ಸರ್ಕಾರವು ವಕ್ಫ್ ಮಸೂದೆ ತಿದ್ದುಪಡಿಗಳನ್ನು ಅಂಗೀಕಾರಕ್ಕೆ ಮುಂದಾಗುವ ಮುನ್ನ ಕಾಂಗ್ರೆಸ್ ಮಂಗಳವಾರ ಲೋಕಸಭೆಯಲ್ಲಿನ ತನ್ನ ಎಲ್ಲಾ ಸಂಸದರಿಗೆ ವಿಪ್ ಜಾರಿ ಮಾಡಿದೆ. ಮುಂದಿನ ಮೂರು ದಿನಗಳವರೆಗೆ ಸದನದಲ್ಲಿ ಕಡ್ಡಾಯವಾಗಿ ಸದನದಲ್ಲಿ ಹಾಜರಿರಬೇಕು ಎಂದು ಕಾಂಗ್ರೆಸ್ ತನ್ನ ಸಂಸದರಿಗೆ ತಿಳಿಸಿದೆ.
ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಬುಧವಾರ ಲೋಕಸಭೆಯಲ್ಲಿ ಚರ್ಚೆ ಮತ್ತು ಅಂಗೀಕಾರಕ್ಕಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇದಾದ ಬೆನ್ನಲ್ಲೇ ಕಾಂಗ್ರೆಸ್ ಮೂರು ದಿನಗಳ ವಿಪ್ ಅನ್ನು ಜಾರಿಗೊಳಿಸಿದೆ.
ಇದನ್ನು ಓದಿದ್ದೀರಾ? ವಕ್ಫ್ ತಿದ್ದುಪಡಿ ಮಸೂದೆಗೆ ನಾಯ್ಡು, ನಿತೀಶ್ ಬೆಂಬಲ; ಮುಸ್ಲಿಂ ಸಮುದಾಯ ಶಾಶ್ವತವಾಗಿ ದೂರ!
ವಕ್ಫ್ ಮಸೂದೆಯನ್ನು ಜಾರಿಗೆ ತರಲು ದೃಢನಿಶ್ಚಯ ಹೊಂದಿರುವ ಸರ್ಕಾರ ಮತ್ತು ಇದನ್ನು ಸಂವಿಧಾನಬಾಹಿರ ಎಂದು ಖಂಡಿಸುತ್ತಿರುವ ವಿರೋಧ ಪಕ್ಷಗಳ ನಡುವೆ ತೀವ್ರ ವಾಗ್ವಾದ, ಚರ್ಚೆ ನಡೆಯುವ ಸಾಧ್ಯತೆಯಿದೆ.
ಸ್ಪೀಕರ್ ಓಂ ಬಿರ್ಲಾ ಅಧ್ಯಕ್ಷತೆಯಲ್ಲಿ ಎಲ್ಲಾ ಪ್ರಮುಖ ಪಕ್ಷಗಳ ನಾಯಕರನ್ನು ಒಳಗೊಂಡ ಲೋಕಸಭೆಯ ವ್ಯವಹಾರ ಸಲಹಾ ಸಮಿತಿ (ಬಿಎಸಿ) ಎಂಟು ಗಂಟೆಗಳ ಚರ್ಚೆಗೆ ಒಪ್ಪಿಕೊಂಡಿದೆ ಎಂದು ಅಲ್ಪಸಂಖ್ಯಾತರು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಪರ ಸಂಸದರು ಅಧಿಕವಾಗಿರುವ ಕಾರಣ ಕೇಂದ್ರವೇ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಲೋಕಸಭೆಯಲ್ಲಿ 542 ಸದಸ್ಯರ ಪೈಕಿ 293 ಸಂಸದರು ಎನ್‌ಡಿಎ ಒಕ್ಕೂಟಕ್ಕೆ ಸೇರಿದವರಾಗಿದ್ದಾರೆ.
