- ಏಜನ್ಸಿಯವರಿಂದ ಸಮಯಕ್ಕೆ ಸರಿಯಾಗಿ ವೇತನ ಸಿಗುತ್ತಿಲ್ಲ
- ಹೆಚ್ವುವರಿ ಭತ್ಯೆಗಳು ವರ್ಷಗಳಿಂದ ಬಾಕಿ ಉಳಿದುಕೊಂಡಿದೆ
ಡಯಾಲಿಸಿಸ್ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಬಾಕಿ ವೇತನವನ್ನು ಎರಡು ವಾರದೊಳಗೆ ಪಾವತಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಡಯಾಲಿಸಿಸ್ ಸಿಬ್ಬಂದಿ ಪ್ರತಿನಿಧಿಗಳ ಸಮಸ್ಯೆಗಳನ್ನು ಆಲಿಸಿದ ಸಚಿವರು, ಸಮಸ್ಯೆಗಳನ್ನು ಒಂದೊಂದಾಗಿ ಬಗೆಹರಿಸುವುದಾಗಿ ಭರವಸೆ ನೀಡಿದರು.
ರಾಜ್ಯಾದ್ಯಂತ ಡಯಾಲಿಸಿಸ್ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಪ್ರತಿನಿಧಿಗಳು ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಏಜನ್ಸಿಯವರಿಂದ ಸಮಯಕ್ಕೆ ಸರಿಯಾಗಿ ವೇತನ ದೊರೆಯುತ್ತಿಲ್ಲ. ಅಲ್ಲದೇ ಹೆಚ್ವುವರಿ ಭತ್ಯೆಗಳು ವರ್ಷಗಳಿಂದ ಬಾಕಿ ಇದೆ ಎಂದು ವಿವರಿಸಿದರು.
ಇಲ್ಲಿಯವರೆಗೂ ಏಜನ್ಸಿಯವರಿಂದ ಪಿ.ಎಫ್ ಪಾವತಿಯಾಗಿಲ್ಲ. ಸಮಸ್ಯೆ ಹೀಗೆ ಮುಂದುವರಿದರೆ ಕಾರ್ಯ ಸ್ಥಗಿತಗೊಳಿಸಿ, ಪ್ರತಿಭಟನೆ ನಡೆಸಲು ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿರುವ 800 ಸಿಬ್ಬಂದಿ ನಿರ್ಧರಿಸಿದ್ದೇವೆ ಎಂದು ಮನವರಿಕೆ ಮಾಡಿದರು.
ಸಿಬ್ಬಂದಿಗಳ ಮನವೊಲಿಸುವಲ್ಲಿ ಯಶಸ್ವಿಯಾದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಡಯಾಲಿಸಿಸ್ ಕೇಂದ್ರಗಳಲ್ಲಿ ಕಾರ್ಯ ಸ್ಥಗಿತವಾಗಬಾರದು. ಏಜನ್ಸಿಯವರೊಂದಿಗೆ ಮಾತುಕತೆ ನಡೆಸಿ ಬಾಕಿ ವೇತನ ಪಾವತಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಆರೋಗ್ಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ ಎಂದರು.
ಏಜನ್ಸಿ ಗುತ್ತಿಗೆ ಅವಧಿ ಮುಗಿದಿರುವುದರಿಂದ ವೇತನ ಪಾವತಿಯಲ್ಲಿ ಸಮಸ್ಯೆಯಾಗಿದ್ದು, ಈಗಿರುವ ಸಂಜೀವಿನಿ ಏಜನ್ಸಿಯವರೊಂದಿಗೆ ಮಾತುಕತೆ ನಡೆಸಲಾಗಿದೆ. ಈ ಬಗ್ಗೆ ಸಿಎಂ ಜೊತೆ ಕೂಡ ಚರ್ಚೆ ನಡೆಸಿ, ಡಯಾಲಿಸಿಸ್ ಕೇಂದ್ರಗಳಲ್ಲಿ ಸಿಬ್ಬಂದಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ನನ್ನ ಪುತ್ರ ಲೋಕಸಭೆ ಟಿಕೆಟ್ ಆಕಾಂಕ್ಷಿ: ಕೆ ಎಸ್ ಈಶ್ವರಪ್ಪ
ಎರಡು ವಾರದೊಳಗೆ ಬಾಕಿ ಇರುವ ಭತ್ಯೆ ಪಾವತಿಗೆ ಕ್ರಮ ಕೈಗೊಳ್ಳಲು ಹೇಳಿದ್ದೇನೆ. ತಲಾ 2 ಸಾವಿರ ರೂಪಾಯಿಯಂತೆ ಡಿಸೆಂಬರ್ ವರೆಗಿನ ಭತ್ಯೆ ಕೊಡಿಸುವುದಾಗಿ ಸಿಬ್ಬಂದಿಗೆ ಭರವಸೆ ನೀಡಿದರು. ಅಲ್ಲದೇ ಮೇ ಮತ್ತು ಜೂನ್ ವೇತನ 15 ದಿನದೊಳಗೆ ಸಿಬ್ಬಂದಿಗಳಿಗೆ ಪಾವತಿಸುವುದಾಗಿ ತಿಳಿಸಿದರು.
ಏಜನ್ಸಿಯಿಂದ ಪಿಎಫ್ ಮತ್ತು ಇಎಸ್ ಐಪಿ ದೊರಕಿಸಿಕೊಡುವ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗಿದೆ. 15 ದಿನಗಳ ಬಳಿಕ ಮತ್ತೊಮ್ಮೆ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳೋಣ ಎಂದು ಸಚಿವ ಗುಂಡೂರಾವ್ ಸಿಬ್ಬಂದಿಗೆ ತಿಳಿಸಿದರು.
ಸಚಿವರ ಸಕಾರಾತ್ಮಕ ಸ್ಪಂದನೆಗೆ ಸಮಾಧಾನಗೊಂಡ ಡಯಾಲಿಸಿಸ್ ಕೇಂದ್ರಗಳ ಸಿಬ್ಬಂದಿ ಎಂದಿನಂತೆ ಕಾರ್ಯ ಮುಂದುವರಿಸಲು ನಿರ್ಧರಿಸಿದ್ದಾರೆ.