ನನ್ನ ಪುತ್ರ ಕಾಂತೇಶ ಅವರು ಹಾವೇರಿಯಿಂದ ಲೋಕಸಭೆಗೆ ಬಿಜೆಪಿಯಿಂದ ಸ್ಪರ್ಧಿಸಲು ಅಪೇಕ್ಷೆ ಪಟ್ಟಿರುವುದು ನಿಜ. ಹಾಲಿ ಸಂಸದ ಶಿವಕುಮಾರ್ ಉದಾಸಿ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ. ಟಿಕೆಟ್ ನೀಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಹೇಳಿದರು.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂತೇಶ ಹಾವೇರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎನ್ನುತ್ತಿದ್ದಾನೆ. ಈ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಿಲ್ಲ. ಆರ್ಥಿಕವಾಗಿ ಸರ್ಕಾರ ದಿವಾಳಿಯಾಗಿದೆ. ಐದು ಗ್ಯಾರಂಟಿ ಯೋಜನೆಗಳಿಗೆ ಎಲ್ಲಿಂದ ಹಣ ಜೋಡಿಸುತ್ತಾರೆ ಎಂಬುದನ್ನು ಬಹಿರಂಗಪಡಿಸಬೇಕು. ಈ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ನೂತನ ಶಾಸಕರಿಗೆ ರವಿಶಂಕರ ಗುರೂಜಿ ಮತ್ತು ಗುರುರಾಜ ಕರಜಗಿ ಅವರಿಂದ ತರಬೇತಿ ನೀಡುವ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ನವರು ಮುಸ್ಲಿಮರನ್ನು ಸಂತೃಪ್ತಿಗೊಳಿಸುವುದಕ್ಕಾಗಿ ಹಿಂದೂ ಧರ್ಮ ಮತ್ತು ಸಂಸ್ಕೃತಿ ಪ್ರತಿಪಾದಕರನ್ನು ವಿರೋಧಿಸುತ್ತಾರೆ. ಮುಸ್ಲಿಂ ರಾಷ್ಟ್ರಗಳಲ್ಲಿ ಮಾನವೀಯತೆಯ ಬೋಧನೆ ಮಾಡಿದ ರವಿಶಂಕರ್ ಗುರೂಜಿ ಮತ್ತು ಶಿಕ್ಷಣ ತಜ್ಞ ಗುರುರಾಜ ಕರಜಗಿ ಅವರನ್ನು ವಿರೋಧಿಸಿದ್ದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ; ಬಿಎಸ್‍ವೈ ಸಲಹೆ
ಈ ವೇಳೆ ಮಾಜಿ ಶಾಸಕರಾದ ಶಿವರಾಜ ಸಜ್ಜನರ, ವಿರೂಪಾಕ್ಷಪ್ಪ ಬಳ್ಳಾರಿ, ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧರಾಜ ಕಲಕೋಟಿ, ಗವಿಸಿದ್ದಪ್ಪ ದ್ಯಾಮಣ್ಣವರ, ಬೋಜರಾಜ ಕರೂದಿ, ಪಾಲಾಕ್ಷಗೌಡ ಪಾಟೀಲ, ಪ್ರಭು ಹಿಟ್ನಳ್ಳಿ, ಕಿರಣ್ ಕೋಣನವರ್ ಇದ್ದರು.