ಕರ್ನಾಟಕದ ನಕ್ಸಲರನ್ನು ಮುಖ್ಯವಾಹಿನಿಗೆ ತರುವಲ್ಲಿ ಮತ್ತು ರಾಜ್ಯವನ್ನು ‘ನಕ್ಸಲ್ ಮುಕ್ತ’ವನ್ನಾಗಿಸಲು ಮಹತ್ತರ ಪಾತ್ರ ವಹಿಸಿದ ಕರ್ನಾಟಕದ ನಕ್ಸಲ್ ನಿಗ್ರಹ ಪಡೆ ಮತ್ತು ಗುಪ್ತವಾರ್ತೆ ಘಟಕದ 22 ಪೊಲೀಸರಿಗೆ ಮುಖ್ಯಮಂತ್ರಿಗಳ ಪದಕವನ್ನು ಘೋಷಿಸಲಾಗಿದೆ. ಇವರೆಲ್ಲರನ್ನೂ ಮತ್ತು ಪ್ರಧಾನವಾಗಿ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುನ್ನಡೆಸಿದ ರಾಜ್ಯ ಗುಪ್ತವಾರ್ತೆಯ ನಿರ್ದೇಶಕರಾದ ಹೇಮಂತ್ ಎಂ ನಿಂಬಾಳ್ಕರ್ ಹಾಗೂ ಉಪನಿರ್ದೇಶಕರಾದ ಹರಿರಾಮ್ ಶಂಕರ್ ಅವರನ್ನು, ʼಶಾಂತಿಗಾಗಿ ನಾಗರಿಕರ ವೇದಿಕೆʼ ಅಭಿನಂದಿಸಿದೆ.
ಇವರಿಬ್ಬರೂ ಈ ಕಾರ್ಯಾಚರಣೆಯ ಪ್ರಾರಂಭದಿಂದಲೂ ಹೆಚ್ಚುವರಿ ಅಸಕ್ತಿ ವಹಿಸಿ, ನಮ್ಮ ವೇದಿಕೆ ಜತೆ ಸಹಕರಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ನಕ್ಸಲರನ್ನು ಘನತೆಯಿಂದ ನಡೆಸಿಕೊಳ್ಳುವ ಕುರಿತು, ಅವರನ್ನು ಕಾಡಿನಿಂದ ಮಾತ್ರವಲ್ಲ ಜೈಲಿನಿಂದ ಹೊರತರುವಲ್ಲಿ ವಹಿಸಬೇಕಾದ ಮುತುವರ್ಜಿಗಳ ಕುರಿತು ಹಾಗೂ ಮುಖ್ಯವಾಹಿನಿಗೆ ಬಂದ ಮೇಲೆ ನೀಡಬೇಕಾದ ಅಗತ್ಯ ನೆರವಿನ ಕುರಿತು ನಾವು ಮುಂದಿಟ್ಟ ಎಲ್ಲಾ ಬೇಡಿಕೆಗಳಿಗಳನ್ನೂ ಪೂರೈಸುವ ಭರವಸೆ ನೀಡಿದ್ದರಿಂದಲೇ ಈ ಕೆಲಸವು ಸಾಂಗವಾಗಿ ನೆರವೇರಲು ಸಹಾಯವಾಯಿತು. ಇದರಲ್ಲಿ ನಕ್ಸಲ್ ಪುನರ್‌ವಸತಿ ಸಮಿತಿಯ ಸದಸ್ಯರು ನೀಡಿದ ಸಹಕಾರವನ್ನೂ ಕೂಡ ನಮ್ಮ ವೇದಿಕೆ ಕೃತಜ್ಞತೆಯಿಂದ ಸ್ಮರಿಸುತ್ತದೆ ಎಂದು ಶಾಂತಿಗಾಗಿ ನಾಗರಿಕರ ವೇದಿಕೆಯ ಪರವಾಗಿ ತಾರಾರಾವ್, ನಗರಗೆರೆ ರಮೇಶ, ವಿ. ಎಸ್. ಶ್ರೀಧರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಶಾಂತಿಗಾಗಿ ನಾಗರಿಕರ ವೇದಿಕ ಬಹಳ ಕಾಲದಿಂದಲೂ “ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕೇ ಹೊರತು ಬಂದೂಕಿನಿಂದ ಅಲ್ಲ” ಎಂದು ನಕ್ಸಲರಿಗೂ ಮತ್ತು ಪ್ರಭುತ್ವಕ್ಕೂ ಮನವಿಮಾಡಿಕೊಂಡೇ ಬಂದಿದೆ. ಇಬ್ಬರೂ ಈ ಮನವಿಯ ಔಚಿತ್ಯವನ್ನು ಮನಗಂಡು ಮುಂದೆ ಬಂದ್ದರಿಂದಲೇ ಈ ಕಾರ್ಯವು ಸಫಲವಾಯಿತು. ಅಲ್ಲದೆ ಸರ್ಕಾರವು ನಾಗರಿಕರ ಜತೆ ನಡೆಸುವ ಅನುಸಂಧಾನಗಳು ಪ್ರಜಾತಂತ್ರದ ಹಿರಿಮೆಯನ್ನು ಎತ್ತಿಹಿಡಿಯುತ್ತವೆ ಎಂಬುದನ್ನು ಈ ಘಟನೆ ಎತ್ತಿತೋರಿಸುತ್ತದೆ. ಇದನ್ನು ಸ್ವಾಗತಿಸುತ್ತಾ, ಇದಕ್ಕೆ ಕಾರಣರಾದ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳು ಹಾಗೂ ಪೊಲೀಸು ಅಧಿಕಾರಿಗಳನ್ನು ನಾವು ಮತ್ತೊಮ್ಮೆ ಅಭಿನಂದಿಸುತ್ತೇವೆ.
ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವುದು ಎಂದರೆ ಅವರನ್ನು ಕಾಡಿನಿಂದ ಜೈಲಿಗೆ ಕರೆತರುವುಷ್ಟೇ ಅಲ್ಲ, ಸಮಾಜದಲ್ಲಿ ಅವರು ಗೌರವಾನ್ವಿತವಾಗಿ ಬದುಕಲು ಬೇಕಾದ ಎಲ್ಲ ಸೌಕರ್ಯವನ್ನೂ ಒದಗಿಸಿ ನಾಡಿಗೆ ಕರೆತರುವುದು ಕೂಡ. ಇದು ಪ್ರಜಾತಂತ್ರ ಸರ್ಕಾರದ ಕರ್ತವ್ಯ ಹಾಗೂ ಅದು ಜಾರಿಯಾಗುವ ಹಾಗೆ ನೋಡಿಕೊಳ್ಳುವುದು ನಾಗರಿಕ ಸಮಾಜದ ಜವಾಬ್ದಾರಿ ಎಂದು ನಾವು ಭಾವಿಸಿದ್ದೇವೆ. ಈ ನಿಟ್ಟಿನಲ್ಲಿ ಸರ್ಕಾರ ಕೆಲವು ಸ್ವಾಗತಾರ್ಹ ಹೆಜ್ಜೆಗಳನ್ನು ಇಟ್ಟಿದೆ. ಉದಾಹರಣೆಗೆ ಈ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಆಲಿಸಲೆಂದೇ ಒಂದು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿದೆ; ಆರ್ಥಿಕ ನೆರವನ್ನು ಕೂಡಲೇ ಬಿಡುಗಡೆ ಮಾಡಿದೆ. ಈ ಹಿಂದೆ ಬಂದಿದ್ದವರ ಸರಿಯಾದ ಪುನರ್ವಸತಿಗೆ ಬೇಕಾದ ಕ್ರಮವಹಿಸಲು ಮುಂದಾಗಿದೆ. ಇದು ಸಹ ಅಭಿನಂದನಾರ್ಹ ವಿಚಾರ. ಆದರೂ ಇನ್ನೂ ಹಲವಾರು ಕೆಲಸಗಳು ಆಗಬೇಕಿದೆ. ವಿಶೇಷ ನ್ಯಾಯಾಲಯ ಕೂಡಲೇ ಕಾರ್ಯರೂಪಕ್ಕೆ ಬಂದು, ಕನಿಷ್ಟ ಎಲ್ಲರೂ ಬೇಲ್ ಮೇಲೆ ಹೊರಬರುವಂತಾಗಬೇಕು, ಮತ್ತು ಅಗತ್ಯ ಕಾನೂನು ಮತ್ತು ವೈದ್ಯಕೀಯ ನೆರವು ಒದಗಿಸಬೇಕು. ಸಾರಾಂಶದಲ್ಲಿ ಹೇಳಬೇಕೆಂದರೆ ಆಗಿರುವ ಕೆಲಸ ಅಭಿನಂದನಾರ್ಹವಾದದ್ದೇ ಆದರೂ ಆಗಬೇಕಿರುವ ಕೆಲಸಗಳು ಕೂಡ ಸಾಕಷ್ಟು ಇವೆ. ಇವುಗಳನ್ನು ಕೂಡ ಸರ್ಕಾರ ಮತ್ತು ಪೊಲೀಸು ಇಲಾಖೆ ತುರ್ತಿನ ಮೇಲೆ ಕೈಗೆತ್ತಿ ಕೊಳ್ಳುತ್ತದೆ ಎಂಬ ಭರವಸೆ ನಮಗಿದೆ.
ಈ ಕಾರ್ಯಾಚರಣೆ ಮೂಲಕ ಕರ್ನಾಟಕ ರಾಜ್ಯವು ಇಡೀ ದೇಶಕ್ಕೆ ಒಂದು ಶಾಂತಿಯುತ ಹಾಗೂ ಪ್ರಜಾತಾಂತ್ರಿಕ ಮಾದರಿಯನ್ನು ಕಟ್ಟಿಕೊಟ್ಟಿದೆ. ಜನರ ಸಮಸ್ಯೆಗಳನ್ನು ಬಗೆಹರಿಸದೆ, ಅವರ ಬದಕಿನ ಹಕ್ಕನ್ನು ಕಸಿಯಲು ಹೋದರೆ (ನ್ಯಾಷನಲ್ ಪಾರ್ಕ್ ವಿಚಾರದಲ್ಲಿ ಆದಂತೆ) ಜನರು ಸಶಸ್ತ್ರ ಸಂಘರ್ಷದಂತಹ ತೀಕ್ಷ್ಣ ರೂಪಗಳ ಮೊರೆಹೋಗುತ್ತಾರೆ. ಈ ರೀತಿಯ ವಿದ್ಯಮಾನಗಳು ಮತ್ತೆ ಮರುಕಳಿಸಬಾರದೆಂದರೆ ಜನಪರ ಎಂದು ಕರೆದುಕೊಳ್ಳುವ ಸರ್ಕಾರಗಳು ಜನರನ್ನು ಮೂಲೆಗೊತ್ತದೆ, ಅವರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಿಕೊಳ್ಳಲು ಮುಂದಾಗಬೇಕು ಎಂಬ ಪಾಠವನ್ನೂ ಈ ಪ್ರಕ್ರಿಯೆ ನೀಡಿದೆ. ಸರ್ಕಾರ ಮತ್ತು ಪೊಲೀಸ್ ಯಂತ್ರಾಂಗ ಈ ಪಾಠದತ್ತವೂ ಗಮನಹರಿಸಬೇಕು ಮತ್ತು ನಕ್ಸಲ್ ಪ್ರಭಾವಿತ ಪ್ರದೇಶದ ಅಭಿವೃದ್ಧಿಗೆ ವಿಶೇಷ ಗಮನ ನೀಡಬೇಕು ಎಂದು ಒತ್ತಾಯಿಸುತ್ತೇವೆ” ಎಂದು ತಿಳಿಸಿದ್ದಾರೆ.