“ದಾವಣಗೆರೆ ಜಿಲ್ಲೆಯ ನ್ಯಾಮತಿಯ ಎಸ್ ಬಿ ಐ ಬ್ಯಾಂಕ್ ನಲ್ಲಿ 2024ರ ಅಕ್ಟೋಬರ್ 28ರಂದು ನಡೆದಿದ್ದ ದರೋಡೆ ಪ್ರಕರಣದಲ್ಲಿ 17.01 ಕೆಜಿಯಷ್ಟು ಬಂಗಾರದ ಆಭರಣಗಳನ್ನು ದರೋಡೆ ಮಾಡಲಾಗಿತ್ತು. ತನಿಖೆ ನಡೆಸಿರುವ ಪೊಲೀಸರು ಆರು ಜನ ಆರೋಪಿಗಳನ್ನು ಬಂಧಿಸಿ, 17.01 ಕೆಜಿ ತೂಕದ ಬಂಗಾರ ಆಭರಣಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬ್ಯಾಂಕಿನವರು ಸಾಲ ನಿರಾಕರಿಸಿದ್ದಕ್ಕೆ ಸಿಟ್ಟಾಗಿ ದ್ವೇಷದಿಂದ ಸಹಚರರೊಂದಿಗೆ ಸೇರಿ ಬ್ಯಾಂಕನ್ನೇ ದರೋಡೆ ಮಾಡಿದ್ದಾನೆ” ಎಂದು ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕ ಡಾ.ಬಿ.ಆರ್.ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ.

ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ಸಭಾಂಗಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಟಿ ಯಲ್ಲಿ ಮಾತನಾಡಿದ ಅವರು, “ಬಂಧಿತರನ್ನು ತಮಿಳುನಾಡು,ಮಧುರೈ ಮೂಲದ ವಿಜಯಕುಮಾರ್ ತಂದೆ ರಾಜಪ್ಪ (30), ಅಜಯಕುಮಾರ್ ತಂದೆ ರಾಜಪ್ಪ, (28) ಇಬ್ಬರೂ ಸಹೋದರರರಾಗಿದ್ದು, ಇತರರು ನ್ಯಾಮತಿಯ ಅಭಿಷೇಕ ತಂದೆ ರಾಮಪ್ಪ (23), ಚಂದ್ರು ತಂದೆ ಪರಶುರಾಮಪ್ಪ (23), ಮಂಜುನಾಥ್ ತಂದೆ ನಿಂಗಪ್ಪ (32), ಪರಮಾನಂದ ತಂದೆ ಚಿನ್ನಪ್ಪ (30) ಇವರನ್ನು ಬಂಧಿಸಿ 17.01 ಕೆಜಿ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ” ಎಂದು ಮಾಹಿತಿ ನೀಡಿದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಹಬ್ಬಕ್ಕೆ ಗ್ರಾಮ ಸ್ವಚ್ಛಗೊಳಿಸದ ಬಂಡ ಅಧಿಕಾರಿಗಳು, ರೊಚ್ಚಿಗೆದ್ದ ವೃದ್ಧನಿಂದ ಚರಂಡಿ ಸ್ವಚ್ಛತೆ.
“ಬೇಕರಿ ಇಟ್ಟುಕೊಂಡಿದ್ದ ಮೊದಲ ಆರೋಪಿ ವಿಜಯ್ ಕುಮಾರ ವ್ಯಾಪಾರದ ಅಭಿವೃದ್ಧಿಗಾಗಿ ನ್ಯಾಮತಿಯ ಎಸ್‌ಬಿಐ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದು, ಸಿಬಿಲ್ ಸ್ಕೋರ್ ಸರಿಯಾಗಿ ಇಲ್ಲದಿದ್ದರಿಂದ ಅವನ ಅರ್ಜಿ ತಿರಸ್ಕೃತಗೊಂಡಿತ್ತು. ನಂತರ ಅವನು ತಮ್ಮ ಸಂಬಂಧಿಕರ ಹೆಸರಿನಲ್ಲಿ ಸಾಲಕ್ಕಾಗಿ ಮತ್ತೆ ಅದೇ ಎಸ್ ಬಿ ಐ ನ್ಯಾಮತಿ ಬ್ರಾಂಚ್‌ನಲ್ಲಿ ಅರ್ಜಿ ಸಲ್ಲಿಸಿಕೊಳ್ಳುತ್ತಾನೆ. ಆಗಲು ಸಹ ಸದರಿ ಅರ್ಜಿಗಳು ತಿರಸ್ಕೃತಗೊಳ್ಳುತ್ತವೆ. ಇದರಿಂದಾಗಿ ಬ್ಯಾಂಕಿನ ಮೇಲೆ ದ್ವೇಷ ಇಟ್ಟು ಕೊಂಡು ಯೂಟ್ಯೂಬ್ ನಲ್ಲಿ ನೋಡಿಕೊಂಡು ಇತರರ ಜತೆ ಸೇರಿ ಬ್ಯಾಂಕ್ ದರೋಡೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ” ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಕುಮಾರ್ ಸಂತೋಷ್, ಇತರ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.