ರಾಜ್ಯದಲ್ಲಿ ಶಾಸಕರಿಗೆ, ಸಚಿವರಿಗೆ ವೇತನ ಹೆಚ್ಚಳದ ಸಿಹಿಯನ್ನು ನೀಡಿ, ಜನರಿಗೆ ಮತ್ತೆ ಹಾಲಿನ ದರ ಮತ್ತು ವಿದ್ಯುತ್ ದರ ಏರಿಸಿ ಕಹಿಯನ್ನು ಉಣಬಡಿಸಿರುವ ಸರ್ಕಾರದ ನೀತಿಯನ್ನು ಖಂಡಿಸಿ ಧಾರವಾಡದ ವಿವೇಕಾನಂದ ವೃತ್ತದಲ್ಲಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ ಜಡಗಣ್ಣವರ ಮಾತನಾಡಿ, ಹೈನುಗಾರರ ಉತ್ಪಾದನಾ ವೆಚ್ಚ ಹೆಚ್ಚಾಗಿದೆ ಎಂಬುದು ನಿಜವೇ. ಇದನ್ನು ಕಡಿಮೆ ಮಾಡಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಪಶು ಆಹಾರ, ಮೇವು, ಪಶು ವೈದ್ಯಕೀಯ ವೆಚ್ಚ ಮೊದಲಾದ ಹೈನುಗಾರಿಕೆಯ ಒಳಸುರಿಗಳ ವೆಚ್ಚವನ್ನು ಸರ್ಕಾರ ಕಡಿತ ಮಾಡಬೇಕಿತ್ತು; ಬದಲಿಗೆ ಪ್ರತಿಬಾರಿಯೂ ವೆಚ್ಚದ ಹೊರೆಯನ್ನು ಸಾಮಾನ್ಯ ಗ್ರಾಹಕರ ಮೇಲೆ ಹೇರುವುದು ಜನಪರ ಸರ್ಕಾರದ ನೀತಿಯೇ ಎಂದು ಪ್ರಶ್ನಿಸಿದರು.
ಇನ್ನು ವಿದ್ಯುತ್ ದರವನ್ನು ಮತ್ತೆ ಪರಿಷ್ಕರಣೆ ಮಾಡಲಾಗಿದೆ. ಸಧ್ಯಕ್ಕೆ ಗೃಹಜ್ಯೋತಿ ಯೋಜನೆಯ ಕಾರಣಕ್ಕೆ ಇದರಿಂದ ಬಹುಪಾಲು ಗೃಹ ಬಳಕೆದಾರರಿಗೆ ಸಮಸ್ಯೆ ಆಗದೇ ಇರಬಹುದು. ಆದರೆ ವಾಣಿಜ್ಯ ಮತ್ತು ಸಣ್ಣ ಕೈಗಾರಿಕೆಗಳಿಗೆ ಇದು ವಿದ್ಯುತ್ ದುಬಾರಿ ಮತ್ತು ಅಂತಿಮವಾಗಿ ಉತ್ಪನ್ನಗಳ ದರ ಹೆಚ್ಚಳ ಮಾಡಿ ಇದರಿಂದ ಬಡ, ಮಧ್ಯಮ ವರ್ಗದ ಜನರ ಮೇಲೆಯೇ ಹೊರೆ ಬೀಳಲಿದೆ ಎಂದರು.
ಕೆಎಂಎಫ್ ಮತ್ತು ವಿದ್ಯುತ್ ಕಂಪನಿಗಳ ದಕ್ಷತೆಯನ್ನು ಹೆಚ್ಚಿಸಿ, ಸೋರಿಕೆ, ಭ್ರಷ್ಟಾಚಾರ, ದುಂದುವೆಚ್ಚ ನಿಯಂತ್ರಣ ಮಾಡುವ ಕಡೆಗೆ ಸರ್ಕಾರ ಗಮನ ಹರಿಸದೇ ಇರುವುದು ಖಂಡನೀಯ. ಅಷ್ಟೇ ಅಲ್ಲದೆ ರಾಜ್ಯದಲ್ಲಿ ಸರ್ಕಾರಿ ನೌಕರಿಗೆ ಹಾಗೂ ಇತರ ಕಾರ್ಮಿಕರಿಗೆ ವೇತನ ಹೆಚ್ಚಳ ಮಾಡದೇ, ಕೇವಲ ಸಚಿವರು, ಶಾಸಕರ ವೇತನವನ್ನು ಶೇಕಡ 100 ರಷ್ಟು ಹೆಚ್ಚಳ ಮಾಡಿ ಅದರ ಹೊರೆಯನ್ನು ಬಡ, ಮಧ್ಯಮ ವರ್ಗದ ಜನಗಳ ಮೇಲೆ ಹೇರಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ವಿರುದ್ಧದ ಹೋರಾಟದಲ್ಲಿ ಬೆಲೆ ಏರಿಕೆ ಒಂದು ಪ್ರಮುಖ ಅಸ್ತ್ರವಾಗಿತ್ತು ಎಂಬುದನ್ನು ಕಾಂಗ್ರೆಸ್ ಪಕ್ಷ ಮರೆತಿದೆ. ಜನತೆ ಇದನ್ನು ಒಪ್ಪುವುದಿಲ್ಲ ಎಂಬುದನ್ನು ಅರಿತು ಈ ದರ ಏರಿಕೆಗಳನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ಅಧ್ಯಕ್ಷತೆಯನ್ನು ಜಿಲ್ಲಾ ಸಮಿತಿ ಸದಸ್ಯ ದೀಪಾ ಧಾರವಾಡ ವಹಿಸಿದ್ದರು. ಈ ಸಂದರ್ಭದಲ್ಲಿ ಭವಾನಿಶಂಕರ ಗೌಡರ್, ಶರಣು ಗೋನವಾರ, ಶಶಿಕಲಾ ಮೇಟಿ, ದೇವಮ್ಮ ದೇವತಕಲ್, ರಣಜಿತ್ ದೂಪದ್, ಪ್ರೀತಿ ಸಿಂಗಾಡಿ, ಸಿಂಧು ಕೌದಿ ಮುಂತಾದವರು ಇದ್ದರು.