಲು ಅದಕ್ಕೆ ಕರ್ನಾಟಕದಲ್ಲಿರುವ ಸರ್ಕಾರ ಈ ಅವಧಿಪೂರ್ತಿ ತಾಳಿಕೆಬಾಳಿಕೆ ಬರುವುದು ಬಹುಮುಖ್ಯ. ಸಿದ್ದರಾಮಯ್ಯನವರನ್ನು ಅಧಿಕಾರದ ಕೇಂದ್ರದಿಂದ ಅತ್ತಿತ್ತ ಅಲುಗಾಡಿಸುವ ಪ್ರಯತ್ನಗಳು ಏನು ಪರಿಣಾಮ ಬೀರಬಹುದು ಎನ್ನುವ ಅಂದಾಜು ಅದಕ್ಕಿದೆ. ಅದೇ ರೀತಿ, ರಾಷ್ಟ್ರಮಟ್ಟದಲ್ಲಿ ಪಕ್ಷದ ಪುನರುಜ್ಜೀವನದ ದೃಷ್ಟಿಯಿಂದ ಈ ವರ್ಷದ ಕೊನೆಯಲ್ಲಿ ಬರಲಿರುವ ಬಿಹಾರದ ಚುನಾವಣೆಯೂ ಸೇರಿದಂತೆ ಮುಂದಿನ ವರ್ಷಗಳಲ್ಲಿ ಎದುರಾಗಲಿರುವ ಕೇರಳ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶದ ಚುನಾವಣೆಗಳನ್ನು ಸಹ ಸಮರ್ಥವಾಗಿ ಎದುರಿಸಬೇಕಾದ ಜರೂರಿದೆ. ಇದು ಸಾಧ್ಯವಾಗಬೇಕೆಂದರೆ ಡಿ ಕೆ ಶಿವಕುಮಾರ್‌ ಅವರಂತೆ ಸಂಪನ್ಮೂಲ ನಿರ್ವಹಣೆ, ಚುನಾವಣಾ ನಿರ್ವಹಣೆಗಳನ್ನು ಮಾಡುವ ನಾಯಕರ ಅಗತ್ಯವೂ ಅದಕ್ಕೆ ಹಿಂದೆಂದಿಗಿಂತ ಹೆಚ್ಚು ಬೇಕು. ಇದೇ ವೇಳೆ, ರಾಜ್ಯ ರಾಜಕಾರಣದಲ್ಲಿ ತನಗೆ ಯಶಸ್ಸು ತಂದ ಅಹಿಂದ ಸಮೀಕರಣ ಹಾಗೂ ಗ್ಯಾರಂಟಿಗಳಿಗೆ ಚ್ಯುತಿ ಬರದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯೂ ಇದೆ. ಈ ಎಲ್ಲವನ್ನೂ ಸಾಧಿಸುವ ಹಗ್ಗದ ಮೇಲಿನ ಸಮತೋಲಿತ ನಡಿಗೆಯ ಬಗ್ಗೆ ಸದ್ಯ ಅದರ ಗಮನವಿದೆ.

ಹಾಗಾಗಿ, ರಾಜ್ಯದಲ್ಲಿ ಪಕ್ಷದೊಳಗೆ ನಡೆಯುತ್ತಿರುವ ಬೆಳವಣಿಗೆಗಳೇನೇ ಇದ್ದರೂ ಅದನ್ನು ಪರಿಹರಿಸುವ ರೀತಿ ಹೈಕಮಾಂಡ್‌ನ ಜಾಣ್ಮೆ, ದೂರದೃಷ್ಟಿಗೆ ಕನ್ನಡಿ ಹಿಡಿಯಲಿದೆ. 

ಇದನ್ನೂ ಓದಿ
ರಾಯಭಾರ | ಸೌಜನ್ಯ ಹೋರಾಟ; ಸದ್ದು ಸಾಕೇ? ರೂಪುರೇಷೆ, ಆತ್ಮಾವಲೋಕನ ಬೇಡವೇ?
ರಾಯಭಾರ | ಗ್ಯಾರಂಟಿ ನೊಗ ಹೊತ್ತ ಸರ್ಕಾರವನ್ನು ಪೇಚಿಗೆ ಸಿಲುಕಿಸುವುದಕ್ಕೂ ಮುನ್ನ ಈ ಬಗ್ಗೆ ಯೋಚಿಸಿ…

?s=150&d=mp&r=g
ನಿಶಾನ್‌ ರಾಜ್‌
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X