ವಚನಯಾನ | ಕರ್ಮ ಸಿದ್ಧಾಂತ ದಿಕ್ಕರಿಸಿದ ಶರಣರು

Date:

Advertisements

ಕರ್ಮ ಸಿದ್ಧಾಂತವನ್ನು ನಾನು ನಂಬುವುದಿಲ್ಲ. ಈ ಸಿದ್ಧಾಂತವೇ ಒಂದು ಟೊಳ್ಳು ಮತ್ತು ಅದರಲ್ಲಿ ಅನೇಕ ಅಡಚಣೆಗಳಿವೆ. ದಯಾನಿಧಿಯಾದ ದೇವ ನಿನ್ನಲ್ಲಿ ವಿಜ್ಞಾಪನೆ ಮಾಡಿಕೊಳ್ಳುತ್ತಿದ್ದೇನೆ. ನಿನ್ನ ಸೇವಕನ ಮಾತನ್ನು ಆಲಿಸು ಎಂದು ದೇವರನ್ನು ಬಸವಣ್ಣನವರು ಬಿನ್ನವಿಸುತ್ತಾರೆ.

ಭಾರತವನ್ನು ಶತಶತಮಾನಗಳಿಂದ ಹಿಂದುಳಿದ ದೇಶವಾಗಿ ಮಾರ್ಪಡಿಸಿದ್ದೆ ಇಲ್ಲಿ ಸನಾತನಿಗಳು ನೆಟ್ಟ ಕರ್ಮಸಿದ್ಧಾಂತವೆಂಬ ಪಾರ್ಥೇನಿಯಮ್ ಕಳೆ. ಆಡು ಭಾಷೆಯಲ್ಲಿ ಕರ್ಮವೆಂದರೆ ಕೆಲಸ, ಅಥವಾ ಮಾಡಿದ್ದು, ಮಾಡುವುದು ಎಂದರ್ಥ. ಸಿದ್ಧಾಂತವಾಗಿ ಕರ್ಮವೆಂದರೆ ಮನುಷ್ಯನ ಸುಖ-ದುಃಖಗಳಿಗೆ ಕಾರಣವಾಗುವ ಪೂರ್ವಜನ್ಮದ ಕೃತ್ಯಗಳು ಎಂದರ್ಥ. ಹೀಗೆಂದು ಸನಾತನ ಬ್ರಾಹ್ಮಣ ಧರ್ಮ ನಂಬುತ್ತದೆ ಮತ್ತು ಇತರರನ್ನು ನಂಬಿಸುತ್ತದೆ. ಅಂದರೆ ಹಿಂದಿನ ಜನ್ಮದಲ್ಲಿ ಮಾಡಿದ ಪುಣ್ಯದಿಂದ ಇಂದಿನ ಜನ್ಮದಲ್ಲಿ ಒಳ್ಳೆಯದಾಗುತ್ತದೆ ಮತ್ತು ಪಾಪ ಕಾರ್ಯಗಳಿಂದ ಕೆಟ್ಟದ್ದಾಗುತ್ತದೆ ಎನ್ನುವ ನಂಬಿಕೆ. ಮನುಷ್ಯ ಮಾಡಿದ ಕರ್ಮವು ಜನ್ಮದಿಂದ ಜನ್ಮಕ್ಕೆ ಹರಿದು ಅದು ಮುಂದಿನ ಜನ್ಮದ ಮೇಲೆ ತನ್ನ ಪರಿಣಾಮವನ್ನು ಬೀರುತ್ತದೆ ಹಾಗೂ ಸತತ ಮರುಜನ್ಮದ ಚಕ್ರವನ್ನು ಉಂಟುಮಾಡುತ್ತದೆ ಎನ್ನುವ ವಾದ. ಪುನರ್ಜನ್ಮದ ಚಕ್ರವು ಅಂತಿಮಗೊಂಡಾಗ ವ್ಯಕ್ತಿಗೆ ಮೋಕ್ಷ ಸಿಗುತ್ತದೆ ಎನ್ನುವ ಪರಿಕಲ್ಪನೆ. ಎಲ್ಲಾ ಮರುಜನ್ಮಗಳಲ್ಲಿ ಮಾನವನಾಗಿಯೆ ಹುಟ್ಟುವ ಭರವಸೆ ಇರುವುದಿಲ್ಲ ಹಾಗೂ ಕೊನೆಗೆ ಈ ಚಕ್ರದಿಂದ ಜೀವನ್ಮುಕ್ತಿ ಪಡೆಯಲು ಮಾನವ ಜನ್ಮದಿಂದ ಮಾತ್ರ ಸಾಧ್ಯ ಎನ್ನುವ ವಾದವೆ ಕರ್ಮಸಿದ್ಧಾಂತ. ಕರ್ಮಸಿದ್ಧಾಂತವನ್ನು ಭಾರತದ ಎಲ್ಲಾ ದರ್ಶನಗಳು ಒಮ್ಮತದಿಂದ ಅಂಗೀಕರಿಸಿವೆ ಎಂದು ಸನಾತನಿಗಳು ವಾದಿಸುತ್ತಾರೆ. ಭಾರತದ ಎಲ್ಲಾ ದರ್ಶನಗಳು ಸನಾತನ ದರ್ಶನದ ಭಾಗ ಎಂದು ವಾದಿಸುವವರು ಹೀಗೆ ಸಮರ್ಥಿಸುವುದು ಸಹಜ.

ಸನಾತನಿಗಳು ತಮ್ಮ ವಾದವನ್ನು ಹೀಗೆ ಹರಿಬಿಡುತ್ತಾರೆ: ಕರ್ಮ ಸಿದ್ಧಾಂತವು ಜೈನ ಹಾಗೂ ಬೌದ್ಧದರ್ಶನಗಳಲ್ಲಿಯೂ ಕಾಣಸಿಗುತ್ತದೆ. ಜೈನ ದರ್ಶನದ ಪ್ರಕಾರ ಕರ್ಮವು ಪ್ರಸಕ್ತವಾಗಿ ಸಾಗುತ್ತಾ ಅದು ಕಾಲುವೆಯಲ್ಲಿ ಹರಿವ ನೀರಿನಂತೆ ಆಸ್ರವವೆಂದೆನಿಸುತ್ತದೆ. ಜೀವ ಹಾಗೂ ಕರ್ಮಗಳ ನಡುವಿನ ಅನ್ಯೋನ್ಯ ಸಂಬಂಧವೇ ಬಂಧನ. ಬಂಧನಕ್ಕೆ ವಿರುದ್ಧವಾಗಿ ಸಂವರವು ಕರ್ಮವನ್ನು ತಡೆಯುತ್ತದೆ. ಆಸ್ರವ ಅಥವಾ ಕರ್ಮದ ಪ್ರಸಕ್ತಿಯಿಂದ ಸಂಸಾರ ಬಂಧನ, ಅದರ ನಿರೋಧ ಅಥವಾ ಸಂಹಾರದಿಂದ ಮೋಕ್ಷ ಅಥವಾ ಕೈವಲ್ಯ. ಜೈನ ಧರ್ಮದಲ್ಲಿ ಸಂಚಿತ ಕರ್ಮ ಮತ್ತು ಪುನರ್ಜನ್ಮಗಳಿವೆ ಎನ್ನುತ್ತಾರೆ ಸನಾತನಿಗಳು. ಆ ಕರ್ಮಗಳ ಕ್ಷಯಕ್ಕಾಗಿ ತೀರ್ಥಂಕರರು ಯೋಗಮಾರ್ಗವನ್ನು ಬೋಧಿಸಿದ್ದಾರಂತೆ. ಆದರೆ ಜೈನರಲ್ಲಿ ಜೀವ, ಅಜೀವ, ಆಸ್ರವ ಬಂಧ, ಸಂವರ, ನಿರ್ಜರ, ಮೋಕ್ಷ ಎಂಬ ಸಪ್ತಪದಾರ್ಥಗಳು ಸ್ಪಷ್ಟವಾಗಿ ಕರ್ಮವನ್ನು ಪ್ರತ್ಯೇಕವಾಗಿ ಒಳಗೊಳ್ಳುವುದಿಲ್ಲ. ಜೈನರ ಮೋಕ್ಷಮಾರ್ಗಗಳೆಂದರೆ ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರಿತ್ರಗಳು. ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಈ ಪಂಚಮಹಾವ್ರತಗಳು ಕರ್ಮವನ್ನು ಹೇಳುವುದಿಲ್ಲ. ಇನ್ನು ಬೌದ್ದ ದರ್ಶನವಂತೂ ಆತ್ಮವು ನಂಬಲ್ಲ, ಕರ್ಮವೂ ನಂಬಲ್ಲ. ಆದರೂ ಸನಾತನಿಗಳು ಬೌದ್ಧದರ್ಶನದಲ್ಲಿಯೂ ಕರ್ಮಸಿದ್ಧಾಂತ ಇದೆ ಎಂದು ವಾದಿಸುತ್ತಾರೆ. ಮಾಡುವಾಗ ಪರಿಜ್ಞಾನವಿಲ್ಲದೆ ಮಾಡಿ, ಅದರ ಫಲ ಒದಗಿದಾಗ ಅಳುಮುಖದಿಂದ ಅನುಭವಿಸುವ ಪ್ರಸ್ತಾಪ ಧಮ್ಮಪದದಲ್ಲಿದೆಯಂತೆ.

Advertisements

ಕರ್ಮಸಿದ್ಧಾಂತ ಆರಂಭವಾಗುವುದೆ ಪಾಪ ಹಾಗೂ ಪುಣ್ಯಗಳಿಂದ. ಮನುಷ್ಯ ತಮ್ಮ ಜೀವನದಲ್ಲಿ ಮಾಡಿದ ಪಾಪ ಹಾಗೂ ಪುಣ್ಯಗಳ ಮೊತ್ತˌ ಬಗೆ ಇವುಗಳ ಆಧಾರದಲ್ಲಿ ಸತ್ತ ಮೇಲೆ ಸ್ವರ್ಗ ಅಥವಾ ನರಕಕ್ಕೆ ಹೋಗುತ್ತಾನೆ ಎನ್ನುವುದು ಸನಾತನಿಗಳ ಅಚಲ ನಂಬಿಕೆ. ಸ್ವರ್ಗ ಅಥವಾ ನರಕವಾಸದ ನಂತರ ಮುಂದೇನು ಎನ್ನುವ ಪ್ರಶ್ನೆಗೆ ಸನಾತನಿಗಳು ಪುನರ್ಜನ್ಮ ಎಂದು ಉತ್ತರಿಸುತ್ತಾರೆ. ಪುನರ್ಜನ್ಮವು ಕರ್ಮದ ಆಧಾರದಲ್ಲಿ ನಿರ್ಣಯಿಲಾಗುತ್ತದಂತೆ. ಅತಿ ಹೆಚ್ಚು ಪುಣ್ಯ ಮಾಡಿದ ಜೀವಿ ಮನುಷ್ಯನಾಗಿಯೂ ಅದರಂತೆ ಉಳಿದ ೮೪ ಲಕ್ಷ ಜೀವ ಸಂಕುಲ ಯಾವುದಾದರೂ ರೂಪದಲ್ಲಿ ಜನ್ಮಿಸುತ್ತಾನೆ ಎನ್ನುತ್ತದೆ ಕರ್ಮಸಿದ್ಧಾಂತ. ಅಂದರೆ ಮನುಷ್ಯ ತಾನು ಈ ಜನ್ಮದಲ್ಲಿ ಮಾಡಿದ ಪಾಪ ಅಥವಾ ಪುಣ್ಯದ ಆಧಾರದಲ್ಲಿ ಸ್ವರ್ಗ ಅಥವಾ ನರಕದಲ್ಲಿ ಕೆಲವು ಸಮಯ ಕಳೆದು ಮತ್ತೆ ಆತ ಯಾವುದಾದರೂ ಜೀವಿಯಲ್ಲಿ ಮರು ಹುಟ್ಟು ಪಡೆಯುತ್ತಾನೆ. ಈ ಮರು ಹುಟ್ಟುವಿಕೆಯ ಚಕ್ರ ಆತ ಅತ್ಯಂತ ಗರಿಷ್ಠ ಮಟ್ಟದ ಪುಣ್ಯ ಮಾಡುವ ತನಕ ಮುಂದುವರೆದು ಕೊನೆಗೆ ಅದು ಜೀವನ್ಮುಕ್ತಿ ಅಥವಾ ಮೋಕ್ಷದಲ್ಲಿ ಕೊನೆಕೊಳ್ಳುತ್ತದಂತೆ. ಆ ಗರಿಷ್ಠ ಪುಣ್ಯ ಸಂಪಾದನೆ ಕೋಟಿಗಳಲ್ಲಿ ಒಬ್ಬರಿಗೂ ಅಸಾಧ್ಯ ಎಂದಾದರೆ ಮೋಕ್ಷದ ಸಾಧ್ಯತೆಗಳು ತೀರ ವಿರಳವೆಂದೆ ಅರ್ಥ. ಅಂದರೆ ಕರ್ಮ ಸಿದ್ಧಾಂತವು ಹೊರಟ ಬಿಂದುವಿನಿಂದ ಹೊರಟು ಮತ್ತದೆ ಬಿಂದುವನ್ನು ಸಂಧಿಸುವ ಎಂದಿಗೂ ಕೊನೆಗೊಳ್ಳದ ಒಂದು ನಿರಂತರ ಚಕ್ರ. ಅದರಲ್ಲಿ ಮುಮ್ಮುಖ ಚಲನೆಗೆ ಅವಕಾಶವೆ ಇಲ್ಲ ಎಂದರ್ಥ.

ಆದರೆ ಹನ್ನೆರಡನೇ ಶತಮಾನದಲ್ಲಿ ನಡೆದ ವಚನ ಚಳವಳಿ ಸನಾತನ ಸಂಸ್ಕೃತಿಯ ಪ್ರತಿಯೊಂದು ಸಿದ್ಧಾಂತವನ್ನು ತಿರಸ್ಕರಿಸಿದೆ, ದಿಕ್ಕರಿಸಿದೆ, ವಿಮರ್ಶಿಸಿದೆ, ಹಾಗೂ ಪರ್ಯಾಯಗಳನ್ನು ನೀಡಿದೆ. ಕರ್ಮಸಿದ್ಧಾಂತದ ಅವಿಭಾಜ್ಯ ಭಾಗಗಳಾದ ಪಾಪ-ಪುಣ್ಯ, ಸ್ವರ್ಗ-ನರಕ ಹಾಗೂ ಪುನರ್ಜನ್ಮಗಳನ್ನು ವಚನಕಾರರು ಸಾರಾಸಗಟಾಗಿ ನಿರಾಕರಿಸುತ್ತಾರೆ. “ಸತ್ಯ ನುಡಿವುದೆ ದೇವಲೋಕ, ಮಿತ್ಯ ನುಡಿಯುವುದೆ ಮರ್ತ್ಯಲೋಕ, ಆಚಾರವೆ ಸ್ವರ್ಗ ಅನಾಚಾರವೆ ನರಕ” ಎಂದು ಸ್ಪಷ್ಟವಾಗಿ ಶರಣರು ಪ್ರತಿಪಾದಿಸುತ್ತಾರೆ. ನದಿ ಒಮ್ಮೆ ಸಮುದ್ರ ಸೇರಿದರೆ ಮತ್ತೆ ಹೇಗೆ ನದಿಯಾಗುವುದಿಲ್ಲವೊ ಹಾಗೆ ಒಮ್ಮೆ ಲಿಂಗ ಸಂಸ್ಕಾರಿಯಾದವನು ಮತ್ತೆ ಜನ್ಮಿಸುವುದಿಲ್ಲ ಎಂದು ಶರಣರು ಖತಿತವಾಗಿ ಹೇಳುತ್ತಾರೆ. ಕರ್ಮ ಮಾಡು ಅದರ ಫಲವನ್ನು ನಿರೀಕ್ಷಿಸಬೇಡ ಎನ್ನುವ ಗೀತೆಯೊಳಗಿನ ನುಡಿಯನ್ನು ಶರಣರು ಅಲ್ಲಗಳೆಯುತ್ತಾರೆ. ಕೆಲವು ವಚನಗಳಲ್ಲಿ ಸ್ವರ್ಗ, ನರಕ, ಪುನರ್ಜನ್ಮ ಹಾಗೂ ಕರ್ಮಗಳ ಕುರಿತು ಶರಣರು ಕೇವಲ ರೂಪಕವಾಗಿ ಪ್ರಸ್ತಾಪಿಸುತ್ತಾರೆ. ಸನಾತನ ಧರ್ಮದಲ್ಲಿರುವ ಎಲ್ಲಾ ಬಗೆಯ ಮೌಢ್ಯಗಳು ಹಾಗೂ ನಂಬಿಕೆಗಳಿಗೆ ವ್ಯತಿರಿಕ್ತವಾದ ಸಿದ್ಧಾಂತ ವಚನಗಳಲ್ಲಿ ಕಾಣಸಿಗುತ್ತದೆ. ಶರಣರು ವೈದಿಕ ಪ್ರಣೀತ ಸ್ವರ್ಗ-ನರಕ, ಪುನರ್ಜನ್ಮ ಹಾಗೂ ಕರ್ಮಸಿದ್ಧಾಂತವನ್ನು ಸಾರಾಸಗಟಾಗಿ ನಿರಾಕರಿಸುತ್ತಾರೆ. ಬಸವಣ್ಣನವರ ಆ ಕುರಿತ ಒಂದು ವಚನ:

“ಕರ್ಮವೆಂಬ ಅಂಕದೊಡನೆ ತೊಡರಿದೆ,
ಭಿನ್ನಪ ಅವಧಾರು! ನಿಮ್ಮಾಳಿನ ಭಾಷೆಯ:
ಕಡೆಗಳಕ್ಕೆ ನೂಂಕುವೆ, ಕೆಡಹುವೆನಂಕವ.
ಕರೆದಡೋ ಎನಿಸದಡೆ ನಿಮ್ಮಾಳಲ್ಲ.
ಶಿವಶರಣೆಂಬ ದಂಡೆಯ ಹೂಡಿ
ಗಣಮೇಳಾಪವೆಂಬ ಅಲಗಿನಿಂದಿರುವೆ,
ಕೂಡಲಸಂಗಮದೇವಾ.”

ಭಾವಾರ್ಥ

ಕರ್ಮ ಸಿದ್ಧಾಂತವನ್ನು ನಾನು ನಂಬುವುದಿಲ್ಲ. ಈ ಸಿದ್ಧಾಂತವೇ ಒಂದು ಟೊಳ್ಳು ಮತ್ತು ಅದರಲ್ಲಿ ಅನೇಕ ಅಡಚಣೆಗಳಿವೆ. ದಯಾನಿಧಿಯಾದ ದೇವ ನಿನ್ನಲ್ಲಿ ವಿಜ್ಞಾಪನೆ ಮಾಡಿಕೊಳ್ಳುತ್ತಿದ್ದೇನೆ. ನಿನ್ನ ಸೇವಕನ ಮಾತನ್ನು ಆಲಿಸು ಎಂದು ದೇವರನ್ನು ಬಸವಣ್ಣನವರು ಬಿನ್ನಹಿಸುತ್ತಾರೆ.

ವೈದಿಕರು ಪ್ರತಿಪಾದಿಸಿದ ಈ ಟೊಳ್ಳು ಕರ್ಮಸಿದ್ಧಾಂತವನ್ನು ಕಡೆಗಣಿಸುವೆ. ಅದನ್ನು ಕಾಲಿನಿಂದ ಆ ಕಡೆಗೆ ನೂಕುವೆ. ನೀನು ಇದನ್ನು ಒಪ್ಪು ಎಂದರೆ ನಾನು ಒಪ್ಪುವುದಿಲ್ಲ. ಏಕೆಂದರೆ ಕೆಟ್ಟದನ್ನು, ಜೀವವಿರೋಧಿ ಸಿದ್ಧಾಂತವನ್ನು ಒಪ್ಪಲು ನಾನು ನಿನ್ನ ಆಳಲ್ಲ ಎಂದು ಬಸವಣ್ಣನವರು ದೇವರನ್ನೇ ನಿಷ್ಠುರವಾಗಿ ಎಚ್ಚರಿಸುತ್ತಾರೆ.

ಈ ಕರ್ಮಸಿದ್ಧಾತವೆಂಬ ಟೊಳ್ಳು ವ್ಯವಸ್ಥೆಯನ್ನು ದಿಕ್ಕರಿಸಿ ಕಾಯಕ ಪ್ರಧಾನವಾದ ವೈಚಾರಿಕ ಶರಣ ಧರ್ಮವನ್ನು ಅನುಭವ ಮಂಟಪವೆಂಬ ಪ್ರಜಾಸಂಸತ್ತಿನಲ್ಲಿ ಶಿವಶರಣರ ಮಂಥನದಿಂದ ಸ್ಥಾಪಿಸಿ ಮುನ್ನುಗ್ಗುತ್ತಿರುವೆ ಎಂದು ಬಸವಣ್ಣನವರು ಸ್ಪಷ್ಟವಾಗಿ ಹೇಳುತ್ತಾರೆ. ಶರಣರನ್ನು ಗಣಂಗಳು ಎನ್ನುತ್ತಾರೆ. ಅವರು ಬರೆದ ವಚನಗಳನ್ನು ಗಣಭಾಷಿತಗಳು ಎನ್ನಲಾಗುತ್ತದೆ. ಆ ಗಣಭಾಷಿತಗಳನ್ನು ಅನುಭವ ಮಂಟಪದಲ್ಲಿ ಮಂಥಿಸುವ ಕ್ರಿಯೆಗೆ ಗಣಮೇಳಾಪ ಎನ್ನಲಾಗುತ್ತದೆ. ಶರಣರನ್ನು ಸೈನಿಕರಂತೆ ಸಂಘಟಿಸಿ ಸನಾತನ ಧರ್ಮದ ವಿರುದ್ಧ ಆಂದೋಲನ ಮಾಡುವೆ ಎನ್ನುವ ಮುನ್ಸೂಚನೆ ಈ ವಚನದಲ್ಲಿ ಬಸವಣ್ಣನವರು ನೀಡಿದ್ದಾರೆ. “ಗಣಮೇಳಾಪವೆಂಬ ಅಲಗಿನಿಂದಿರಿವೆ” ಎನ್ನುವ ನುಡಿ ಸನಾತನಿಗಳ ಸಿದ್ಧಾಂತವನ್ನು ಸಂಘಟಿತವಾಗಿ ನೀಗಿಕೊಳ್ಳುವೆ ಎಂಬ ಅರ್ಥವನ್ನು ನೀಡುತ್ತದೆ.

ಟಿಪ್ಪಣಿ

ಶರಣಧರ್ಮವು ವೈದಿಕರ ಕರ್ಮಸಿದ್ಧಾಂತವನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತದೆ. ಮನುಷ್ಯ ತನ್ನ ಪಾಲಿಗೆ ಬಂದ ಕರ್ಮವನ್ನು ಯಾವ ಫಲಾಪೇಕ್ಷೆಯೂ ಇಲ್ಲದೆ ಮಾಡುತ್ತಿರಬೇಕುˌ ಫಲಾಫಲವನ್ನು ನಿರೀಕ್ಷಿಸಬಾರದು ಎನ್ನುವುದೆ ಕರ್ಮ ಸಿದ್ಧಾಂತ ಜೀವಾಳ. ಈ ಸಿದ್ಧಾಂತವು ಕೆಲಸವನ್ನು ಮಾಡಿ ಸಂಬಳವನ್ನು ಕೇಳಬಾರದು ಎಂದು ಸ್ಪಷ್ಟವಾಗಿ ಹೇಳುತ್ತದೆ. ಉದ್ದೇಶವಿರದ ಎಲ್ಲಾ ಕ್ರಿಯೆಗಳು ನಿರರ್ಥಕ ಅಥವಾ ಉದ್ದೇಶವಿರದೆ ಮಾಡುವ ಯಾವ ಕಾರ್ಯವೆ ಆಗಿರಲಿ ಅವು ಹುಚ್ಚಾಟಕ್ಕೆ ಸಮ ಎನ್ನುತ್ತವೆ ಅನೇಕ ವೈಜ್ಞಾನಿಕ ಸಿದ್ಧಾಂತಗಳು. “ಥಿಯರಿ ಆಫ್ ಯಾಕ್ಷನ್ ಇನ್ ಫಿಲಾಸಪಿ”, “ಥಿಯರಿ ಆಫ್ ಮೋಟಿವೇಷನ್ ಇನ್ ಸೈಕೊಲಾಜಿ” ಮತ್ತು “ಥಿಯರಿ ಆಫ್ ಬಿಹೆವಿಯರಲ್ ಡೈನಾಮಿಕ್ಸ್ ಇನ್ ಸೈಕ್ಯಾಟ್ರಿ” ಎಂಬ ಮೂರು ವೈಜ್ಞಾನಿಕ ಸಿದ್ಧಾಂತಗಳು ಕರ್ಮಸಿದ್ಧಾಂತವನ್ನು ನಿರಾಕರಿಸುತ್ತವೆ ಮತ್ತು ಯಾವುದೆ ಉದ್ದೇಶವಿಲ್ಲದ ಕಾರ್ಯವನ್ನು ನಿರರ್ಥಕ ಅಥವಾ ಹುಚ್ಚಾಟವೆಂದು ಹೇಳುತ್ತವೆ. ಜೀವವಿಕಾಸ ಸಿದ್ಧಾಂತವನ್ನು ಪ್ರತಿಪಾದಿಸಿದ ಪ್ರಸಿದ್ಧ ವಿಜ್ಞಾನಿ ಡಾರ್ವಿನ್ ಕೂಡ ಪಾಪ ಪುಣ್ಯಕ್ಕಾಗಿ ಪೂಜೆ ಪಾಠಗಳು ಮತ್ತು ವ್ರತಗಳು ಮಾಡುವುದನ್ನು ತೀವ್ರವಾಗಿ ಖಂಡಿಸುತ್ತಾನೆ. ನೊಬೆಲ್ ಪಾರಿತೋಷಕ ಪುರಷ್ಕೃತ ಖ್ಯಾತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ತನ್ನ”ಐಡಿಯಾ ಆಫ್ ಜಸ್ಟಿಸ್” ಎಂಬ ಪುಸ್ತಕದಲ್ಲಿ ಕರ್ಮ ಸಿದ್ಧಾಂತವು ಅತೀಂದ್ರಿಯ ತರ್ಕಶಾಸ್ತ್ರದ ವಿರುದ್ಧದ ನಿಲುವು ಎನ್ನುತ್ತಾರೆ. ಈ ಎಲ್ಲಾ ಅಧುನಿಕ ವೈಜ್ಞಾನಿಕ ಸಿದ್ಧಾಂತಗಳು ಸನಾತನಿಗಳ ಕರ್ಮ ಸಿದ್ಧಾಂತವನ್ನು ವೈಜ್ಞಾನಿಕ ತಳಹದಿಯ ಮೇಲೆ ನಿರಾಕರಿಸುತ್ತವೆ.

ಹನ್ನೆರಡನೇ ಶತಮಾನದ ವಚನ ಚಳವಳಿ ಕೂಡ ಮನುಷ್ಯನ ಸುಖ-ದುಖಗಳಿಗೆ ಆತನ ಪೂರ್ವಜನ್ಮದ ಪಾಪ-ಪುಣ್ಯಗಳೆ ಕಾರಣವೆನ್ನುವ ವಾದವನ್ನು ನಿರಾಕರಿಸುತ್ತದೆ. ಪಾಪ-ಪುಣ್ಯಗಳ ಆಧಾರದಲ್ಲಿ ಪ್ರಾಪ್ತವಾಗುತ್ತವೆ ಎನ್ನಲಾದ ಸ್ವರ್ಗ ಹಾಗೂ ನರಕಗಳ ಪರಿಕಲ್ಪನೆಯಾಗಲಿ, ಅದರ ಮುಂದುವರೆದ ಭಾಗವಾದ ಪುನರ್ಜನ್ಮದ ವಾದವಾಗಲಿ ಶರಣರು ಸ್ಪಷ್ಟವಾಗಿ ನಿರಾಕರಿಸುತ್ತಾರೆ. ಬಸವಣ್ಣನವರು ಸನಾತನ ಧರ್ಮದ ಕರ್ಮಸಿದ್ಧಾಂತವನ್ನು ಸಂಪೂರ್ಣವಾಗಿ ನಿರಾಕರಿಸುತ್ತಾರೆ. ಅದಕ್ಕೆ ಪರ್ಯಾಯವಾಗಿ ಅನುಭವ ಮಂಟಪದಲ್ಲಿ ಗಣಮೇಳಾಪ (ಶರಣರ ನಡುವಿನ ಚರ್ಚೆ, ಮಂಥನ) ದ ಮೂಲಕ ಶರಣತತ್ವಗಳನ್ನು ರೂಪಿಸಿ ಅದರ ಅಲಗಿನಿಂದ ಕರ್ಮಸಿದ್ಧಾಂತವನ್ನು ನೀಗಿಕೊಳ್ಳುವೆ ಎಂಬ ಗಣಾಚಾರದ ಮಾತನ್ನು ತಮ್ಮ ಮೇಲಿನ ವಚನದಲ್ಲಿ ಸ್ಪಸ್ಟವಾಗಿ ಪ್ರತಿಪಾದಿಸಿದ್ದಾರೆ.

ಶರಣ ಚಿಂತಕ ಜೆ.ಎಸ್.ಪಾಟೀಲ್
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

Download Eedina App Android / iOS

X