ಕೇಂದ್ರ ಸರ್ಕಾರವು ಯುಎಸ್, ಯುರೋಪಿಯನ್ ಯೂನಿಯನ್ ಮತ್ತು ನ್ಯೂಜಿಲೆಂಡ್ ಕೃಷಿಯಲ್ಲಿ ಮುಕ್ತ ವ್ಯಾಪಾರ ಒಪ್ಪಂದಗಳೊಂದಿಗೆ ಮಾತುಕತೆ ನಡೆಸುತ್ತಿರುವುದನ್ನು ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕ ಕೊಪ್ಪಳ ಜಿಲ್ಲಾ ಸಮನ್ವಯ ಸಮಿತಿಯಿಂದ ಅಪರ ಜಿಲ್ಲಾಧಿಕಾರಿ ಮೂಲಕ ರಾಷ್ಟಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸಿದರು.
“ಪಂಜಾಬಿನಲ್ಲಿ ರೈತರ ಮೇಲೆ ನಡೆಸುತ್ತಿರುವ ದೌರ್ಜನ್ಯ ಖಂಡನೀಯ. ಕೇಂದ್ರ ಸರ್ಕಾರವು 2021ರ ಡಿಸೆಂಬರ್ 9ರಂದು ರೈತರಿಗೆ ನೀಡಿದ್ದ ಲಿಖಿತ ಭರವಸೆಗಳನ್ನು ಮೊಂಡುತನದಿಂದ ನಿರಾಕರಿಸಿದೆ. ಶೇ.87ರಷ್ಟು ಸಣ್ಣ ಮತ್ತು ಅತಿಸಣ್ಣ ಮತ್ತು ಕೃಷಿಯ ಮೇಲೆ ಹೇಗಾದರೂ ಕೇಂದ್ರ ಸರ್ಕಾರವು ಕೃಷಿ ಮಾರುಕಟ್ಟೆಯ ಹಾನಿಕಾರಕ ರಾಷ್ಟ್ರೀಯ ನೀತಿ ಚೌಕಟ್ಟನ್ನು ಜಾರಿಗೆ ತರಲು ರಾಜ್ಯ ಸರ್ಕಾರಗಳಿಗೆ ಪ್ರಸ್ತಾಪಿಸಿದೆ. ಅಸ್ತಿತ್ವದಲ್ಲಿರುವ ಕೃಷಿ ಮಾರುಕಟ್ಟೆಗಳನ್ನು ಸಂಪೂರ್ಣವಾಗಿ ದೊಡ್ಡ ಕಾರ್ಪೊರೇಟ್‌ಗಳಿಗೆ ಹಸ್ತಾಂತರಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ಇದು ರೈತರ ಸ್ವಾತಂತ್ರ್ಯವನ್ನು ಮತ್ತಷ್ಟು ಹಾಳುಮಾಡುತ್ತದೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
“ಕೃಷಿಯಲ್ಲಿ ಮುಕ್ತ ವ್ಯಾಪಾರ ಒಪ್ಪಂದಗಳು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಹಾನಿಕಾರಕವೆಂದು ಸಾಬೀತುಪಡಿಸುವ ಭಾರತೀಯ ಮಾರುಕಟ್ಟೆಗಳಿಗೆ ಈ ದೇಶಗಳಿಂದ ರಫ್ತು ಹೆಚ್ಚಿಸುವುದಾಗಿದೆ. ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಅಮೆರಿಕದ ನಿಯೋಗ ಭಾರತಕ್ಕೆ ಭೇಟಿ ನೀಡುತ್ತಿದೆ. ಈ ಒಪ್ಪಂದಗಳು ಆಹಾರ ಧಾನ್ಯಗಳು, ಬೇಳೆಕಾಳುಗಳು, ಎಣ್ಣೆಕಾಳುಗಳು, ಡೈರಿ, ಕೋಳಿ, ಹಣ್ಣು ಮತ್ತು ಇತರ ಕೃಷಿ ಉತ್ಪನ್ನಗಳ ಆಮದು ಹೆಚ್ಚಳಕ್ಕೆ ಕಾರಣವಾಗುತ್ತವೆಂಬ ಗಂಭೀರ ಆತಂಕವಿದೆ. ಇದರಿಂದ ರೈತರು ಹಾಗೂ ಕೃಷಿ ಅವಲಂಬಿಸಿರುವ ಎಲ್ಲ ಸಣ್ಣ ಉದ್ದಿಮೆಗಳು ಹಾಳಾಗುತ್ತವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಇಸ್ಪೀಟ್ ಅಡ್ಡಾಗಳ ಮೇಲೆ ಪೊಲೀಸರ ದಾಳಿ; 9 ಮಂದಿ ಬಂಧನ
“ವಿರೋಧಿ ಹಾಗೂ ಕಾರ್ಪೊರೇಟ್ ಪರ ನೀತಿಗಳಿಂದಾಗಿ ಇಂದು ರೈತರ ಬದುಕು ಬೀದಿಪಾಲಾಗುತ್ತಿದೆ. ಇದರ ವಿರುದ್ಧ ನ್ಯಾಯಯುತವಾಗಿ ಹೋರಾಟ ಮಾಡುವುದು ರೈತರ ಹಕ್ಕು. ಅದನ್ನು ದಮನಕಾರಿ ನೀತಿಗಳಿಂದ ಹತ್ತಿಕ್ಕುವುದು ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಸಮನ್ವಯ ಸಮಿತಿ ಮುಖಂಡರಾದ ನಜೀರ್‌ಸಾಬ್ ಮೂಲಿಮನಿ, ಹನುಮಂತಪ್ಪ ಹೊಳೆಯಾಚೆ, ಕೆಬಿ ಗೋನಾಳ, ಶರಣು ಗಡ್ಡಿ, ಶ್ರೀನಿವಾಸ ಬೋವಿ, ಮುದುಕಪ್ಪ ಹೊಸಮನಿ, ಮೈಲಾರಿ ಹೊಸಳ್ಳಿ, ಯಂಕಪ್ಪ ನಾಯಕ, ಕುಮಾರ್ ರಾಥೋಡ್, ಸುರೇಶ ಜಬ್ಬಲಗುಡ್ಡ ಸೇರಿದಂತೆ ಇತರರು ಇದ್ದರು.